Gold Smuggling Case: ರನ್ಯಾ ರಾವ್ ಚಿನ್ನ ಸಾಗಿಸಿದ್ದು ಯಾರ ಕಾರಲ್ಲಿ? ಸ್ಫೋಟಕ ವಿಚಾರ ಬಹಿರಂಗ
ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ ಅವರ ಅಕ್ರಮ ಚಿನ್ನ ಸಾಗಾಟ ಕೇಸ್ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ರನ್ಯಾ ಅವರು ವಿದೇಶಕ್ಕೆ ಹಲವು ಬಾರಿ ತೆರಳಿ ಅಲ್ಲಿಂದ ಚಿನ್ನ ಅಕ್ರಮವಾಗಿ ತರುತ್ತಿದ್ದರು ಎನ್ನಲಾಗಿದೆ. ಅಲ್ಲದೆ ಇದಕ್ಕಾಗಿ ರನ್ಯಾ ಅವರು ತಮ್ಮ ತಂದೆಯ ಪೊಲೀಸ್ ಅಧಿಕಾರ ಹಾಗೂ ಸವಲತ್ತುಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪವೂ ಇದೆ. ಈಗ ಹೊಸ ಟ್ವಿಸ್ಟ್ ಎಂಬಂತೆ ರನ್ಯಾ ರಾವ್ ಅವರು ವಿದೇಶದಿಂದ ತಂದ ಚಿನ್ನವನ್ನು ಯಾರ ಕಾರಿನಲ್ಲಿ ಸಾಗಿಸುತ್ತಿದ್ದರು? ಎಂಬ ಅಚ್ಚರಿ ವಿಚಾರ ಕೂಡ ತನಿಖೆ ವೇಳೆ ಹೊರಬಿದ್ದಿದೆ.
ರನ್ಯಾ ರಾವ್ ಅವರ ಮಲತಂದೆ ರಾಜ್ಯ ಸರ್ಕಾರದ ಐಪಿಎಸ್ ಹಿರಿಯ ಅಧಿಕಾರಿ ಡಿಜಿಪಿ ರಾಮಚಂದ್ರ ರಾವ್. ಪೊಲೀಸರಿಗೆ ನೀಡುವ ಶಿಷ್ಟಾಚಾರದ ಸವಲತ್ತುಗಳನ್ನು ಬಳಸಿಕೊಂಡೇ ರನ್ಯಾ ಏರ್‌ಪೋರ್ಟ್‌ನಲ್ಲಿ ಚಿನ್ನವನ್ನು ಸಲೀಸಾಗಿ ಸಾಗಿಸುತ್ತಿದ್ದರು ಎನ್ನಲಾಗಿದೆ. ಈ ಕೃತ್ಯಕ್ಕೆ ಅಲ್ಲಿದ್ದ ಕೆಲ ಸಿಬ್ಬಂದಿಯನ್ನು ಕೂಡ ರನ್ಯಾ ಬಳಸಿಕೊಂಡಿದ್ದರು ಎಂಬುದು ತನಿಖೆ ವೇಳೆ ಹೊರಬಂದಿದೆ. ಈ ಬಗ್ಗೆ ರಾಜ್ಯ ಸರ್ಕಾರ ಕೂಡ ರನ್ಯಾ ತಂದೆ ಅವರ ಮೇಲೆ ತನಿಖೆ ನಡೆಸುವಂತೆ ಆದೇಶಿಸಿದೆ. ಈಗ ಹೊಸ ವಿಚಾರ ಅಂದ್ರೆ, ವಿದೇಶದಿಂದ ತರ್ತಿದ್ದ ಚಿನ್ನವನ್ನು ರನ್ಯಾ ಯಾವ ಕಾರಿನಲ್ಲಿ ಸಾಗಿಸುತ್ತಿದ್ದರು ಎಂಬ ವಿಚಾರ ತಿಳಿದು ಅಧಿಕಾರಿಗಳು ಕೂಡ ಶಾಕ್ ಆಗಿದ್ದಾರೆ.

