'ಹಾಯ್ ಪದವನ್ನು ಹ್ವಾಯ್ ಮಾಡು': ಪತಿಯ ಊರಿನ ಬಗ್ಗೆ ಪ್ರಿಯಾಂಕಾ ಉಪೇಂದ್ರ ಮೆಚ್ಚುಗೆ
ಬೆಂಗಳೂರು, ಆಗಸ್ಟ್ 19:'ಕುಂದಾಪ್ರ ಕನ್ನಡ ಪ್ರತಿಷ್ಠಾನ' ಬೆಂಗಳೂರು ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ 'ಕುಂದಾಪ್ರ ಕನ್ನಡ ಹಬ್ಬ'ದ ಅದ್ಧೂರಿಯಾಗಿ ಸಂಪನ್ನಗೊಂಡಿದೆ. ಈ ಸಂಭ್ರಮದಲ್ಲಿ ನಟಿ ಪ್ರಿಯಾಂಕ ಉಪೇಂದ್ರ ಭಾಗಿಯಾಗಿದ್ದು, ಪತಿಯ ಊರಿನ ಬಗ್ಗೆ ಅತೀವ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ತಾವು ಕನ್ನಡ ಹಾಗೂ ಕುಂದಾಪುರ ಕನ್ನಡ ಕಲಿತ ಬಗೆಯನ್ನು ಎಲ್ಲರ ಜೊತೆ ಹಂಚಿಕೊಂಡಿದ್ದಾರೆ.
ಬೆಂಗಳೂರು ಅರಮನೆ ಮೈದಾನದಲ್ಲಿ ಕುಂದಾಪ್ರ ಕನ್ನಡ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಎರಡು ದಿನಗಳ 'ಕುಂದಾಪ್ರ ಕನ್ನಡ ಹಬ್ಬ'ದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕುಂದಾಪುರ ನನ್ನಿಷ್ಟದ ಊರು. ಕೊಟ್ಟೆ ಕಡುಬು ನನ್ನ ಮೆಚ್ಚಿನ ತಿನಿಸು. ಅತ್ತೆ-ಮಾವನ ಮೂಲಕ ಕನ್ನಡ ಕಲಿತುಕೊಂಡಿದ್ದೇನೆ. ಮದುವೆ ನಂತರ ಆನೆಗುಡ್ಡೆ ದೇವಸ್ಥಾನಕ್ಕೆ ಹೋಗಿದ್ದೆ. 'ಕುಂದಾಪ್ರ ಕನ್ನಡ' ಎಂದಾಗ ಮನೆಯಲ್ಲಿ ಮಾವ 'ಹಾಯ್ ಪದವನ್ನು ಹ್ವಾಯ್ ಮಾಡು ಅಷ್ಟೇ..'ಎಂದಿದ್ದರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೆ.ಜಯಪ್ರಕಾಶ ಹೆಗ್ಡೆ ಭಾಗಿ ಮಾತನಾಡಿದ್ದು, ಮಾತೃ ಭಾಷೆಯ ಮೇಲೆ ಅಭಿಮಾನ ಬೆಳೆಸಿಕೊಳ್ಳುವುದರ ಜೊತೆಗೆ ಇತರೆ ಭಾಷೆಗಳ ಮೇಲೂ ಗೌರವ ಇರಲಿ. ಕುಂದಾಪ್ರ ಕನ್ನಡ ಅಧ್ಯಯನ ಪೀಠಕ್ಕೆ ಸಂಬಂಧಿಸಿದಂತೆ ಅನುದಾನ ಬಿಡುಗಡೆಯಾಗಿದೆ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸದ್ಯದಲ್ಲೇ ಸಮಿತಿ ರಚನೆಯಾಗಲಿದೆ. ಮುಂದಿನ ಕುಂದಾಪ್ರ ಕನ್ನಡ ಹಬ್ಬದ ಸಂದರ್ಭದಲ್ಲಿ ಕುಂದಾಪ್ರ ಕನ್ನಡ ಭಾಷೆಯ ಅಧ್ಯಯನ ಪೀಠ ತನ್ನ ಕೆಲಸ ಪ್ರಾರಂಭಿಸಲಿದೆ ಎಂದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಆಡಳಿತಾತ್ಮಕವಾಗಿ ಬೇರೆಯಾಗಿದ್ದರೂ, ಭಾವನಾತ್ಮಕವಾಗಿ ಇಂದಿಗೂ ತನ್ನ ನಂಟನ್ನು ಉಳಿಸಿಕೊಂಡಿದೆ. ಇಲ್ಲಿನ ಭಾಷೆ, ಸಂಸ್ಕೃತಿ ವಿಚಾರದಲ್ಲಿ ಭಿನ್ನತೆ ಇರಬಹುದು. ಆದರೆ ನಾವೆಲ್ಲರೂ ಒಂದೇ ಎನ್ನುವುದನ್ನು ಯಾರೂ ಮರೆಯಬಾರದು. ಮಕ್ಕಳಿಗೆ ಮೊದಲು ಮಾತೃಭಾಷೆ ಕಲಿಸಿಕೊಡಬೇಕು. ಉಳಿದದ್ದನ್ನು ಅವರೇ ಕಲಿತುಕೊಳ್ಳುತ್ತಾರೆ ಎಂದು ಹೇಳಿದರು.
