ಇಂದು ನಟ ದರ್ಶನ್ ಪ್ರಕರಣದ ವಿಚಾರಣೆ, ನ್ಯಾಯಾಂಗ ಬಂಧನ ಮುಂದುವರೆಯುತ್ತಾ?
ಬೆಂಗಳೂರು, ಜುಲೈ 04: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿ ಜೈಲು ಸೇರಿರುವ ನಟ ದರ್ಶನ್ ಪ್ರಕರಣ ಇಂದು ಗುರುವಾರ (ಜುಲೈ 4) ರಂದು ವಿಚಾರಣೆಗೆ ಬರಲಿದೆ. ಇಂದು ಆರೋಪಿ ದರ್ಶನ್ ಅನ್ನು ನ್ಯಾಯಾಲಯದ ಮುಂದೆ ತನಿಖಾಧಿಕಾರಿಗಳು ಹಾಜರುಪಡಿಸಲಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಪೊಲೀಸ್ ಕಸ್ಟಡಿ ಮುಗಿಯುತ್ತಿದ್ದಂತೆ ಜೂನ್ 22ರಂದು ದರ್ಶನ್ ಅನ್ನು ಜುಲೈ 04ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಈ ಜೈಲುವಾಸದ ಅವಧಿ ಇಂದಿಗೆ ಅಂತ್ಯಗೊಂಡಿದ್ದು, ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆ ಪೊಲೀಸರು ಇಂದು ದರ್ಶನ್ ನನ್ನು ಕೋರ್ಟ್ ಮುಂದೆ ಹಾಜರುಪಡಿಸಲಿದ್ದಾರೆ.

ಈಗಾಗಲೇ ಜೈಲಿನಲ್ಲಿರುವ ದರ್ಶನ್ ಬೇಗ ಜಾಮೀನು ಕೊಡಿಸಿ ಎಂದು ಅಂಗಲಾಚುತ್ತಿದ್ದಾರೆ ಎನ್ನಲಾಗಿದೆ. ಇದೊಂದು ಹೈಪ್ರೋಫೈಲ್ ಕೇಸ್ ಆಗಿರುವ ಕಾರಣ ಹಾಗೂ ನಟ ದರ್ಶನ್ ಸೆಲಬ್ರೆಟಿ ಜೊತೆಗೆ ಅನೇಕ ಪ್ರಭಾವಿಗಳು ಆರೋಪಿಗೆ ಪರಿಚಯ ಇರುವುದರಿಂದ ಪೊಲೀಸರು ಅಗತ್ಯ ಎಲ್ಲ ಪ್ರಮುಖ ಸಾಕ್ಷ್ಯಧಾರಗಳನ್ನು ಸಂಗ್ರಹಿಸುತ್ತಿದ್ದಾರೆ.
ಮತ್ತೆ ನ್ಯಾಯಾಂಗ ಬಂಧನ ನಿರೀಕ್ಷೆ?
ಸಾಕ್ಷ್ಯಾಧಾರಗಳ ಆಧಾರದಲ್ಲಿ ಇಂದು ನಟ ದರ್ಶನ್ ಮತ್ತು ನ್ಯಾಯಾಂಗ ಬಂಧನ ಮುಂದುವರೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ. ದರ್ಶನ್ ಜೊತೆಗೆ ಆತನ ಪ್ರೇಯಸಿ ಪವಿತ್ರಾಗೌಡ, ಚಿತ್ರದುರ್ಗದ ಡಿ ಬಾಸ್ ಅಭಿಮಾನಿ ಸಂಘದ ಅಧ್ಯಕ್ಷ ರಘು ದರ್ಶನ್ ಸೇರಿ 18 ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು.
ಪವಿತ್ರಾಗೌಡಗೆ ಅಶ್ಲೀಲ ಮೆಸೇಜ್ ಮಾಡಿದ್ದಕ್ಕೆ ರೇಣುಕಾಸ್ವಾಮಿ ದರ್ಶನ್ ಆಂಡ್ ಗ್ಯಾಂಗ್‌ನಿಂದ ಕೊಲೆ ಆದ ಎನ್ನಲಾಗಿದೆ. ಇತ್ತ ಸಿನಿಮಾ ಇಂಡಸ್ಟ್ರಿಯಲ್ಲಿ ದರ್ಶನ್ ಸಹನಟರು, ಇತರ ಕಲಾವಿದರು ಪ್ರತಿಕ್ರಿಯಿಸುತ್ತಿದ್ದಾರೆ. ಸಾರ್ವಜನಿಕ ವಲಯದಲ್ಲಿ ದರ್ಶನ್ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ದರ್ಶನ್ ಹಾಜರಾಗ್ತಾರಾ ಕೋರ್ಟ್‌ಗೆ?
ದರ್ಶನ್ ಪರ ವಕೀಲರು ಜಾಮೀನಿಗೆ ಅರ್ಜ ಸಲ್ಲಿಸಿಲ್ಲ. ಹೀಗಾಗಿ ನಟ ದರ್ಶನ್ ಅನ್ನು ಕೋರ್ಟ್‌ಗೆ ಪೊಲೀಸರು ಹಾಜರುಪಡಿಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಬದಲಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸುವ ಸಾಧ್ಯತೆ ಇದೆ ಎನ್ನಲಾಗುತ್ತದೆ. ಅಲ್ಲದೇ ಆರೋಪಿ ಕರೆತರುವಾಗ ಅಭಿಮಾನಿಗಳು ಗುಂಪು ಸೇರಬಹುದು ಎನ್ನಲಾಗಿದೆ. ಮತ್ತೊಂದೆಡೆ ಜಾಮೀನು ಅರ್ಜಿ ಹಾಕದ ಹಿನ್ನೆಲೆಯಲ್ಲಿ ಅವರನ್ನು ವಿಚಾರಣೆಗೆ ಕೇಳುವ ಸಾಧ್ಯತೆಯು ಇಲ್ಲ. ಹೀಗಾಗಿ ಕೋರ್ಟ್‌ಗೆ ವಿಚಾರಣೆಗೆಂದು ಹಾಜರು ಪಡಿಸುವುದು ಬಹುತೇಕ ಅನುಮಾನ ಎನ್ನಲಾಗುತ್ತಿದೆ.
ಪತಿಯ ಜಾಮೀನಿಗಾಗಿ ಪತ್ನಿ ಹರಸಾಹಸ
ಕಾನೂನು ಎಲ್ಲರಿಗೂ ಒಂದೇ ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ ಎಂಬ ಮಾತುಗಳು ಕೇಳಿ ಬಂದಿವೆ. ಇತ್ತ ದರ್ಶನ್ ಅನ್ನು ಜೈಲಿನಿಂದ ಬಿಡಿಸಿಕೊಂಡು ಬರಲು ಪತ್ನಿ ವಿಜಯಲಕ್ಷ್ಮೀ ಹರಸಾಹಸಪಡುತ್ತಿದ್ದಾರೆ. ವಕೀಲರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಅಲ್ಲದೇ ಪತ್ನಿ ವಿಜಯಲಕ್ಷ್ಮೀ ಅವರು ದರ್ಶನ್ ಅಭಿಮಾನಿಗಳನ್ನು ಉದ್ದೇಶಿಸಿ ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕುವ ಮೂಲಕ ಎಲ್ಲವು ಸರಿಹೋಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.












Click it and Unblock the Notifications