ಅಖಂಡ, ಓಲೆಕಾರ್, ಶೆಟ್ಟರ್: ರಾಜ್ಯದಲ್ಲಿ ರಾಜೀನಾಮೆ ಪರ್ವ ಶುರು!
ಬೆಂಗಳೂರು: ಬಿಜೆಪಿ, ಕಾಂಗ್ರೆಸ್ ನಾಯಕರಿಗೆ ರಾಜೀನಾಮೆ ಬಿಸಿ ತಟ್ಟಿದೆ. ಟಿಕೆಟ್ ಸಿಗದ ಕೋಪಕ್ಕೆ ರಾಜೀನಾಮೆಗೆ ಶಾಸಕರು ನಿರ್ಧರಿಸಿದ್ಧಾರೆ. ಪುಲಕೇಶಿ ನಗರ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ, ಹಾವೇರಿ ಮೀಸಲು ಕ್ಷೇತ್ರದ ಬಿಜೆಪಿ ಶಾಸಕ ನೆಹರೂ ಓಲೇಕರ್ ಅವರು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ರಾಜೀನಾಮೆ ಸಲ್ಲಿಸಲಿದ್ದಾರೆ. ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದ ಶಾಸಕ ಜಗದೀಶ್ ಶೆಟ್ಟರ್ ಈಗಾಗಲೇ ರಾಜೀನಾಮೆ ನೀಡಿದ್ದಾರೆ.
ರಾಜ್ಯದಲ್ಲಿ ಗುಜರಾತ್ ಮಾದರಿ ಜಾರಿಗೆ ಮುಂದಾಗಿರುವ ಬಿಜೆಪಿ ನಾಯಕರಿಗೆ ಶಾಸಕರ ಬಂಡಾಯ ತಲೆನೋವು ತಂದಿದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದ ಪ್ರಭಾವಿ ಲಿಂಗಾಯತ ನಾಯಕರೇ ಪಕ್ಷದಿಂದ ಬಂಡಾಯವೆದ್ದು ಹೊರಗೆ ಹೋಗುತ್ತಿರುವುದು ಸಂಚಲನ ಸೃಷ್ಟಿಸಿದೆ. ಈ ಮೂಲಕ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಹೊತ್ತಲ್ಲೇ, ಬಿಜೆಪಿ ನಾಯಕರಿಗೆ ಇವರನ್ನೆಲ್ಲಾ ಪಕ್ಷದಲ್ಲಿ ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದೀಗ ಜಗದೀಶ್ ಶೆಟ್ಟರ್ ರಾಜೀನಾಮೆ ಸಲ್ಲಿಸಿದ್ದು, ನೆಹರೂ ಓಲೇಕರ್ ಕೂಡ ಅದೇ ಹಾದಿ ತುಳಿದಿದ್ದಾರೆ.

ಶೆಟ್ಟರ್ ರಾಜೀನಾಮೆ ನೋವು ತಂದಿದೆ
ಮತ್ತೊಂದು ಕಡೆ ಜಗದೀಶ್ ಶೆಟ್ಟರ್ ರಾಜೀನಾಮೆ ನಿರ್ಧಾರ ನನ್ನ ಮನಸ್ಸಿಗೆ ನೋವು ತಂದಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಈ ಚುನಾವಣೆಯಲ್ಲಿ ಈಶ್ವರಪ್ಪ ಸೇರಿ ಹಲವು ನಾಯಕರಿಗೆ ಟಿಕೆಟ್ ನೀಡಲಾಗಿಲ್ಲ. ಹೊಸಬರಿಗೆ ಅವಕಾಶ ಮಾಡಿಕೊಡುವ ಸಲುವಾಗಿ ಈಶ್ವರಪ್ಪ ಚುನಾವಣಾ ರಾಜಕೀಯಕ್ಕೆ ರಾಜೀನಾಮೆ ನೀಡಿದ್ದಾರೆ. ಜಗದೀಶ್ ಶೆಟ್ಟರ್ ಹಿರಿಯ ನಾಯಕರಾಗಿದ್ದು, ಅವರ ರಾಜೀನಾಮೆ ನೋವು ತಂದಿದೆ. ಇಂತಹ ನಿರ್ಧಾರದಿಂದ ಪಕ್ಷಕ್ಕೆ ಡ್ಯಾಮೇಜ್ ಆಗಲಿದ್ದು, ಡ್ಯಾಮೇಜ್ ಕಂಟ್ರೋಲ್‌ಗೆ ತಂತ್ರ ರೂಪಿಸುತ್ತೇವೆ ಎನ್ನುವ ಮೂಲಕ ಪ್ಲ್ಯಾನ್-ಬಿ ಬಗ್ಗೆ ಪರೋಕ್ಷ ಸುಳಿವು ನೀಡಿದ್ದಾರೆ.
