ಮೋದಿ ರೋಡ್ ಶೋ ಮುಗಿದ ಬೆನ್ನಲ್ಲೇ ಬೆಂಗಳೂರಿನ ಎಲ್ಲ ರಸ್ತೆಗಳು ಓಪನ್
ಬೆಂಗಳೂರು, ಮೇ 6: ಶನಿವಾರ ಬೆಂಗಳೂರಿನಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಮುಗಿದ ನಂತರ ನಿರ್ಬಂಧಿಸಲಾಗಿದ್ದ ಎಲ್ಲ ರಸ್ತೆಗಳನ್ನು ಸಂಚಾರಕ್ಕೆ ಟ್ರಾಫಿಕ್ ಪೊಲೀಸರು ಮುಕ್ತಗೊಳಿಸಿರುವುದಾಗಿ ತಿಳಿಸಿದ್ದಾರೆ.
ಸಂಚಾರ ಮಾಹಿತಿ : ಎಲ್ಲಾ ಸಂಚಾರ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ.
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) May 6, 2023
Traffic Update: All diversions have been removed.
ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ಪ್ರಧಾನಿ ಮೋದಿ ಅವರಿಂದ ರೋಡ್ ಶೋ ಇತ್ತು. ಬೆಂಗಳೂರಿನ ಹಲವೆಡೆ ರೋಡ್ ಬಂದ್ ಮಾಡಲಾಗಿದ್ದ ಪರಿಣಾಮ ವಾಹನ ಸವಾರರು ಕಿರಿಕಿರಿಯನ್ನು ಅನುಭವಿಸಿದ್ದರು. ಕೆಲವೆಡೆ ಟ್ರಾಫಿಕ್ ಪೊಲೀಸರು ಹಾಗೂ ಜನರ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು.

ಜೆಪಿ ನಗರದಲ್ಲಿ ಮೋದಿ ರೋಡ್ ಶೋ ಇದ್ದ ಪರಿಣಾಮ ಟ್ರಾಫಿಕ್‌ನಲ್ಲಿ ಆಂಬ್ಯುಲೆನ್ಸ್‌ನಲ್ಲಿ ಸಿಲುಕಿಕೊಂಡಿತ್ತು.
ಬೆಂಗಳೂರಿನಲ್ಲಿ ನರೇಂದ್ರ ಮೊದಿ ಬೃಹತ್ ರೋಡ್ ಶೋಗಾಗಿ ರಸ್ತೆ ಹಾಗೂ ಅಂಗಡಿಗಳನ್ನು ಬೆಳಿಗ್ಗೆಯಿಂದಲೇ ಬಂದ್ ಮಾಡಲಾಗಿದ್ದು ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು.
ಬೆಂಗಳೂರಿನಲ್ಲಿ ಶನಿವಾರ ಸುಮಾರು ಮಧ್ಯಾಹ್ನ 2.15ರ ವೇಳೆಗೆ ಮಳೆ ಕೂಡ ಬಂತು. ಬೆಂಗಳೂರಿನಲ್ಲಿ ವಾರವಿಡೀ ಒಂದು ರೀತಿಯ ಜನರ ಜೀವನ ಇದ್ದರೆ, ವಾರಾಂತ್ಯಕ್ಕೆ ಮತ್ತೊಂದು ರೀತಿಯಾಗಿ ಜನರ ಜೀವನ ನಡೆಯುತ್ತದೆ. ಕೆಲವರು ವಾರವಿಡೀ ದುಡಿದು ವಾರಾಂತ್ಯಕ್ಕೆ ವಿಶ್ರಾಂತಿ ಪಡೆದರೆ, ಮತ್ತೆ ಕೆಲವರು ವಾರಾಂತ್ಯವೇ ದುಡಿದು ಇಡೀ ವಾರದ ಜೀವನ ನಡೆಸುತ್ತಾರೆ. ಮಾರುಕಟ್ಟೆ, ಸಣ್ಣ ವ್ಯಾಪಾರಿಗಳು, ಅಂಗಡಿ ಮುಗ್ಗಟ್ಟುಗಳ ವ್ಯಾಪಾರಸ್ಥರಿಗೆ ವೀಕೆಂಡ್ ವ್ಯಾಪರದಿಂದಲೇ ಬದುಕು. ವೀಕೆಂಡ್ ವ್ಯಾಪಾರ ಕೈ ಕೊಟ್ಟರೆ ವಾರದ ಊಟಕ್ಕೆ ತಣ್ಣೀರು ಬಟ್ಟೆಯೇ ಗತಿ. ಇದು ಬೆಂಗಳೂರಿನಲ್ಲಿ ಬದುಕುವ ಎಷ್ಟೋ ಜನರ ಜೀವನ ಶೈಲಿ.
