ಕಂದಾಯ ಸಚಿವರ ಟ್ವೀಟ್: ರಸ್ತೆ ರಿಪೇರಿ ಕೈಗೊಂಡ ಬಿಬಿಎಂಪಿ!
ಬೆಂಗಳೂರು, ಆಗಸ್ಟ್ 18: ಬೆಂಗಳೂರು ನಗರದ ರಸ್ತೆಗಳಲ್ಲಿ ಎಷ್ಟು ಗುಂಡಿಗಳಿವೆ? ಎಂಬುದು ವಾಹನ ಸವಾರರಿಗೆ ಗೊತ್ತು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ರಸ್ತೆ ಗುಂಡಿ ಮುಚ್ಚುವ ಕಾರ್ಯವನ್ನು ಕೈಗೊಂಡಿಲ್ಲ. ಜನರ ಮನವಿ ಬಿಡಿ, ಕರ್ನಾಟಕದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರೇ ಟ್ವೀಟ್ ಮಾಡಿ ರಸ್ತೆಗುಂಡಿಯನ್ನು ಮುಚ್ಚಿ ಎಂದು ಮನವಿ ಮಾಡಿದ್ದು, ಚರ್ಚೆಗೆ ಕಾರಣವಾಗಿತ್ತು.
ಸಚಿವ ಕೃಷ್ಣ ಬೈರೇಗೌಡರ ಟ್ವೀಟ್ ಬಳಿಕ ಬಿಬಿಎಂಪಿ ರಸ್ತೆ ರಿಪೇರಿ ಕೆಲಸವನ್ನು ಕೈಗೊಂಡಿದೆ. ಈ ಹಿನ್ನಲೆಯಲ್ಲಿ ಬೆಂಗಳೂರು ನಗರ ಸಂಚಾರ ಪೊಲೀಸರು ವಾಹನ ಸವಾರರಿಗೆ ಕೆಲವು ಮಾಹಿತಿಯನ್ನು ನೀಡಿದ್ದಾರೆ, ಮುಖ್ಯಪಥವನ್ನು ಪರ್ಯಾಯ ರಸ್ತೆಯನ್ನಾಗಿ ಬಳಕೆ ಮಾಡಿ, ಸಹಕರಿಸಲು ಕೋರಿದ್ದಾರೆ.

ಸಚಿವರ ಟ್ವೀಟ್ ಏನಿತ್ತು?: ಆಗಸ್ಟ್ 14ರಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದರು. 'ವೀರಣ್ಣಪಾಳ್ಯದಿಂದ ಹೆಬ್ಬಾಳ ಕಡೆಗಿನ ರಿಂಗ್ ರೋಡಿನ ಸರ್ವಿಸ್ ರಸ್ತೆಯ ವಿಡಿಯೋವನ್ನು ಸಾರ್ವಜನಿಕರು ನನಗೆ ಕಳಿಸಿದ್ದಾರೆ. ಬಿಬಿಎಂಪಿ ಆಯುಕ್ತರು ಅಥವಾ ಬಿಎಂಆರ್‌ಸಿಎಲ್ ಎಂಡಿ ಯಾರಾದ್ರೂ ಆಗಲಿ ದಯವಿಟ್ಟು ಗುಂಡಿಯನ್ನು ಮುಚ್ಚಿ ರಸ್ತೆ ದುರಸ್ಥಿ ಮಾಡಿ ಸಾರ್ವಜನಿಕರ ಸಮಸ್ಯೆಯನ್ನು ಪರಿಹರಿಸಿ' ಎಂದು ಬಿಬಿಎಂಪಿ, ಬಿಎಂಆರ್‌ಸಿಎಲ್ ಟ್ಯಾಗ್ ಮಾಡಿದ್ದರು.
ಈಗ ಈ ರಸ್ತೆ ರಿಪೇರಿ ಕಾರ್ಯವನ್ನು ಬಿಬಿಎಂಪಿ ಕೈಗೆತ್ತಿಕೊಂಡಿದೆ. ಆದ್ದರಿಂದ ವಾಹನ ಸಂಚಾರದಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ. ಈ ಕುರಿತು ಬೆಂಗಳೂರು ಸಂಚಾರಿ ಪೊಲೀಸರು ಮಾಹಿತಿ ನೀಡಿದ್ದು, ಹೆಬ್ಬಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ವೀರಣ್ಣವಾಳ್ಯದಿಂದ ಹೆಬ್ಬಾಳ ವೃತ್ತದ ಕಡೆಗಿನ ಸರ್ವಿಸ್ ರಸ್ತೆಯಲ್ಲಿ ದಿನಾಂಕ 18/08/2024 ರಿಂದ 21/08/2024ರವರೆಗೆ ಬಿಬಿಎಂಪಿ ವತಿಯಿಂದ ರಸ್ತೆ ಗುಂಡಿಗಳನ್ನು ಮುಚ್ಚುವ ಕಾಮಗಾರಿ ನಡೆಯಲಿದೆ.