ಶೆಟ್ಟರ್ ಮನವೊಲಿಕೆಗೆ ಬಿಜೆಪಿ ಸರ್ಕಸ್
ಒಂದು ಲೆಕ್ಕಾಚಾರದ ಪ್ರಕಾರ ಜಗದೀಶ್ ಶೆಟ್ಟರ್ ಅವರಿಗೆ ಈ ಬಾರಿ ಟಿಕೆಟ್ ಕೊಡಲೇಬಾರದು ಎಂಬ ನಿರ್ಧಾರಕ್ಕೆ ಬಿಜೆಪಿ ನಾಯಕರು ಬಂದಂತೆ ಕಾಣುತ್ತಿದೆ. ಹೀಗಾಗಿಯೇ ಶೆಟ್ಟರ್ ಅವರಿಗೆ ರಾಜ್ಯಸಭಾ ಸದಸ್ಯ ಸ್ಥಾನದ ಆಫರ್ ನೀಡಲಾಗಿತ್ತು. ಇದರೊಂದಿಗೆ ಕೇಂದ್ರದಲ್ಲಿ ಪ್ರಮುಖ ಜವಾಬ್ದಾರಿ ನೀಡುವ ಭರವಸೆ ನೀಡಲಾಗಿತ್ತು. ದೇಶದ ಯಾವುದಾದರೂ ರಾಜ್ಯದ ರಾಜ್ಯಪಾಲರನ್ನಾಗಿ ಮಾಡುವ ಭರವಸೆಯ ಜೊತೆಗೆ, ಹು-ಧಾ ಸೆಂಟ್ರಲ್ ಕ್ಷೇತ್ರದ ಟಿಕೆಟ್ ಕುಟುಂಬದ ಸದಸ್ಯರಿಗೆ ನೀಡುವ ಬಗ್ಗೆಯೂ ಶೆಟ್ಟರ್ ಗೆ ಆಯ್ಕೆ ನೀಡಲಾಗಿತ್ತು. ಕುಟುಂಬದವರಿಗೆ ಬೇಡ ಎನ್ನುವುದಾದರೆ ಅವರು ಸೂಚಿಸುವ ಕಾರ್ಯಕರ್ತಗೆ ಟಿಕೆಟ್ ನೀಡುವುದಾಗಿ ತಿಳಿಸಿತ್ತು ಬಿಜೆಪಿ ಹೈಕಮಾಂಡ್.
ಟಿಕೆಟ್ ಬೇಕೆಂದು ಶೆಟ್ಟರ್ ಪಟ್ಟು!