ದುಬೈನಿಂದ ಅಕ್ರಮವಾಗಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಚಿನ್ನ ತರುತ್ತಿದ್ದ ರನ್ಯಾ ಅಲ್ಲಿಂದ ಸರ್ಕಾರಿ ವಾಹನದಲ್ಲೇ ಸಾಗಿಸುತ್ತಿದ್ದರು ಎಂದು ವಿಚಾರ ತನಿಖೆ ವೇಳೆ ಹೊರಬಂದಿದೆ. ಏರ್‌ಪೋರ್ಟ್ ಪ್ರೋಟೋಕಾಲ್ ಸಿಬ್ಬಂದಿ ನೆರವಿನಿಂದ ಸಲೀಸಾಗಿ ಚಿನ್ನ ತಂದು ಅದನ್ನು ಸರ್ಕಾರದ ವಾಹನದಲ್ಲೇ ಸಾಗಿಸುತ್ತಿದ್ದರು ಎನ್ನಲಾಗಿದೆ. ಸಾಮಾನ್ಯವಾಗಿ ಪೊಲೀಸರಿಗೆ ಹೆಚ್ಚುವರಿ ಕಾರುಗಳನ್ನು ಸರ್ಕಾರದಿಂದಲೇ ನೀಡಲಾಗುತ್ತದೆ. ಅದರಂತೆ ಐಪಿಎಸ್ ಅಧಿಕಾರಿಯಾದ ರನ್ಯಾ ಅವರ ತಂದೆ ಡಿಜಿಪಿ ರಾಮಚಂದ್ರ ರಾವ್ ಅವರಿಗೂ ಹೆಚ್ಚುವರಿ ಸರ್ಕಾರಿ ವಾಹನ ವಿತರಿಸಲಾಗಿತ್ತು. ಇದೇ ಸರ್ಕಾರಿ ವಾಹನದಲ್ಲೇ ರನ್ಯಾ ಚಿನ್ನ ಸಾಗಿಸುತ್ತಿದ್ದರು, ಅಲ್ಲದೆ ಏರ್‌ಪೋರ್ಟ್‌ಗೆ ಹೋಗುವಾಗಲೂ ಹಲವು ಬಾರಿ ಇದೇ ವಾಹನ ಬಳಸಿದ್ದರು ಎಂದು ಗೊತ್ತಾಗಿದೆ.
ಈ ಹಿನ್ನೆಲೆ ಆರ್‌ಪೋರ್ಟ್‌ನಲ್ಲಿ ಶಿಷ್ಟಾಚಾರ ವಿಭಾಗದಲ್ಲಿದ್ದ ಅಧಿಕಾರಿಗಳಿಗೂ ಕಂಟಕ ಶುರುವಾಗಿದೆ. ರನ್ಯಾ ಒಂದೇ ವರ್ಷದಲ್ಲಿ 25ಕ್ಕೂ ಹೆಚ್ಚು ಬಾರಿ ವಿದೇಶ ಪ್ರಯಾಣ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆಯೂ ಏರ್‌ಪೋರ್ಟ್ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದ್ದು, ಅಲ್ಲಿನ ಸಿಬ್ಬಂದಿಯನ್ನು ವಿಚಾರಣೆಗೆ ಕರೆಯಲಾಗಿದೆಯಂತೆ. ಅಲ್ಲದೆ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಹೇಳಿಕೆ ಕೂಡ ದಾಖಲಿಸಿಕೊಂಡಿದ್ದಾರೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರೋಟೋಕಾಲ್ ಸಿಬ್ಬಂದಿಗೆ ನೋಟಿಸ್ ನೀಡಲಾಗಿದ್ದು, ಇವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಿದ್ದಾರೆ.

ಈ ಪ್ರಕರಣದ ಬೆನ್ನತ್ತಿರುವ ಡಿಆರ್‌ಐ ಅಧಿಕಾರಿಗಳು ರನ್ಯಾ ರಾವ್ ಅವರ ಕಾರು ಚಾಲಕ ದೀಪಕ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಚಿಕ್ಕಮಗಳೂರು ನಗರದ ಹೊಸಮನೆ ಬಡಾವಣೆಯ ಕಾರು ಚಾಲಕ ದೀಪಕ್‍ನನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಕೇಸ್ ಸಂಬಂಧ ಮಾಹಿತಿ ಪಡೆದುಕೊಂಡಿದ್ದಾರೆ. ಆದರೆ, ಈ ಕೇಸ್‌ನಲ್ಲಿ ದೀಪಕ್ ಪಾತ್ರ ಇದೆಯೇ? ಇಲ್ಲವೇ ಎಂಬುದೂ ಗೊತ್ತಾಗಿಲ್ಲ, ಈ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.
