Namma Metro: ದರ ಏರಿಕೆ ಬಳಿಕ ಮೆಟ್ರೋ ಪ್ರಯಾಣಿಕರ ಸಂಖ್ಯೆ ಕುಸಿತ, ಬಿಎಂಟಿಸಿ ಏರಿಕೆ
ಬೆಂಗಳೂರು, ಫೆಬ್ರವರಿ 12: ಉದ್ಯಾನ ನಗರಿ ಬೆಂಗಳೂರಿನ ಜೀವನಾಡಿಯಾದ ನಮ್ಮ ಮೆಟ್ರೋ ಪ್ರಯಾಣ ದರವನ್ನು ಏರಿಕೆ ಮಾಡಲಾಗಿದೆ. 2017ರ ಬಳಿಕ ಮೊದಲ ಬಾರಿಗೆ ಪ್ರಯಾಣ ದರ ಏರಿಕೆ ಮಾಡಲಾಗಿದ್ದು, ಫೆಬ್ರವರಿ 9ರ ಭಾನುವಾರದಿಂದಲೇ ಪರಿಷ್ಕೃತ ದರ ಜಾರಿಗೆ ಬಂದಿದೆ. ಪ್ರಯಾಣ ದರ ಏರಿಕೆ ಕುರಿತು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆ ವಾಕ್ಸಮರ ನಡೆಯುತ್ತಿದೆ.
ಬಿಎಂಆರ್‌ಸಿಎಲ್ ರಚನೆ ಮಾಡಿದ್ದ ದರ ಪರಿಷ್ಕರಣೆ ಸಮಿತಿಯ ಶಿಫಾರಸ್ಸಿನಂತೆ ನಮ್ಮ ಮೆಟ್ರೋ ಪ್ರಯಾಣ ದರವನ್ನು ಪರಿಷ್ಕರಣೆ ಮಾಡಲಾಗಿದೆ. ಸ್ಮಾರ್ಟ್ ಕಾರ್ಡ್‌ಗಳ ಮೇಲೆ ಶೇ 5ರಷ್ಟು ರಿಯಾಯಿತಿ ಮುಂದುವರಿಯುತ್ತದೆ ಎಂದು ಬಿಎಂಆರ್‌ಸಿಎಲ್ ಸ್ಪಷ್ಟಪಡಿಸಿತ್ತು.

ಪ್ರಯಾಣಿಕರ ಸಂಖ್ಯೆ ಕುಸಿತ: ನಮ್ಮ ಮೆಟ್ರೋದಲ್ಲಿ ದರ ಹೆಚ್ಚಳದ ಬಳಿಕ 0-2 ಕಿ. ಮೀ. ಪ್ರಯಾಣಕ್ಕೆ 10 ರೂ. ಮತ್ತು 30 ಕಿ. ಮೀ. ಪ್ರಯಾಣಕ್ಕೆ 90 ರೂ. ಪಾವತಿ ಮಾಡಬೇಕಿದೆ. ಪರಿಷ್ಕೃತ ದರವನ್ನು ನೋಡಿದ ಜನರು, ಮೆಟ್ರೋಗಿಂತ ಬಿಎಂಟಿಸಿ ಬಸ್, ಖಾಸಗಿ ವಾಹನಗಳೇ ಉತ್ತಮ ಎಂದು ಹೇಳುತ್ತಿದ್ದಾರೆ.
ದರ ಏರಿಕೆ ಬಳಿಕ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಫೆಬ್ರವರಿ 3ರಂದು ದರ ಏರಿಕೆಗೂ ಮೊದಲು ಮೆಟ್ರೋ ಪ್ರಯಾಣಿಕರ ಸಂಖ್ಯೆ 8.7 ಲಕ್ಷವಾಗಿತ್ತು. ಆದರೆ ಫೆಬ್ರವರಿ 10ರಂದು ದರ ಏರಿಕೆ ಬಳಿಕ ಇದು 8.2 ಲಕ್ಷಕ್ಕೆ ಇಳಿಕೆಯಾಗಿದೆ. ಮಾಹಿತಿಗಳ ಪ್ರಕಾರ ಶೇ 4ರಷ್ಟು ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದೆ.
ಮೆಟ್ರೋ ದರ ಏರಿಕೆ ಬಳಿಕ ಬಿಎಂಟಿಸಿ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಫೆಬ್ರವರಿ 3ರ ಸೋಮವಾರ ಬಿಎಂಟಿಸಿ ಪ್ರಯಾಣಿಕರ ಸಂಖ್ಯೆ 36.62 ಲಕ್ಷ. ಫೆಬ್ರವರಿ 10ರ ಸೋಮವಾರ ಇದು 37.22 ಲಕ್ಷಕ್ಕೆ ಏರಿಕೆಯಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಮೆಟ್ರೋ ಖಾಲಿ ಖಾಲಿ ಎಂದು ರೀಲ್ಸ್ ಮಾಡಿ ಹಾಕಲಾಗುತ್ತಿದೆ. ದರ ಏರಿಕೆ ಬಗ್ಗೆ ಈಗಾಗಲೇ ಜನರು ಆಕ್ರೋಶಗೊಂಡಿದ್ದು, ಖಾಸಗಿ ವಾಹನಗಳೇ ಉತ್ತಮ ಎಂದು ಹೇಳುತ್ತಿದ್ದಾರೆ. ಟಿಕೆಟ್ ರಹಿತ ಆದಾಯ ಸಂಗ್ರಹಕ್ಕೆ ಬಿಎಂಆರ್‌ಸಿಎಲ್ ಗಮನ ನೀಡಬೇಕು ಎಂದು ಬಿಜೆಪಿ ನಾಯಕರು ಸಲಹೆಗಳನ್ನು ನೀಡುತ್ತಿದ್ದಾರೆ.
