ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಮಧ್ಯಂತರ ಜಾಮೀನು; ವಕೀಲರ ಸಂಘದಿಂದ ಆಕ್ಷೇಪಣೆ
ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನಿನಂತಹ ಹೊಸ ವಿಷಯಗಳನ್ನು ವಿಚಾರಣೆಗೆ ತರಲು ಹಲವಾರು ದಿನಗಳು ಮತ್ತು ವಾರಗಳನ್ನು ತೆಗೆದುಕೊಳ್ಳುತ್ತದೆ. ಆದರೆ, ವಿಐಪಿ ವಿಷಯಗಳನ್ನು ರಾತ್ರೋರಾತ್ರಿ ವಿಚಾರಣೆ ಮಾಡಲಾಗುತ್ತದೆ.
ಬೆಂಗಳೂರು, ಮಾರ್ಚ್ 07: ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿರುವ ಬಗ್ಗೆ ಬೆಂಗಳೂರು ವಕೀಲರು ಸಂಘ ಆಕ್ಷೇಪ ವ್ಯಕ್ತಪಡಿಸಿದೆ. ಇಂತಹ ಪದ್ಧತಿಯಿಂದ ಸಾಮಾನ್ಯ ಜನರು ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಕಳೆದುಕೊಳ್ಳುತ್ತಾರೆ ಎಂದಿದ್ದು, ಈ ಬಗ್ಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರಿಗೆ ಪತ್ರ ಬರೆದಿದೆ.
ಲಂಚ ಪ್ರಕರಣದಲ್ಲಿ ಆರೋಪಿಯಾಗಿರುವ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಕರ್ನಾಟಕ ಹೈಕೋರ್ಟ್ ಮಂಗಳವಾರ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಕೆಎಸ್‌ಡಿಎಲ್ ಆವರಣವನ್ನು ಪ್ರವೇಶಿಸಬಾರದು ಮತ್ತು ಸಾಕ್ಷ್ಯವನ್ನು ಹಾಳು ಮಾಡಬಾರದು, ನಿರೀಕ್ಷಣಾ ಜಾಮೀನು ಆದೇಶವನ್ನು ಸ್ವೀಕರಿಸಿದ ನಂತರ 48 ಗಂಟೆಗಳ ಒಳಗೆ ಲೋಕಾಯುಕ್ತ ಪೊಲೀಸ್ ತನಿಖಾಧಿಕಾರಿ (ಐಒ) ಮುಂದೆ ಹಾಜರಾಗುವಂತೆ ಶಾಸಕ ಮಾಡಾಳ್ ಅವರಿಗೆ ನ್ಯಾಯಮೂರ್ತಿ ಕೆ.ನಟರಾಜನ್ ಆದೇಶಿಸಿದ್ದಾರೆ.

ಜಾಮೀನು ನೀಡಿರುವ ಆದೇಶಕ್ಕೆ ವಕೀಲರ ಸಂಘ ಆಘಾತ ವ್ಯಕ್ತಪಡಿಸಿದ್ದು, ಮಂಗಳವಾರ ಸಂಜೆ ತುರ್ತು ಸಭೆ ನಡೆಸಿದ ಸಂಘದ ಅಧ್ಯಕ್ಷ ವಿವೇಕ್ ಸುಬ್ಬ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಟಿ.ಜಿ.ರವಿ ಮತ್ತು ಖಜಾಂಚಿ ಎಂ.ಟಿ.ಹರೀಶ್ ಸಿಐಜೆಗೆ ಅವರಿಗೆ ಗಂಭೀರವಾದ ಪತ್ರ ಬರೆದಿದ್ದಾರೆ. "ನ್ನಗಿರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಾಡಾಳ್ ವಿರೂಪಾಕ್ಷಪ್ಪ ಅವರ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿರುವುದಕ್ಕೆ ಬೆಂಗಳೂರು ವಕೀಲರ ಸಂಘ, ಬೆಂಗಳೂರು ತೀವ್ರ ಕಳವಳ ವ್ಯಕ್ತಪಡಿಸಿದೆ" ಎಂದು ತಿಳಿಸಿದ್ದಾರೆ.
"ಕರ್ನಾಟಕದ ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನಿನಂತಹ ಹೊಸ ವಿಷಯಗಳನ್ನು ವಿಚಾರಣೆಗೆ ತರಲು ಹಲವಾರು ದಿನಗಳು ಮತ್ತು ವಾರಗಳನ್ನು ತೆಗೆದುಕೊಳ್ಳುತ್ತದೆ. ಆದರೆ, ವಿಐಪಿ ವಿಷಯಗಳನ್ನು ರಾತ್ರೋರಾತ್ರಿ ವಿಚಾರಣೆ ಮಾಡಲಾಗುತ್ತದೆ. ಈ ಪದ್ಧತಿಯಿಂದ ಸಾಮಾನ್ಯ ಜನರು ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಕಳೆದುಕೊಳ್ಳುತ್ತಾರೆ. ಶಾಸಕರನ್ನೂ ಸಾಮಾನ್ಯ ವ್ಯಕ್ತಿಯಾಗಿ ಪರಿಗಣಿಸುವುದು ಅತ್ಯಂತ ಮಹತ್ವದ್ದಾಗಿದೆ" ಎಂದು ಪತ್ರದಲ್ಲಿ ಬರೆಯಲಾಗಿದೆ.

"ಎಲ್ಲಾ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಒಂದೇ ದಿನದಲ್ಲಿ ವಿಚಾರಣೆ ಮಾಡಲು ನೋಂದಾವಣೆಗೆ ನಿರ್ದೇಶನ ನೀಡುವಂತೆ ಬೆಂಗಳೂರು ವಕೀಲರ ಸಂಘ ಕರ್ನಾಟಕದ ಗೌರವಾನ್ವಿತ ಮುಖ್ಯ ನ್ಯಾಯಾಧೀಶರಿಗೆ ಮನವಿ ಮಾಡುತ್ತದೆ. ಇದರಿಂದ ಸಾಮಾನ್ಯ ಜನರನ್ನು ವಿಐಪಿ ಎಂದು ಪರಿಗಣಿಸಬೇಕು. ನ್ಯಾಯ ದೇವಾಲಯವು ಎಲ್ಲರಿಗೂ ಸಮಾನವಾಗಿರಬೇಕು. ಯಾವುದೇ ವಿಐಪಿ ಕೂಡ ಸಾಮಾನ್ಯರಂತೆ ಕಾಯಬೇಕು. ಈ ನಿರೀಕ್ಷಣಾ ಜಾಮೀನು ವಿಷಯದ ಬಗ್ಗೆ ವಕೀಲರ ಸಂಘ ಗಂಭೀರ ಆಘಾತ ಮತ್ತು ಕಳವಳವನ್ನು ವ್ಯಕ್ತಪಡಿಸುತ್ತದೆ" ಎಂದು ತಿಳಿಸಲಾಗಿದೆ.












Click it and Unblock the Notifications