"ಇದೇ ಮೊದಲು ದುಬೈನಿಂದ ಚಿನ್ನ ಕಳ್ಳಸಾಗಣೆ ಮಾಡಿದ್ದು. ಈ ಹಿಂದೆ ಈ ಕೃತ್ಯದಲ್ಲಿ ಭಾಗಿಯಾಗಿಲ್ಲ. ಚಿನ್ನವನ್ನು ಕದ್ದುಮುಚ್ಚಿ ತರುವುದು ಹೇಗೆ ಎಂಬುದನ್ನು ಯೂಟ್ಯೂಬ್ ವಿಡಿಯೋ ನೋಡಿ ಕಲಿತೆ ಎಂದು ನಟಿ ರನ್ಯಾ ರಾವ್ ವಿಚಾರಣೆ ವೇಳೆ ತಿಳಿಸಿದ್ದಾರೆ ಎನ್ನಲಾಗಿದೆ. ಆದರೆ ನನಗೆ ಇತ್ತೀಚಿಗೆ ವಿದೇಶಿ ಮೊಬೈಲ್ ನಂಬರ್‌ಗಳಿಂದ ಕರೆ ಬರುತ್ತಿತ್ತು. ಈ ಬಗ್ಗೆ ನಾನು ಪೊಲೀಸರಿಗೆ ಮಾಹಿತಿ ಕೊಡಲಿಲ್ಲ. ಮಾರ್ಚ್ ಮೊದಲ ದಿನ ಕರೆ ಮಾಡಿದ್ದ ವ್ಯಕ್ತಿಯೊಬ್ಬ ದುಬೈ ಏರ್‌ಪೋರ್ಟ್‌ನಿಂದ ಚಿನ್ನ ಸಂಗ್ರಹಿಸಿ, ಅದನ್ನು ಬೆಂಗಳೂರಿಗೆ ತಲುಪಿಸುವಂತೆ ಕರೆಯಲ್ಲಿ ಸೂಚನೆ ಬಂದಿತ್ತು. ಕರೆ ಮಾಡಿದ ವ್ಯಕ್ತಿ ಯಾರೆಂದು ಗೊತ್ತಿಲ್ಲ. ಚಿನ್ನವನ್ನು ಬೆಂಗಳೂರಿನ ಸರ್ವೀಸ್ ರಸ್ತೇಲಿ ನಿಂತಿರೋ ಆಟೋದಲ್ಲಿರುವ ವ್ಯಕ್ತಿಗೆ ಕೊಡುವಂತೆ ಹೇಳಿದ್ದ" ಎಂದೂ ರನ್ಯಾ ಹೇಳಿರುವುದಾಗಿ ವರದಿಯಾಗಿದೆ.

