"ಬೃಂದಾವನ"ದಲ್ಲಿ ಬದುಕಿನ ಯಾನ ಮುಗಿಸಿದ ಚಿರು ಸರ್ಜಾ
ಬೆಂಗಳೂರು, ಜೂನ್ 08: ಹೃದಯಾಘಾತದಿಂದ ನಿನ್ನೆ ಸಾವನ್ನಪ್ಪಿದ ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ (39) ಅವರ ಅಂತ್ಯಕ್ರಿಯೆಯನ್ನು ಇಂದು ಕನಕಪುರ ರಸ್ತೆಯಲ್ಲಿರುವ ನೆಲಗುಳಿ ಸಮೀಪದ ಫಾರ್ಮ್ ಹೌಸ್ ನಲ್ಲಿ ನೆರವೇರಿಸಲಾಯಿತು. ಕುಟುಂಬಸ್ಥರು, ಆಪ್ತೇಷ್ಟರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಜೂನ್ 07ರ ಭಾನುವಾರ ನಟ ಚಿರು ಸರ್ಜಾ ಅವರನ್ನು ಜಯನಗರದ ಅಪೋಲೊ ಸಾಗರ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಮಧ್ಯಾಹ್ನ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದರು. ಅವರ ಅಂತಿಮ ದರ್ಶನಕ್ಕೆ ಬಸವನಗುಡಿಯ ಅವರ ನಿವಾಸದಲ್ಲಿ ಅವಕಾಶ ಕಲ್ಪಿಸಿದ್ದು, ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಬೆಂಗಳೂರಿನ ಬಸವನಗುಡಿಯಿಂದ ಕನಕಪುರ ಬಳಿಯಿರುವ ಧ್ರುವ ಸರ್ಜಾ ಫಾರ್ಮ್ ಹೌಸ್ ಗೆ ಚಿರಂಜೀವಿ ಸರ್ಜಾ ಪಾರ್ಥಿವ ಶರೀರವನ್ನು ರವಾನಿಸಲಾಗಿತ್ತು. ಫಾರ್ಮ್ ಹೌಸ್ "ಬೃಂದಾವನ"ದಲ್ಲಿ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.
ಚಿರು ಸರ್ಜಾ ನೆಚ್ಚಿನ "ಬೃಂದಾವನ"ದಲ್ಲೇ ಅಂತ್ಯಕ್ರಿಯೆಗೆ ಸಿದ್ಧತೆ

ಬೃಂದಾವನದಲ್ಲಿ ಅಂತ್ಯ ಸಂಸ್ಕಾರ
ನಟ ಚಿರು ಸರ್ಜಾ ಅವರ ಅಂತ್ಯ ಸಂಸ್ಕಾರವನ್ನು ಇಂದು ಸಂಜೆ ಐದು ಗಂಟೆಗೆ ಅವರ ಫಾರ್ಮ್ ಹೌಸ್ ನಲ್ಲಿ ನೆರವೇರಿತು. ಒಕ್ಕಲಿಗ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಚಿರು ಸರ್ಜಾ ಅವರ ಕುಟುಂಬ ವರ್ಗ, ಆಪ್ತರು, ಗೆಳೆಯರು, ಅಭಿಮಾನಿಗಳು ಫಾರ್ಮ್ ಹೌಸ್ ನಲ್ಲಿ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದರು.

"ಅಣ್ಣ ಸದಾ ನನ್ನ ಜೊತೆಗಿರಬೇಕು"
ಕನಕಪುರ ರಸ್ತೆ ಬಳಿಯಿರುವ ನೆಲಗುಳಿ ಗ್ರಾಮದ ಬೃಂದಾವನ ಫಾರ್ಮ್ ಹೌಸ್ ಅನ್ನು ಧ್ರುವ ಸರ್ಜಾ ಮೂರು ವರ್ಷಗಳ ಹಿಂದೆ ಖರೀದಿಸಿದ್ದರು. ಅಲ್ಲೇ ಚಿರಂಜೀವಿ ಸರ್ಜಾ ಅವರ ಅಂತ್ಯಕ್ರಿಯೆ ನೆರವೇರಿದೆ. ‘ಅಣ್ಣ ಸದಾ ನನ್ನ ಜೊತೆಗಿರಬೇಕು, ‘ನನ್ನ ಫಾರ್ಮ್ ಹೌಸ್‍ನಲ್ಲೇ ಅಣ್ಣನ ಅಂತ್ಯಕ್ರಿಯೆಯಾಗಲಿ' ಎಂದು ಸಹೋದರ ಧ್ರುವ ಸರ್ಜಾ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಧ್ರುವ ಸರ್ಜಾ ಫಾರ್ಮ್ ಹೌಸ್ ನಲ್ಲೇ ಅಂತಿಮ ವಿಧಿವಿಧಾನಗಳನ್ನು ನಡೆಸಲಾಗಿದೆ.

ಚಿರು ತಬ್ಬಿ ಅತ್ತ ಪತ್ನಿ ಮೇಘನಾ
ನಟ ಚಿರು ಸರ್ಜಾ ಅವರ ಅಂತ್ಯಕ್ರಿಯೆಯ ಸಂದರ್ಭ ಪತ್ನಿ ಮೇಘನಾ, ಚಿರು ಅವರ ಮೃತದೇಹವನ್ನು ತಬ್ಬಿ ಅಳುತ್ತಾ ಹಣೆಗೆ ಮುತ್ತಿಟ್ಟರು. ಮೇಘನಾ ಅವರಿಗೆ ಕುಟುಂಬಸ್ಥರು ಸಮಾಧಾನ ಮಾಡಲು ಯತ್ನಿಸಿದರು. ಮೈದುನ ಧ್ರುವಾ ಸರ್ಜಾ ಕೂಡ ಅತ್ತಿಗೆಗೆ ಸಮಾಧಾನ ಹೇಳಿದರು. ಆ ದೃಶ್ಯ ಎಂಥವರಲ್ಲೂ ಕಣ್ಣೀರು ತರಿಸುವಂತಿತ್ತು.

ಹೃದಯಾಘಾತದಿಂದ ಸಾವನ್ನಪ್ಪಿದ್ದ ನಟ ಚಿರು ಸರ್ಜಾ
ಜೂನ್ 07ರ ಭಾನುವಾರ ನಟ ಚಿರು ಸರ್ಜಾ ಅವರಿಗೆ ತೀವ್ರ ಹೃದಯಾಘಾತವಾಗಿದ್ದು, ಅವರನ್ನು ಅಪೋಲೊ ಸಾಗರ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಮಧ್ಯಾಹ್ನದ ವೇಳೆ ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು. ಆಸ್ಪತ್ರೆಗೆ ಚಿತ್ರರಂಗದ ಗಣ್ಯರು ಆಗಮಿಸಿ ಚಿರು ಸರ್ಜಾ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು. ಚಿರು ಸರ್ಜಾ ಅಂತಿಮ ದರ್ಶನಕ್ಕೆ ಬಸವನಗುಡಿಯ ಅವರ ನಿವಾಸದಲ್ಲಿ ಅವಕಾಶ ಕಲ್ಪಿಸಿದ್ದು, ಅಲ್ಲಿಂದ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಆಗಮಿಸಿ ಕನಕಪುರ ರಸ್ತೆಯಲ್ಲಿನ ಬೃಂದಾವನ ಫಾರ್ಮ್ ಹೌಸ್ ನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.