Nandini Products: 'ನಂದಿನಿ' ಉತ್ಪನ್ನಗಳ ರಾಯಭಾರಿ ನಟ ಶಿವರಾಜ್ ಕುಮಾರ್
ಬೆಂಗಳೂರು, ಆಗಸ್ಟ್. 01: ನಂದಿನಿ ನಮ್ಮ ರಾಜ್ಯದ ಹೆಮ್ಮೆ. ನಂದಿನಿ ಉತ್ಪನ್ನಗಳನ್ನು ಬಳಸದಿರುವ ಮನೆಗಳಿಲ್ಲ. ಇಷ್ಟು ವರ್ಷಗಳ ಕಾಲ ನಂದಿನಿಯ ರಾಯಭಾರಿಯಾಗಿ ಕರ್ನಾಟಕ ರತ್ನ ಡಾ.ಪುನೀತ್ ರಾಜ್‌ಕುಮಾರ್ ಇದ್ದರು. ಈಗ ಅವರ ಸ್ಥಾನವನ್ನು ನಟ ಶಿವರಾಜ್ ಕುಮಾರ್ ತುಂಬಲಿದ್ದಾರೆ. ಮಂಗಳವಾರ ಕರ್ನಾಟಕ ಹಾಲು ಒಕ್ಕೂಟದ ಅಧ್ಯಕ್ಷ ಭೀಮಾ ನಾಯ್ಕ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಮಂಗಳವಾರ ಕೆಎಂಎಫ್ ಅಧ್ಯಕ್ಷ ಭೀಮ ನಾಯ್ಕ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಎಂ. ಕೆ. ಜಗದೀಶ್ ಚಂದನವನದ ಜನಪ್ರಿಯ ನಾಯಕ ಹಾಗೂ ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ಕರ್ನಾಟಕ ಹಾಲು ಮಹಾಮಂಡಳದ ಪರವಾಗಿ ನಂದಿನಿ ಉತ್ಪನ್ನಗಳ ರಾಯಭಾರಿಯಾಗುವಂತೆ ಮನವಿ ಮಾಡಿದ್ದಾರೆ.

"ಕರ್ನಾಟಕ ಹಾಲು ಮಹಾಮಂಡಳದ ಪರವಾಗಿ ಕೋರಿರುವ ಮೇರೆಗೆ ಕರ್ನಾಟಕ ರಾಜ್ಯದ ಹೆಮ್ಮೆಯ ಬ್ರಾಂಡ್ "ನಂದಿನಿ"ಯ ರಾಯಭಾರಿಯಾಗಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಪ್ರಚಾರದ ಕಾರ್ಯವನ್ನು ಕೈಗೊಳ್ಳಲು ಅವರು ಒಪ್ಪಿಕೊಂಡಿರುತ್ತಾರೆ. ನಂದಿನಿ" ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಿ ಒಪ್ಪಿಕೊಂಡಿರುವ ಕರುನಾಡ ಚಕ್ರವರ್ತಿಗೆ ಅಭಿನಂದನೆ ಸಲ್ಲಿಸಿ ಶುಭ ಕೊರಲಾಯಿತು. ಅವರಿಗೆ ಕರುನಾಡಿನ ಸಮಸ್ತ ರೈತ ಬಾಂಧವರ ಪರವಾಗಿ ಹಾಗೂ ಕರ್ನಾಟಕ ಹಾಲು ಮಹಾಮಂಡಳದ ಪರವಾಗಿ ಹೃತ್ಫೂರ್ವಕ ಅಭಿನಂದನೆಗಳು" ಎಂದು ಒಕ್ಕೂಟದ ಅಧ್ಯಕ್ಷ ಭೀಮಾ ನಾಯ್ಕ್ ಟ್ವೀಟ್ ಮಾಡಿದ್ದಾರೆ.
"ಈ ಹಿಂದೆ "ಕರ್ನಾಟಕ ರತ್ನ" ಡಾ.ಪುನೀತ್ ರಾಜ್‌ಕುಮಾರ್ ರವರು "ನಂದಿನಿ" ಬ್ರಾಂಡ್ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೇ, ದಶಕಗಳ ಹಿಂದಿನಂದಲೂ ಕರುನಾಡ ವರನಟರಾದ ಡಾ. ರಾಜ್‌ಕುಮಾರ್ ರವರು ಸಹ ಉಚಿತವಾಗಿ "ನಂದಿನಿ" ಬ್ರಾಂಡ್‌ಗೆ ರಾಯಭಾರಿ ಸೇವೆಯನ್ನು ಒದಗಿಸಿರುತ್ತಾರೆ. ಆನಾದಿ ಕಾಲದಿಂದಲೂ ಸಹ ಕರ್ನಾಟಕ ಪ್ರತಿಷ್ಠಿತ ಡಾ. ರಾಜ್‌ಕುಮಾರ್ ಕುಟುಂಬವು "ನಂದಿನಿ" ಬ್ರಾಂಡ್ ರಾಯಭಾರಿಯಾಗಿ ಪ್ರಚಾರವನ್ನು ಕೈಗೊಂಡು ರಾಜ್ಯದ ರೈತರ ಹಿತಾಸಕ್ತಿಯನ್ನು ಹೊಂದಿರುವುದು ಅಭಿನಂದನಾರ್ಹ ಸಂಗತಿ" ಎಂದು ಹೇಳಿದ್ದಾರೆ.
ಆಗಸ್ಟ್ ಒಂದರಿಂದ ರಾಜ್ಯದಲ್ಲಿ ನಂದಿನಿ ಹಾಲಿನ ದರ ಲೀಟರ್‌ಗೆ 3 ರೂಪಾಯಿ ಹೆಚ್ಚಾಗಿದೆ. ಈ ದರ ಹೆಚ್ಚಳದ ಮೊತ್ತವನ್ನು ರೈತರಿಗೆ ವರ್ಗಾಯಿಸಲಾಗುವುದು ಎಂದು ಕೆಎಂಎಫ್ ತಿಳಿಸಿದೆ.
3 ರೂಪಾಯಿ ದರ ಏರಿಕೆ ಬಳಿಕ ಪ್ರತಿ ಲೀಟರ್‌ಗೆ ಎಷ್ಟಾಗಲಿದೆ..?
ಟೋನ್ಡ್ ಹಾಲು (ನೀಲಿ ಪಟ್ಟಣ): 42 ರೂ.
ಹೋಮೋಜಿನೈಸ್ಡ್ ಹಾಲು: 43
ಹೋಮೋಜಿನೈಸ್ಡ್ ಹಸುವಿನ ಹಾಲು (ಹಸಿರು ಪೊಟ್ಟಣ): 47
ಸ್ಪೆಷಲ್ ಹಾಲು (ಆರೆಂಜ್ ಪೊಟ್ಟಣ): 48
ಶುಭಂ ಹಾಲು: 48
ಹೋಮೋಜಿನೈಸ್ಡ್ ಸ್ಟ್ಯಾಂಡಡೈಸ್ಡ್ ಹಾಲು: 49
ಸಮೃದ್ಧಿ ಹಾಲು: 53
ಸಂತೃಪ್ತಿ ಹಾಲು: 55
ಮೊಸರು ಪ್ರತಿ ಲೀಟರ್‌ಗೆ: 50












Click it and Unblock the Notifications