ಹೈಕಮಾಂಡ್ ಎಷ್ಟೇ ಆಯ್ಕೆ ನೀಡಿದರು ಅದನ್ನ ಒಪ್ಪದ ಮಾಜಿ ಸಿಎಂ ಹಾಗೂ ಹಾಲಿ ಬಿಜೆಪಿ ಶಾಸಕ ಜಗದೀಶ್ ಶೆಟ್ಟರ್, ತಾವೇ ನೇರವಾಗಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಟಿಕೆಟ್ ನೀಡಲು ಆಗಲ್ಲ ಎಂಬ ನಿರ್ಧಾರದಲ್ಲೇ ಬಿಜೆಪಿ ವರಿಷ್ಠರು ಇದ್ದ ಕಾರಣ ರಾಜೀನಾಮೆ ಅನಿವಾರ್ಯ ಎಂಬ ಪರಿಸ್ಥಿತಿಗೆ ಮಾಜಿ ಸಿಎಂ ಹಾಗೂ ಹಾಲಿ ಬಿಜೆಪಿ ಶಾಸಕ ಜಗದೀಶ್ ಶೆಟ್ಟರ್ ಬಂದಂತೆ ಕಾಣುತ್ತಿದೆ. ಜೊತೆಗೆ ಶೆಟ್ಟರ್ ಅವರನ್ನು ಪಕ್ಷಕ್ಕೆ ವೆಲ್‌ಕಂ ಮಾಡಲು ವಿಪಕ್ಷ ನಾಯಕರು ಸಜ್ಜಾಗಿದ್ದು, ಬಿಜೆಪಿಗೆ ಈ ಭಾಗದಲ್ಲಿ ಹಿನ್ನಡೆಯಾಗುವ ಲಕ್ಷಣಗಳು ಕಾಣುತ್ತಿವೆ.

ಕಾಂಗ್ರೆಸ್ ಸೇರಲು ಶೆಟ್ಟರ್ ಸಿದ್ಧತೆ?
ಈಗಾಗಲೇ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿಗೆ ಗುಡ್‌ಬೈ ಹೇಳುವ ಮೂಲಕ ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಇದೀಗ ಮತ್ತೊಬ್ಬ ಪ್ರಭಾವಿ ಲಿಂಗಾಯತ ಸಮುದಾಯದ ನಾಯಕ ಜಗದೀಶ್ ಶೆಟ್ಟರ್ ಕೂಡ ಇದೇ ನಿರ್ಧಾರ ಕೈಗೊಳ್ಳುತ್ತಾರೆ ಎನ್ನಲಾಗುತ್ತಿದೆ. ಜಗದೀಶ್ ಶೆಟ್ಟರ್ ರಾಜೀನಾಮೆ ಸಲ್ಲಿಸಿ, ಇಂದು ಸಂಜೆ ವೇಳೆಗೆ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಮಾತು ಬಿಜೆಪಿ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಕೇಸರಿ ಪಾಳಯಕ್ಕೆ. ಉತ್ತರ ಕರ್ನಾಕಟದಲ್ಲಿ ಬಿಜೆಪಿಗೆ ಇದು ದೊಡ್ಡ ಹೊಡೆತ ನೀಡಲಿದೆ ಎಂಬುದು ರಾಜಕೀಯ ಪರಿಣತರ ಲೆಕ್ಕಾಚಾರ.
ದಳಪತಿಗಳ ಕೋಟೆಗೆ ಬಿಜೆಪಿ ಶಾಸಕ
ಇದಿಷ್ಟೂ ಜಗದೀಶ್ ಶೆಟ್ಟರ್ ವಿಚಾರವಾದರೆ, ಮತ್ತೊಂದು ಕಡೆ ಹಾವೇರಿ ಮೀಸಲು ಕ್ಷೇತ್ರದ ಬಿಜೆಪಿ ಟಿಕೆಟ್ ಸಿಗದೆ ಬಂಡಾಯವೆದ್ದಿರುವ ಶಾಸಕ ನೆಹರು ಓಲೇಕಾರ್ ಬಿಜೆಪಿಗೆ ರಾಜೀನಾಮೆ ಸಲ್ಲಿಸಿ, ಸಂಜೆ ಜೆಡಿಎಸ್ ಕಚೇರಿಗೆ ತೆರಳಿ ಅಧಿಕೃತವಾಗಿ ದಳಪತಿಗಳ ಕೈಹಿಡಿಯಲಿದ್ದಾರೆ ಎನ್ನಲಾಗಿದೆ. ಶಿರಸಿಗೆ ತೆರಳಿ ಸ್ವೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ರಾಜೀನಾಮೆ ಸಲ್ಲಿಸಿ, ಅಲ್ಲಿಂದ ಬೆಂಗಳೂರಿಗೆ ತೆರಳಿ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸುವೆ ಎಂದು ತಿಳಿಸಿದ್ದಾರೆ ನೆಹರು ಓಲೇಕಾರ್. ಇದೆಲ್ಲಾ ಮುಗಿದ ಬಳಿಕ JDSಗೆ ಓಲೇಕಾರ್ ಅಧಿಕೃತ ಎಂಟ್ರಿ ಕೊಡಲಿದ್ದಾರೆ.
