ವಿನೋದ್ ರಾಜ್‌ಗೆ ಮತ್ತೊಂದು ಆಘಾತ: ನಟಿ ಲೀಲಾವತಿ ಆಪ್ತೆ ಬಂಗಾರಮ್ಮ ನಿಧನ
ಬೆಂಗಳೂರು, ಡಿಸೆಂಬರ್ 14: ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರು ಕಳೆದ ವಾರ ನಿಧನರಾದರು. ಈ ಆಘಾತ ಮಾಸುವ ಮುನ್ನವೇ ವಿನೋದ್ ರಾಜ್ ಹಾಗೂ ಲೀಲಾವತಿ ಅವರ ಆಪ್ತ ವಲಯದಲ್ಲಿ ಮತ್ತೊಂದು ಕಹಿ ಘಟನೆ ನಡೆದಿದೆ. ನಟಿ ಲೀಲಾವತಿ ಅವರ ಆರೈಕೆ ಮಾಡುತ್ತಿದ್ದ ಸದಾ ಅವರ ಜೊತೆಗೆ ಇರುತ್ತಿದ್ದ ಬಂಗಾರಮ್ಮ ನಿಧನರಾಗಿದ್ದಾರೆ.
65 ವರ್ಷ ವಯಸ್ಸಿನವರಾದ ಬಂಗಾರಮ್ಮ ಅವರು ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಕಳೆದ ಕೆಲ ತಿಂಗಳಿನಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಬಂಗಾರಮ್ಮ ಬೆಂಗಳೂರಿನ ನಾಗರಬಾವಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಬಂಗಾರಮ್ಮ ಅವರು ಹಿರಿಯ ನಟಿ ಲೀಲಾವತಿ ಹಾಗೂ ವಿನೋದ್ ರಾಜ್ ಅವರಿಗೆ ತುಂಬಾ ಆಪ್ತರಾಗಿದ್ದರು. ಬಂಗಾರಮ್ಮನವರು ಚಿಕ್ಕವಯಸ್ಸಿನಿಂದಲೂ ಲೀಲಾವತಿ ಅವರ ಜೊತೆಗೆ ಇರುತ್ತಿದ್ದರು, ಲೀಲಾವತಿ ಚೆನ್ನೈನಲ್ಲಿ ವಾಸವಾಗಿದ್ದಾಗಲೂ ಅವರೊಂದಿಗೆ ಬಂಗಾರಮ್ಮ ಇದ್ದರು, ಅಲ್ಲದೇ ವಿನೋದ್ ರಾಜ್ ಅವರನ್ನು ಸಹ ಬಂಗಾರಮ್ಮ ನೋಡಿಕೊಳ್ಳುತ್ತಿದ್ದರು. ಹೀಗಾಗಿ ವಿನೋದ್ ರಾಜ್ ಬಂಗಾರಮ್ಮ ಅವರನ್ನು ತಾಯಿಯಂತೆ ನೋಡಿಕೊಳ್ಳುತ್ತಿದ್ದರು. ಸದಾ ಲೀಲಾವತಿ ಅವರ ಜೊತೆಗೆ ಇರುತ್ತಿದ್ದ ಬಂಗಾರಮ್ಮ ಇತ್ತೀಚಿಗೆ ಹಾಸಿಗೆ ಹಿಡಿದಿದ್ದರು.
ಕಳೆದ ಶುಕ್ರವಾರ ಡಿಸೆಂಬರ್ 8ರಂದು ವಯೋಸಹಜವಾಗಿ ನಟಿ ಲೀಲಾವತಿ ವಿಧಿವಶರಾದರು. ಲೀಲಾವತಿ ಅವರ ಸಾವಿನ ಸುದ್ದಿ ಕೇಳಿ ಬಂಗಾರಮ್ಮ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿದ್ದು, ಲೀಲಾವತಿ ಅವರ ಸಾವಿನ ಬೆನ್ನಲ್ಲೇ ಬಂಗಾರಮ್ಮ ಕೂಡ ವಿಧಿವಶರಾಗಿದ್ದಾರೆ.
ಇನ್ನು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಬಂಗಾರಮ್ಮ ಅವರನ್ನು ವಿನೋದ್ ರಾಜ್ ಅವರೇ ನೋಡಿಕೊಳ್ಳುತ್ತಿದ್ದರು. ಅವರಿಗಾಗಿಯೇ ಓರ್ವ ನರ್ಸ್ ನೇಮಿಸಿ ವಿನೋದ್ ರಾಜ್ ಆರೈಕೆ ಮಾಡುತ್ತಿದ್ದರು ಎನ್ನಲಾಗಿದೆ. ತಾಯಿ ಸಾವಿನ ನೋವು ಮಾಸುವ ಮುನ್ನವೇ ವಿನೋದ್ ರಾಜ್ ಅವರಿಗೆ ಮತ್ತೊಂದು ನೋವು ಎದುರಾಗಿದೆ.












Click it and Unblock the Notifications