ಸದರಿ ದಿನಾಂಕಗಳಂದು ರಾತ್ರಿ 10 ಗಂಟೆಯಿಂದ ಮುಂಜಾನೆ 6 ಗಂಟೆಯ ವರೆಗೆ ಸರ್ವಿಸ್ ರಸ್ತೆಯು ಸಾರ್ವಜನಿಕರ ಬಳಕೆಗೆ ಲಭ್ಯವಿರುವುದಿಲ್ಲ. ವೀರಣ್ಣಪಾಳ್ಯ ಕಡೆಯಿಂದ ಹೆಬ್ಬಾಳದ ಕಡೆಗೆ ಸಂಚರಿಸುವ ವಾಹನ ಸವಾರರು ಹೊರ ವರ್ತುಲ ರಸ್ತೆಯ ಮುಖ್ಯ ಪಥವನ್ನೇ ಪರ್ಯಾಯ ರಸ್ತೆಯನ್ನಾಗಿ ಬಳಸಲು ಕೋರಿದೆ ಎಂದು ಹೇಳಿದ್ದಾರೆ.
ಆರ್. ಅಶೋಕ ಟೀಕೆ: ಕಂದಾಯ ಸಚಿವ ಕೃಷ್ಣ ಬೈರೇಗೌಡ ರಸ್ತೆ ಗುಂಡಿ ಮುಚ್ಚುವಂತೆ ಟ್ವೀಟ್ ಮಾಡಿದ್ದು ವಿರೋಧ ಪಕ್ಷಗಳ ವ್ಯಂಗ್ಯಕ್ಕೆ ಕಾರಣವಾಗಿತ್ತು. ಈ ಕುರಿತು ವಿರೋಧ ಪಕ್ಷದ ನಾಯಕ ಆರ್. ಅಶೋಕ ಟ್ವೀಟ್ ಮಾಡಿ ಸರ್ಕಾರವನ್ನು ಟೀಕಿಸಿದ್ದರು.
'ಕಂದಾಯ ಸಚಿವರು ಮತ್ತು ಬ್ಯಾಟರಾಯನಪುರ ಶಾಸಕರಾದ ಶ್ರೀ ಕೃಷ್ಣ ಭೈರೇಗೌಡರು ಅತ್ಯಂತ ಅಹಾಯಕರಾಗಿ ಬಿಬಿಎಂಪಿ ಮತ್ತು ಬಿಎಂಆರ್ ಸಿಎಲ್ ಅಧಿಕಾರಿಗಳಿಗೆ ರಸ್ತೆ ಗುಂಡಿ ಮುಚ್ಚುವಂತೆ ಸಾಮಾಜಿಕ ಜಾಲತಾಣದಲ್ಲಿ ಬೇಡಿಕೊಳ್ಳುವುತ್ತಿರುವುದನ್ನು ನೋಡಿದರೆ ಈ ಕರ್ನಾಟಕ ಕಾಂಗ್ರೆಸ್
ಸರ್ಕಾರ ಎಂತಹ ದರಿದ್ರ ನಾಲಾಯಕ್ ಸರ್ಕಾರ ಎಂಬುದು ಸ್ಪಷ್ಟವಾಗುತ್ತದೆ' ಎಂದು ಹೇಳಿದ್ದರು.
'ಸಚಿವ ಕೃಷ್ಣ ಬೈರೇಗೌಡ ಅವರೇ, ಆದೇಶ ಮಾಡಿ ಕೆಲಸ ಮಾಡಿಸಬೇಕಾದ ಸ್ಥಾನದಲ್ಲಿರುವ ತಾವು ಬಿಬಿಎಂಪಿ ಅಧಿಕಾರಿಗಳಿಗೆ ಇಷ್ಟೊಂದು ಅಸಹಾಯಕರಾಗಿ ಅಂಗಲಾಚುತ್ತಿದ್ದೀರಲ್ಲ, ಬೆಂಗಳೂರು ಅಭಿವೃದ್ಧಿ ಸಚಿವರು ತಮ್ಮ ಕೆಲಸ ಮಾಡುತ್ತಿಲ್ಲ ಎಂದು ಪರೋಕ್ಷವಾಗಿ ಟಾಂಗ್ ಕೊಡುತ್ತಿದ್ದೀರೋ? ಅಥವಾ ಇದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರ ವಿರುದ್ಧ ಬಹಿರಂಗ ಬಂಡಾಯದ ಮುನ್ಸೂಚನೆಯೋ?' ಎಂದು ಪ್ರಶ್ನೆ ಮಾಡಿದ್ದರು.
'ಸಿಎಂ ಸಿದ್ದರಾಮಯ್ಯನವರೇ, ತಮ್ಮ ಸಂಪುಟದಲ್ಲಿ ಸಚಿವರ ಮಧ್ಯೆ ಪರಸ್ಪರ ಒಂದು ಸ್ವಲ್ಪವೂ ತಾಳಮೇಳವಿಲ್ಲವೇ? ಒಬ್ಬ ಸಚಿವರು ಮತ್ತೊಬ್ಬ ಸಚಿವರ ಕರೆ ಸ್ವೀಕರಿಸುವುದಿಲ್ಲವೇ? ನಿಮ್ಮ ಸರ್ಕಾರದಲ್ಲಿ ಏನಾಗುತ್ತಿದೆ?' ಎಂದು ಆರ್. ಅಶೋಕ ಕೇಳಿದ್ದರು.












Click it and Unblock the Notifications