ಅಖಂಡ ಶ್ರೀನಿವಾಸಮೂರ್ತಿ ನಿರ್ಧಾರವೇನು?
ಬಿಜೆಪಿ ನಾಯಕರು ಟಿಕೆಟ್ ಬಂಡಾಯದ ಬಿಸಿ ಎದುರಿಸುತ್ತಿದ್ದರೆ, ಮತ್ತೊಂದ್ಕಡೆ ಕಾಂಗ್ರೆಸ್ ಕೂಡ ಅದೇ ಒದ್ದಾಟದಲ್ಲಿದೆ. ಕಾಂಗ್ರೆಸ್ ಟಿಕೆಟ್ ಸಿಗದ ಕಾರಣಕ್ಕೆ ಅಲ್ಲೂ ಬಂಡಾಯದ ಬಾವುಟ ಹಾರುತ್ತಿದೆ. ಪುಲಕೇಶಿ ನಗರ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ರಾಜೀನಾಮೆಗೆ ಮುಂದಾಗಿದ್ದಾರೆ. ಈ ಮೂಲಕ ಪಕ್ಷದ ನಾಯಕರ ವಿರುದ್ಧ ಗರಂ ಆಗಿದ್ದಾರೆ ಅಖಂಡ. 3ನೇ ಪಟ್ಟಿಯಲ್ಲೂ ಕಾಂಗ್ರೆಸ್ ಟಿಕೆಟ್ ಸಿಗದಿರುವ ಕಾರಣಕ್ಕೆ ಶಾಸಕ ಅಖಂಡ ಸಿಟ್ಟು ಮಾಡಿಕೊಂಡಿದ್ದಾರೆ. ಬೆಂಗಳೂರಿನ ಪ್ರಭಾವಿ ಶಾಸಕರೇ ಅಖಂಡ ಟಿಕೆಟ್‌ಗೆ ಅಡ್ಡಿ ಮಾಡುತ್ತಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ.

ಒಟ್ಟಾರೆ ಹೇಳುವುದಾದರೆ 2023ರ ಕರ್ನಾಟಕ ವಿಧಾನಸಭೆ ಚುನಾವಣೆ ರಂಗೇರಿದೆ. ಅದರಲ್ಲೂ ಈ ಮಟ್ಟಿಗಿನ ಶಾಸಕರ ರಾಜೀನಾಮೆ ಪರ್ವ ಹಿಂದೆ ಎಂದೂ ರಾಜ್ಯದ ಜನತೆ ಕಂಡಿಲ್ಲ. ಇದರ ಜೊತೆಗೆ ಪಕ್ಷಾಂತರ ಪರ್ವ ಕೂಡ ಜೋರಾಗಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಬಂಡಾಯ ಎದ್ದಿರುವ ನಾಯಕರನ್ನ ತಮ್ಮ ಪಕ್ಷದಲ್ಲೇ ಉಳಿಸಿಕೊಳ್ಳಲು ಸರ್ಕಸ್ ಆರಂಭಿಸಿದ್ದಾರೆ. ಆದರೆ ಅದು ವರ್ಕೌಟ್ ಆಗದೇ ಇದ್ದಾಗ ಪಕ್ಷ ತೊರೆದು ಎದುರಾಳಿ ಪಕ್ಷ ಸೇರುತ್ತಿದ್ದಾರೆ.












Click it and Unblock the Notifications