ಜನರಿಂದ ನಿರಂತರವಾಗಿ ನಾವು ಪ್ರತಿಕ್ರಿಯೆಗಳನ್ನು ಸಂಗ್ರಹ ಮಾಡುತ್ತಿದ್ದೇವೆ. ಕೆಲವು ಕಿ. ಮೀ. ದೂರದ ಪ್ರಯಾಣದ ದರಗಳು ಅಧಿಕವಾಗಿವೆ. ನಾವು ಈ ಕುರಿತು ಗಮನ ಹರಿಸುತ್ತೇವೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳಿದ್ದಾರೆ.
ಸಿದ್ದರಾಮಯ್ಯ ಖಡಕ್ ತಿರುಗೇಟು: ಮೆಟ್ರೋ ದರ ಏರಿಕೆ ವಿಚಾರದಲ್ಲಿ ಪ್ರತಿಪಕ್ಷ ಬಿಜೆಪಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕೆಗಳನ್ನು ಮಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, 'ಮೆಟ್ರೋ ಪ್ರಯಾಣ ದರ ಹೆಚ್ಚಳವನ್ನು ವಿರೋಧಿಸುತ್ತಿರುವ ವಿರೋಧ ಪಕ್ಷವಾದ ಬಿಜೆಪಿಯ ನಾಯಕರು ಯಥಾಪ್ರಕಾರ ಸುಳ್ಳು ಮತ್ತು ತಿರುಚಿದ ಮಾಹಿತಿಯನ್ನು ಬಳಸಿಕೊಂಡು ರಾಜ್ಯ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡಿ ಸಾರ್ವಜನಿಕರ ಹಾದಿ ತಪ್ಪಿಸುತ್ತಿದ್ದಾರೆ' ಎಂದು ಹೇಳಿದ್ದಾರೆ.
'ಕೇಂದ್ರ ಮತ್ತು ಕರ್ನಾಟಕ ಸರ್ಕಾರ ಜೊತೆಗೂಡಿ ಬೆಂಗಳೂರು ಮೆಟ್ರೊ ರೈಲು ನಿಗಮವನ್ನು ಸ್ಥಾಪಿಸಿದ್ದು, ಇದರಲ್ಲಿ ಎರಡೂ ಸರ್ಕಾರಗಳ ಸಮ (50:50) ಪಾಲುದಾರಿಕೆ ಇದೆ. ಕೇಂದ್ರ ನಗರ ಮತ್ತು ವಸತಿ ವ್ಯವಹಾರ ಇಲಾಖೆಯ ಕಾರ್ಯದರ್ಶಿಯಾಗಿರುವ ಶ್ರೀನಿವಾಸ ಕಟಿಕಿಥಲ ಅವರು ನಿಗಮದ ಈಗಿನ ಅಧ್ಯಕ್ಷರು. ವ್ಯವಸ್ಥಾಪಕ ನಿರ್ದೇಶಕ ಮತ್ತು ನಿರ್ದೇಶಕರ ಸ‍್ಥಾನದಲ್ಲಿ ಕೇಂದ್ರ ಮತ್ತು ರಾಜ್ಯದ ಅಧಿಕಾರಿಗಳಿದ್ದಾರೆ' ಎಂದು ತಿಳಿಸಿದ್ದಾರೆ.
'ಇದೊಂದು ಸ್ವಾಯತ್ತ ಸಂಸ್ಥೆಯಾಗಿದ್ದು ಇದರ ಮೇಲೆ ರಾಜ್ಯ ಸರ್ಕಾರಕ್ಕೆ ಪೂರ್ಣ ನಿಯಂತ್ರಣಾಧಿಕಾರ ಇಲ್ಲ. ಉಳಿದೆಲ್ಲ ನಗರಗಳ ಮೆಟ್ರೋ ರೈಲು ನಿಗಮಗಳಂತೆ ಬೆಂಗಳೂರು ಮೆಟ್ರೊ ರೈಲು ನಿಗಮ ಕೂಡಾ ಕೇಂದ್ರ ಸರ್ಕಾರದ ಮೆಟ್ರೋ ರೈಲು (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆ 2002ರ ಅಡಿಯಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ' ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
'2017ರ ನಂತರ ಮೆಟ್ರೊ ರೈಲಿನ ಪ್ರಯಾಣ ದರ ಪರಿಷ್ಕರಣೆ ಮಾಡದೆ ಇರುವ ಕಾರಣ ದರ ಪರಿಷ್ಕರಣೆ ನಡೆಸುವಂತೆ ಬಿಎಂಆರ್‌ಸಿಎಲ್ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿತ್ತು. ಪ್ರಯಾಣ ದರ ಹೆಚ್ಚಳದ ಅಧಿಕಾರ ರಾಜ್ಯ ಸರ್ಕಾರದ ಕೈಯಲ್ಲೇ ಇದ್ದಿದ್ದರೆ ಬಿಎಂಆರ್‌ಸಿಎಲ್ ನಮಗೆ ಪತ್ರ ಬರೆಯದೆ, ಕೇಂದ್ರ ಸರ್ಕಾರಕ್ಕೆ ಯಾಕೆ ಪತ್ರ ಬರೆಯುತ್ತಿತ್ತು?' ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ, ಬಿಜೆಪಿಗೆ ತಿರುಗೇಟು ನೀಡಿದ್ದಾರೆ.












Click it and Unblock the Notifications