Prakash Raj: ದರ್ಶನ್ ಬಂಧನ: ನಟ ಪ್ರಕಾಶ್ ರಾಜ್ ಹೇಳಿದ್ದೇನು..?
ಬೆಂಗಳೂರು, ಜುಲೈ 10: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ಈ ಪ್ರಕರಣದ ಬಗ್ಗೆ ಈಗಾಗಲೇ ಚಿತ್ರರಂಗದ ಅನೇಕ ನಟ ನಟಿಯರು ಪ್ರತಿಕ್ರಿಯಿಸಿದ್ದು, ಬಹುಭಾಷಾ ನಟ ಪ್ರಕಾಶ್ ರಾಜ್ ಈವರೆಗೂ ದರ್ಶನ್ ಬಂಧನದ ಬಗ್ಗೆ ತುಟಿ ಬಿಚ್ಚಿರಲಿಲ್ಲ. ಇದೀಗ ಫಾದರ್ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.
ನಟ ದರ್ಶನ್ ಬಂಧನದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಪ್ರಕಾಶ್ ರಾಜ್, ಈಗ ನಡೆಯುತ್ತಿರುವ ಘಟನಾವಳಿಗಳ ಬಗ್ಗೆ ಕಳೆದ ಒಂದು ತಿಂಗಳಿಂದ ಎಲ್ಲರೂ ಮಾತನಾಡುತ್ತಿದ್ದಾರೆ. ಹೀಗಾಗಿ ನಾವು ಸ್ವಲ್ಪ ಬದಲಾವಣೆ ಮಾಡೋಣ. ಈಗ ದರ್ಶನ್ ಬಗ್ಗೆ ಮಾತನಾಡಬೇಕು, ಸೂರಜ್ ರೇವಣ್ಣ ಬಗ್ಗೆ ಮಾತನಾಡಬೇಕು, ಪ್ರಜ್ವಲ್ ರೇವಣ್ಣ ಬಗ್ಗೆ ಮಾತನಾಡಬೇಕು, ಯಡಿಯೂರಪ್ಪ ಅವರ ಬಗ್ಗೆ ಮಾತನಾಡಬೇಕು ಅಲ್ವಾ..

ಕಳೆದ ಒಂದೂವರೆ ತಿಂಗಳಿಂದ ಎಲ್ಲರೂ ಇದನ್ನೇ ಮಾತನಾಡುತ್ತಿರುವುದಿಂದ ನಾನು ನೀವು ಕುಳಿತುಕೊಂಡು ನೀಟ್ ಪರೀಕ್ಷೆ ಬಗ್ಗೆ ಮಾತನಾಡೋಣ. ಅಂಗನವಾಡಿ ಕಾರ್ಯಕರ್ತೆಯರಿಗೆ ಸಂಬಳ ಜಾಸ್ತಿಯಾಗುತ್ತಿಲ್ಲ ಅದರ ಬಗ್ಗೆ ಮಾತನಾಡೋಣ. ಆಮೇಲೆ ಆಟೋ ಚಾಲಕರಿಗೆ ಬೈಕ್‌ನವರಿಂದ ತೊಂದರೆಯಾಗುತ್ತಿದೆ. ಅದರ ಬಗ್ಗೆ ಮಾತನಾಡೋಣ ಎಂದರು.
ಈ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಮಾಡುವವರಿಗೆ ತಿಂಗಳಿಗೆ ಮೂರು ಸಾವಿರ ರೂಪಾಯಿ ಸಂಬಳ ಅವರ ಬಗ್ಗೆ ಏನಾದರೂ ಮಾತನಾಡೋಣ. ಉಳಿದವರೆಲ್ಲಾ ಬೇರೆ ವಿಚಾರಗಳಿಂದ ಬ್ಯೂಸಿಯಾಗಿರುವುದರಿಂದ ನಾವು ಈ ವಿಚಾರಗಳ ಬಗ್ಗೆ ಮಾತನಾಡೋಣ ಎಂದು ಹೇಳಿದ್ದಾರೆ.
ಇನ್ನು ಸಾಮಾಜಿಕ ಜಾಲತಾಣಗಳ ಬಳಕೆ ಹಾಗೂ ದುರುಪಯೋಗದ ಬಗ್ಗೆ ಮಾತನಾಡಿದ ಪ್ರಕಾಶ್ ರಾಜ್ ಅವರು, ಎಲ್ಲದರಲ್ಲೂ ಒಳ್ಳೆಯದು ಮತ್ತು ಕೆಟ್ಟದು ಇರುತ್ತದೆ. ನಾವು ಒಳ್ಳೆಯದನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು. ಕೆಟ್ಟದರ ಬಗ್ಗೆ ಬಹಳ ಯೋಚನೆ ಮಾಡಬಾರದು ಎಂದು ಹೇಳಿದರು.












Click it and Unblock the Notifications