ಪ್ರಧಾನಿ ಮೋದಿ ಅವರು ಯಾವ ಪುರುಷಾರ್ಥಕ್ಕೆ ರೋಡ್ ಶೋ ಮಾಡುತ್ತಿದ್ದಾರೆ. ಜನರಿಗೆ ತೊಂದರೆ ಕೊಟ್ಟು ರೋಡ್ ಶೋ ಮಾಡುತ್ತಿದ್ದಾರೆ. ಇದರಿಂದ ದುಡಿಯುವ ಜನ ಬೀದಿ ಪಾಲಾಗುತ್ತಿದ್ದಾರೆ ಎಂದು ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಡಿದ್ದರು. ಕಳೆದ ಮೂರ್ನಾಲ್ಕು ದಿನಗಳಿಂದ ಮಳೆ ಶುರುವಾಗಿದ್ದು ಕಳೆದ ದಿನವಷ್ಟೇ ಕೊಂಚ ಬ್ರೇಕ್ ಪಡೆದುಕೊಂಡ ಮಳೆರಾಯ ಇಂದು ಮತ್ತೆ ಧರೆಗಿಳಿಯುವ ಸಾಧ್ಯತೆ ಇತ್ತು. ಬೆಳಿಗ್ಗೆಯಿಂದಲೂ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು ಮಧ್ಯಾಹ್ನ ಅಥವ ಸಂಜೆ ಹೊತ್ತಿಗೆ ಮಳೆಯಾಗುವ ಲಕ್ಷಣಗಳಿದ್ದರಿಂದ ಅಂದುಕೊಂಡಂತೆ ಮಳೆ ಬಂತು.
ಜನರಿಗೆ ವಿಧಿಸಿದ ಕಟ್ಟಪ್ಪಣೆಗಳನ್ನು ನೋಡಿದರೆ ಬೆಂಗಳೂರಿಗೆ ಬಂದಿದ್ದು ಕರೋನಾ ವೈರಸ್ಸಾ ಅಥವಾ ಮೋದಿನಾ ಎಂಬ ಅನುಮಾನ ಮೂಡುತ್ತಿದೆ. ಬೆಂಗಳೂರು ನಿವಾಸಿಗಳನ್ನು ಹೌಸ್ ಅರೆಸ್ಟ್ ಮಾಡಿ ಶೋ ಮಾಡುವಂತಾದ್ದೇನಿದೆ ನರೇಂದ್ರ ಮೋದಿಯವೇ? ಜನರಿಗೆ ಕೋವಿಡ್ ಲಾಕ್‌ಡೌನ್‌ಗಿಂತಲೂ ಮಿಗಿಲಾದ ಹಿಂಸೆ ನೀಡಿ ಕರ್ನಾಟಕ ಬಿಜೆಪಿ ಏನು ಸಾಧಿಸುತ್ತದೆ?" ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿತ್ತು.
ಮೋದಿ ರೋಡ್ ಶೋ ಹಿನ್ನೆಲೆಯಲ್ಲಿ ರಾಜಭವನ ರಸ್ತೆ, ರಮಣಮಹರ್ಷಿ ರಸ್ತೆ, ಮೇಖ್ರೀ ವೃತ್ತ, ಆರ್.ಬಿ.ಐ ಲೇಔಟ್, ಜೆ.ಪಿನಗರ, ರೋಸ್ ಗಾರ್ಡನ್, ಜೆ.ಪಿ ನಗರ, ಶಿರ್ಸಿ ವೃತ್ತ, ಜೆ.ಜೆ ನಗರ, ಜಿನ್ನಿ ಮಿಲ್ ರಸ್ತೆ, ಶಾಲಿನಿ ಮೈದಾನ, ಸೌತ್ ಎಂಡ್ ವೃತ್ತ, ಆರ್ಮುಗಂ ವೃತ್ತ, ಬುಲ್ ಟೆಂಪಲ್ ರಸ್ತೆ, ರಾಮಕೃಷ್ಣಾಶ್ರಮ, ಉಮಾ ಟಾಕೀಸ್, ಟಿ.ಆರ್.ಮೀಲ್, ಚಾಮರಾಜಪೇಟೆ ಮುಖ್ಯರಸ್ತೆ, ಬಾಳೇಕಾಯಿ ಮಂಡಿ, ಕೆ.ಪಿ ಆಗ್ರಹಾರ ಮುಂತಾದ ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿತ್ತು. ಈಗ ಅವೆಲ್ಲಾ ರಸ್ತೆಗಳು ಸಂಚಾರಕ್ಕೆ ಮುಕ್ತಗೊಂಡಿವೆ.












Click it and Unblock the Notifications