ಹಾಲಿನ ದರ ಏರಿಕೆ: ಬಿಸಿ ಬಿಸಿ ಕಾಫಿ, ಟೀ ದರಗಳು ಹೆಚ್ಚಳ
ಬೆಂಗಳೂರು, ಜೂನ್ 25: ಕೆಎಂಎಫ್ ನಂದಿನಿ ಹಾಲಿನ ದರವನ್ನು ಏರಿಕೆ ಮಾಡಿದೆ. 2 ರೂ. ಹಾಲಿನ ದರ ಏರಿಕೆಯಾಗಿದ್ದು, ಜೂನ್ 26ರ ಬುಧವಾರದಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ ಎಂದು ತಿಳಿಸಲಾಗಿದೆ. ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ದರ ಏರಿಕೆ ಬಳಿಕ ಜನರಿಗೆ ಮತ್ತೊಂದು ದರ ಏರಿಕೆಯ ಬಿಸಿ ಮುಟ್ಟಿಸಿದೆ.
ಹಾಲಿನ ದರ ಏರಿಕೆ ಬೆನ್ನಲ್ಲೇ ಹೋಟೆಲ್‌ಗಳಲ್ಲಿ ಕಾಫಿ, ಟೀ ದರವನ್ನೂ ಪರಿಷ್ಕರಿಸಲು ಬೆಂಗಳೂರು ಹೋಟೆಲ್ ಅಸೋಸಿಯೇಷನ್ ತೀರ್ಮಾನಿಸಿದೆ. ಕಾಫಿ, ಟೀ ದರದಲ್ಲಿ 2 ರೂ. ಏರಿಕೆಯಾಗಲಿದೆ. ಬುಧವಾರ ಬೆಳಗ್ಗೆಯಿಂದ ಹೋಟೆಲ್ ಬಾಗಿಲಿಗೆ ಹೋಗುವಾಗ ಒಮ್ಮೆ ಜೇಬು ನೋಡಿಕೊಳ್ಳಿ.

ಬೆಂಗಳೂರು ನಗರ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ. ಸಿ. ರಾವ್ ಈ ಕುರಿತು ಮಾತನಾಡಿದ್ದಾರೆ. ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ದರದಲ್ಲಿ ಏರಿಕೆ ಮಾಡಿದ ಬಳಿಕ ಈಗ ಹಾಲಿನ ದರ ಏರಿಕೆ ಮಾಡಿರುವುದನ್ನು ಖಂಡಿಸಿದ್ದಾರೆ.
ಪಿ. ಸಿ. ರಾವ್ ಹೇಳಿದ್ದೇನು?; ಪಿ. ಸಿ. ರಾವ್ ಮಾತನಾಡಿ, "ಈಗಾಗಲೇ ಕಾಫಿ, ಟೀ, ಪುಡಿ ದರಗಳು ಹೆಚ್ಚಾಗಿವೆ. ಈಗ ಹಾಲಿನ ದರವೂ ಏರಿಕೆಯಾಗಿದೆ. ಆದ್ದರಿಂದ ಹೋಟೆಲ್‌ಗಳು ಕಾಫಿ, ಟೀ ದರಗಳನ್ನು ಏರಿಕೆ ಮಾಡುವುದು ಅನಿವಾರ್ಯ" ಎಂದು ಹೇಳಿದರು.
ಬೆಂಗಳೂರು ನಗರದ ದರ್ಶನಿಗಳು, ಹೋಟೆಲ್‌ಗಳಲ್ಲಿ ಕಾಫಿ, ಟೀ ದರಗಳಲ್ಲಿ ವ್ಯತ್ಯಾಸವಿದೆ. ಸದ್ಯದ ಮಾಹಿತಿ ಪ್ರಕಾರ ಕಾಫಿ, ಟೀ ಬೆಲೆ 10 ರೂ. ಇದ್ದರೆ 12 ರೂ. ತನಕ ಏರಿಕೆಯಾಗಲಿದೆ. 15 ರೂ. ಇದ್ದರೆ 17 ರೂ. ಆಗುವ ನಿರೀಕ್ಷೆ ಇದೆ.