ಕುಂದಾಪುರದವರು ಎಷ್ಟೇ ದೊಡ್ಡ ಸೋಲಾದರೂ ಬೇಗನೆ ಪುಟಿದೇಳುತ್ತಾರೆ- ರಾಜ್ ಬಿ. ಶೆಟ್ಟಿ
'ಕುಂದಾಪ್ರ ಕನ್ನಡ ಹಬ್ಬ' ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನಟ-ನಿರ್ದೇಶಕ ರಾಜ್ ಬಿ. ಶೆಟ್ಟಿ ಮಾತನಾಡಿ, ಕುಂದಾಪುರದ ಜನರು ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಎಷ್ಟೇ ಗಂಭೀರವಾಗಿ ತೆಗೆದುಕೊಂಡರೂ, ಅದನ್ನು ಅಷ್ಟೇ ಆರಾಮವಾಗಿ ನೋಡುತ್ತಾರೆ. ಅಜ್ಜನಿಂದ, ತಂದೆಯವರೆಗೂ ಎಲ್ಲರನ್ನೂ ತಮಾಷೆ ಮಾಡುವ ಭಾಷೆ ಇದ್ದರೆ ಅದು ಕುಂದಾಪುರ ಕನ್ನಡ ಭಾಷೆ. ಇದು ಭಾಷೆಯ ಗರಿಮೆ. ಈ ಒಂದು ಕಾರಣದಿಂದ ನಾವೆಲ್ಲರೂ ಸಮಾನರು ಎಂಬ ಭಾವನೆ ವ್ಯಕ್ತವಾಗುತ್ತದೆ. ಸಮಾನತೆ ಕುಂದಾಪುರ ಭಾಷೆಯಲ್ಲಿದೆ. ಬದುಕನ್ನು ಸುಂದರವಾಗಿ ಕಾಣುವ ದೃಷ್ಟಿಕೋನ ಕುಂದಾಪುರದ ಜನರಲ್ಲಿದೆ. ಹೀಗಾಗಿ ಜೀವನದಲ್ಲಿ ಎಷ್ಟೇ ದೊಡ್ಡ ಸೋಲಾದರೂ ಬೇಗನೆ ಪುಟಿದೇಳುತ್ತಾರೆ ಎಂದು ಹೇಳಿದರು.

ಇನ್ನು ಕಾರ್ಯಕ್ರಮದಲ್ಲಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಎಂ.ಆರ್.ಜಿ. ಸಮೂಹದ ಅಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ, ಬಸ್ರೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಅಪ್ಪಣ್ಣ ಹೆಗ್ಡೆ, ಎ.ಎಸ್.ಕೇಟರರ್ಸ್‌ನ ಸತೀಶ್ ಶೆಟ್ಟಿ, ಸೌತ್ ಫೀಲ್ಡ್ ಪೇಂಟ್ಸ್ ಪ್ರೈ. ಲಿ. ಎಂಡಿ ಶಿವರಾಮ ಹೆಗ್ಡೆ, ಚೆಪ್ ಟಾಕ್‌ನ ಗೋವಿಂದಬಾಬು ಪೂಜಾರಿ, ಯುನಿವರ್ಸಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನ ಉಪೇಂದ್ರ ಶೆಟ್ಟಿ, 'ಕುಂದಾಪ್ರ ಕನ್ನಡ ಪ್ರತಿಷ್ಠಾನ'ದ ಗೌರವಾಧ್ಯಕ್ಷ ಉದಯ ಹೆಗ್ಡೆ, ಅಧ್ಯಕ್ಷ ಡಾ.ದೀಪಕ್ ಶೆಟ್ಟಿ, ಉಪಾಧ್ಯಕ್ಷ ನರಸಿಂಹ ಬೀಜಾಡಿ, ಕಾರ್ಯದರ್ಶಿ ರಾಘವೇಂದ್ರ ಕಾಂಚನ್, ಕೋಶಾಧಿಕಾರಿ ವಿಜಯ್ ಶೆಟ್ಟಿ ಹಾಲಾಡಿ, ಜಂಟಿ ಕಾರ್ಯದರ್ಶಿ ಅಜಿತ್ ಶೆಟ್ಟಿ ಉಳ್ತೂರು ಮುಂತಾದವರು ಉಪಸ್ಥಿತರಿದ್ದರು.












Click it and Unblock the Notifications