ರಂಭಾಪುರಿ ಅಡ್ಡಪಲ್ಲಕ್ಕಿ ಉತ್ಸವಕ್ಕೆ ಮತ್ತೆ ಅಡ್ಡಗಾಲು
ಬೆಂಗಳೂರು, ಅ.10 : ರಂಭಾಪುರಿ ಶ್ರೀಗಳ ಅಡ್ಡಪಲ್ಲಕಿ ಉತ್ಸವ ವಿವಾದ ಮತ್ತೊಮ್ಮೆ ಸದ್ದು ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವ 30ಕ್ಕೂ ಹೆಚ್ಚು ಮಠಾಧೀಶರು ಅಡ್ಡಪಲ್ಲಕ್ಕಿ ಉತ್ಸವಕ್ಕೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದ್ದಾರೆ.
ಶುಕ್ರವಾರ ಸಿಎಂ ಸಿದ್ದರಾಮಯ್ಯ ಗೃಹ ಕಚೇರಿಗೆ ಆಗಮಿಸಿದ ಮಾತೆ ಮಹಾದೇವಿ, ನಿಡುಮಾಮಿಡಿ ಸ್ವಾಮೀಜಿ, ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ 30ಕ್ಕೂ ಹೆಚ್ಚು ಮಠಾಧೀಶರುಗಳು ಉತ್ಸವಕ್ಕೆ ಅವಕಾಶ ನೀಡದಂತೆ ಆಗ್ರಹಿಸಿದರು.

21 ನೇ ಶತಮಾನದಲ್ಲಿ ಮಾನವರು ಮಾನವರ ಹೆಗಲ ಮೇಲೆ ಹೋಗುವ ಅನಾಗರಿಕ ಅಡ್ಡ ಪಲ್ಲಕ್ಕಿ ಉತ್ಸವ ನಡೆಯುವುದು ಅಸಹನೀಯ. ಇದನ್ನು ಕೂಡಲೇ ರಾಜ್ಯ ಸರ್ಕಾರ ಶಾಶ್ವತವಾಗಿ ನಿಷೇಧಿಸಬೇಕೆಂದು ಮಾತೆ ಮಹಾದೇವಿ ಒತ್ತಾಯಿಸಿದರು.
ಗುಲ್ಬರ್ಗ ಜಿಲ್ಲೆಯ ಜೇವರ್ಗಿಯಲ್ಲಿ ರಂಭಾಪುರಿ ಶ್ರೀಗಳ ಅಡ್ಡಪಲ್ಲಕಿ ಉತ್ಸವ ನಡೆಯಲಿದೆ. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿ ನಂತರ ಜಿಲ್ಲಾಧಿಕಾರಿ ಮತ್ತು ಸಿಎಂ ಸಿದ್ದರಾಮಯ್ಯ ಅಡ್ಡಪಲ್ಲಕ್ಕಿ ಉತ್ಸವ ನಡೆಸಲು ಅನುಮತಿ ನೀಡಿದ್ದರು.
ಕೆಲವು ದಿನಗಳಿಂದ ಈ ಬಗ್ಗೆ ಮೌನವಹಿಸಿದ್ದ ಮಠಾಧೀಶರು ಮತ್ತೆ ಅಡ್ಡ ಪಲ್ಲಕ್ಕಿ ಉತ್ಸವದ ವಿರುದ್ಧ ಧ್ವನಿ ಎತ್ತಿದ್ದಾರೆ. ಧಾರ್ಮಿಕ ಮತ್ತು ವೈಚಾರಿಕ ಪ್ರಜ್ಞೆಯ ಕಾಲದಲ್ಲಿ ಅಡ್ಡಪಲ್ಲಕ್ಕಿ ಉತ್ಸವ ನಡೆಸುವುದು ಸರಿಯಲ್ಲ.
ಒಂದು ಕಾಲದಲ್ಲಿ ಅಡ್ಡ ಪಲ್ಲಕ್ಕಿ ಉತ್ಸವ ಅಗತ್ಯ, ಅನಿವಾರ್ಯವಾಗಿತ್ತೇನೋ ಆದರೆ ಬದಲಾದ ಕಾಲಮಾನದಲ್ಲಿ ಅದನ್ನು ಮುಂದುವರೆಸುವುದು ಸೂಕ್ತವಲ್ಲ ಎಂದು ವಿವಿಧ ಮಠಾಧೀಶರು ಸಿಎಂಗೆ ವಿವರ ನೀಡಿದ್ದಾರೆ.
ಅ.3ರ ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ರಂಭಾಪುರಿ ಮಠದ ರೇಣುಕಾ ವೀರಸೋಮೇಶ್ವರ ಸ್ವಾಮೀಜಿ ಬೆಂಬಲಿಗರು ಮತ್ತು ಅಡ್ಡ ಪಲ್ಲಕ್ಕಿ ಉತ್ಸವ ವಿರೋಧಿ ಬಣಗಳ ನಡುವೆ ಸಂಧಾನ ಸಭೆ ನಡೆದಿತ್ತು. ಸುಮಾರು ಐದು ಗಂಟೆಗಳ ಕಾಲ ನಡೆದ ಸಭೆಯ ನಂತರ ಉತ್ಸವ ನಡೆಸಲು ಜಿಲ್ಲಾಧಿಕಾರಿ ಅನುಮತಿ ನೀಡಿದ್ದರು. (ಅಡ್ಡಪಲ್ಲಕ್ಕಿ ಉತ್ಸವ ವಿವಾದ ಅಂತ್ಯ)












Click it and Unblock the Notifications