ಬೆಂಗಳೂರು ನಗರ ಹೋಟೆಲ್ ಮಾಲೀಕರ ಸಂಘ ಶೀಘ್ರವೇ ಸಭೆಯನ್ನು ನಡೆಸಿ ಈ ಕುರಿತು ಅಂತಿಮ ತೀರ್ಮಾನವನ್ನು ಕೈಗೊಳ್ಳಲಿದ್ದಾರೆ. ಈ ಬಗ್ಗೆ ಸಂಘದಿಂದ ಈ ತನಕ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಸದ್ಯಕ್ಕೆ ಬೆಲೆ ಏರಿಕೆ ಮಾಡುವುದು ಮಾಲೀಕರ ವಿವೇಚನೆಗೆ ಬಿಟ್ಟ ವಿಚಾರ ಎಂದು ಪಿ. ಸಿ. ರಾವ್ ಹೇಳಿದರು.
ಕೆಎಂಎಫ್ ಆದೇಶದಲ್ಲಿ ಏನಿದೆ?: ಹಾಲಿನ ದರ ಏರಿಕೆ ಆದೇಶದಲ್ಲಿ ಕೆಎಂಎಫ್ ಹೈನೋದ್ಯಮದಲ್ಲಿ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳವು ರಾಷ್ಟ್ರದಲ್ಲಿಯೇ ಎರಡನೆಯ ದೊಡ್ಡ ಮಹಾಮಂಡಳವಾಗಿದ್ದು, ದಕ್ಷಿಣ ಭಾರತದ ನಂಬರ್ 1 ಸಹಕಾರ ಹಾಲು ಮಹಾಮಂಡಳವಾಗಿ ಕಾರ್ಯನಿರ್ವಹಿಸುತ್ತಿರುತ್ತದೆ ಎಂದು ಹೇಳಿದೆ.
ಕಹಾಮವು ಕಳೆದ 5 ದಶಕಗಳಿಂದಲೂ ತನ್ನ ಸದಸ್ಯ ಹಾಲು ಒಕ್ಕೂಟಗಳ ಮೂಲಕ ರಾಜ್ಯದ 27 ಲಕ್ಷಕ್ಕೂ ಹೆಚ್ಚು ಹೈನುಗಾರರಿಂದ ಹಾಲು ಖರೀದಿಸಿ, ಸಂಸ್ಕರಿಸಿ, 'ಗೋವಿನಿಂದ ಗ್ರಾಹಕರವರೆಗೆ' ಎಂಬ ಶೀರ್ಷಿಕೆಯನ್ನು ಹೊತ್ತು 'ನಂದಿನಿ' ಬ್ರಾಂಡ್‌ನಲ್ಲಿ ಉತ್ಕೃಷ್ಟ ಗುಣಮಟ್ಟದ ವಿವಿಧ ಮಾದರಿಯ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಗ್ರಾಹಕರ ಅಭಿರುಚಿಗೆ ತಕ್ಕಂತೆ ಪರಿಚಯಿಸಿರುತ್ತದೆ.
ಪ್ರಸ್ತುತ ಸುಗ್ಗಿ ಕಾಲವಾಗಿರುವುದರಿಂದ ಎಲ್ಲಾ ಜಿಲ್ಲಾ ಹಾಲು ಒಕ್ಕೂಟಗಳ ವ್ಯಾಪ್ತಿಯಲ್ಲಿ ಹಾಲಿನ ಶೇಖರಣೆಯು ಪ್ರತಿ ದಿನ ಹೆಚ್ಚಾಗುತ್ತಿದ್ದು, ಪ್ರಸ್ತುತ ಶೇಖರಣೆಯೂ ಒಂದು ಕೋಟಿ ಲೀಟರ್‌ಗಳ ಹತ್ತಿರ ತಲುಪಿರುತ್ತದೆ. ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಹೆಚ್ಚುವರಿಯಾಗಿ ಪ್ರತಿ ಅರ್ಧ ಲೀಟರ್ (500) ಮತ್ತು ಒಂದು ಲೀಟರ್ (2000ML) ಪ್ಯಾಕೇಟ್‌ಗಳಿಗೆ ಮಾತ್ರ 50 ಮಿಲಿ ಹಾಲನ್ನು ಹೆಚ್ಚುವರಿ ನೀಡುವುದರೊಂದಿಗೆ ಪ್ರತಿ ಪ್ಯಾಕೇಟ್‌ಗಳ ದರವನ್ನು ರೂ.2 ರಂತೆ ಹೆಚ್ಚಳ ಮಾಡಲಾಗುತ್ತಿದೆ.












Click it and Unblock the Notifications