ಅಧಿಕಾರಿಗಳಿಂದ ನನಗೆ ಕಿರುಕುಳ ಎಂದು ಪತ್ರ
ಗೋಲ್ಡ್ ಸ್ಮಗ್ಲಿಂಗ್ ಕೇಸ್ ಆರೋಪಿಯಾಗಿ ಜೈಲು ಸೇರಿರುವ ನಟಿ ರನ್ಯಾ ರಾವ್ ಅವರು ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಹೆಚ್ಚುವರಿ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ತನಿಖಾಧಿಕಾರಿಗಳು ನನ್ನ ಮೇಲೆ ದುರ್ವರ್ತನೆ ತೋರಿದ್ದು, ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ತಾನು ನಿರಪರಾಧಿ, ಆದರೆ ಈ ಕೇಸ್‌ನಲ್ಲಿ ತನಿಖಾಧಿಕಾರಿಗಳಿಂದ ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ನನ್ನನ್ನು ಈ ಕೇಸ್‌ನಲ್ಲಿ ಬಂಧಿಸಿದ ನಂತರ ಅಧಿಕಾರಿಗಳು ಹಲವು ಬಾರಿ ನನ್ನ ಕಪಾಳಕ್ಕೆ ಹೊಡೆದಿದ್ದಾರೆ. ಚಿನ್ನ ಕಳ್ಳಸಾಗಣೆ ಸಂಬಂಧ 40 ಪುಟಗಳ ಒಪ್ಪಿಗೆ ಪತ್ರಕ್ಕೆ ಸಹಿ ಹಾಕುವಂತೆ ಬಲವಂತ ಮಾಡುತ್ತಿದ್ದಾರೆ ಎಂದೂ ರನ್ಯಾ ರಾವ್ ದೂರಿನಲ್ಲಿ ತಿಳಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದ ಒಳಗಿನಿಂದ ರನ್ಯಾ ರಾವ್ ಈ ಪತ್ರವನ್ನು ಬರೆದಿದ್ದಾರೆ. ಅಲ್ಲಿ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಜೈಲಾಧಿಕಾರಿಗಳ ಮೂಲಕ ಈ ಪತ್ರ ಸಲ್ಲಿಸಿದ್ದು, ನಾನು ದುಬೈನಿಂದ ಬಂದಾಗ ಅಧಿಕಾರಿಗಳು ಯಾವುದೇ ಸಾಕ್ಷಿಗಳಿಲ್ಲದೆ ನನ್ನನ್ನು ಈ ಕೇಸ್‌ನಲ್ಲಿ ಸಿಲುಕಿಸಿದ್ದಾರೆ. ನನ್ನ ಬಂಧನವನ್ನು ಅಕ್ರಮವಾಗಿ ಮಾಡಿದ್ದಾರೆ. ಅಧಿಕಾರಿಗಳು ನನ್ನನ್ನು ಬಂಧಿಸುವ ಮುನ್ನ ಸತ್ಯಾಸತ್ಯತೆ ಪರಿಶೀಲಿಸಿಲ್ಲ. ಬಂಧಿಸಿದ ನಂತರ ನನ್ನೊಂದಿಗೆ ಕ್ರೂರವಾಗಿ ನಡೆದುಕೊಂಡಿದ್ದಾರೆ ಎಂದೆಲ್ಲ ಅವರು ಪತ್ರದಲ್ಲಿ ದೂರಿದ್ದಾರೆ ಎನ್ನಲಾಗಿದೆ.

ಬಂಧಿಸಿದ ನಂತರ ಅಧಿಕಾರಿಗಳು ನನಗೆ ಸುಮಾರು 10ಕ್ಕೂ ಹೆಚ್ಚು ಬಾರಿ ಕಪಾಳಮೋಕ್ಷ ಮಾಡಿದ್ದಾರೆ. ಕಳ್ಳಸಾಗಣೆ ಮಾಡಿರುವುದಾಗಿ ಒಪ್ಪಿಕೊಂಡಿರುವುದಾಗಿ 40 ಪುಟಗಳ ಪೇಪರ್‌ಗೆ ಸಹಿ ಹಾಕುವಂತೆ ಒತ್ತಾಯಿಸಿದ್ದಾರೆ. ದಯವಿಟ್ಟು ಈ ಬಗ್ಗೆ ನ್ಯಾಯಯುತ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿಕೊಂಡಿದ್ದಾರೆ. ಈ ಕೇಸ್ ವಿಚಾರದಲ್ಲಿ ಪಾರದರ್ಶಕತೆ, ಕಾನೂನುಬದ್ಧವಾಗಿ ಹಾಗೂ ನಿಷ್ಪಕ್ಷಪಾತವಾಗಿ ನಡೆಸಿದರೆ ನಾನೂ ಸಹಕರಿಸುತ್ತೇನೆ ಎಂದು ರನ್ಯಾ ರಾವ್ ಪತ್ರದ ಮೂಲಕ ತಿಳಿಸಿದ್ದಾರೆ ಎಂದು ವರದಿಯಾಗಿದೆ.












Click it and Unblock the Notifications