BREAKING: ದರ್ಶನ್ ಬಳ್ಳಾರಿಗೆ ಶಿಫ್ಟ್ ಬೆನ್ನಲ್ಲೆ ಎಸಿಪಿ ಕಚೇರಿಗೆ ಬಂದ ನಟ ಚಿಕ್ಕಣ್ಣ
ಬೆಂಗಳೂರು, ಆಗಸ್ಟ್ 29: ಕೊಲೆ ಆರೋಪಿ ನಟ ದರ್ಶನ್ ತೂಗುದೀಪ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಗುರುವಾ ಬೆಳಗ್ಗೆ ಬಳ್ಳಾರಿಯ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಗೊಂಡ ಬೆನ್ನಲ್ಲೆ ನಟ ಚಿಕ್ಕಣ್ಣ ಅವರು ಬಸವೇಶ್ವರ ನಗರ ಎಸಿಪಿ ಕಚೇರಿಗೆ ಹಾಜರಾಗಿದ್ದಾರೆ. ತನಿಖಾಧಿಕಾರಿಗಳು ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ ಚಿಕ್ಕಣ್ಣ ಗುರುವಾರ ಬೆಳಗ್ಗೆ ಕಚೇರಿಗೆ ಆಗಮಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ನಟ ಚಿಕ್ಕಣ್ಣನನ್ನು ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆ ತನಿಖಾಧಿಕಾರಿಗಳು ಸಹ ವಿಚಾರಣೆಗೆ ಒಳಪಡಿಸಿದ್ದರು. ನಂತರ ದರ್ಶನ್ ಸೇರಿದಂತೆ ಎಲ್ಲ ಆರೋಪಿಗಳಿಗೆ ನ್ಯಾಯಾಂಗ ಬಂಧನ ನೀಡಲಾಯಿತು. ಅದಾದ ಬಳಿಕ ಎಲ್ಲ ಸೆಲೆಬ್ರೆಟಿಗಳಂತೆ ನಟ ಚಿಕ್ಕಣ್ಣ ಸಹ ಪರಪ್ಪನ ಅಗ್ರಹಾರ ಜೈಲಿಗೆ ತೆರಳಿ ದರ್ಶನ್ ಅವರನ್ನು ಭೇಟಿ ಮಾಡಿ ಮಾತನಾಡಿದ್ದರು.

ಪ್ರಕರಣದಲ್ಲಿ ವಿಚಾರಣೆಗೆ ಒಳಪಟ್ಟ ವ್ಯಕ್ತಿಯು ಜೈಲಲ್ಲಿರುವ ವಿಚಾರಣಧೀನ ಖೈದಿಯನ್ನು ಭೇಟಿ ಮಾಡುವಂತಿಲ್ಲ ಎಂಬ ನಿಯಮ ಇದೆ. ಇದನ್ನು ಮೀರಿ ನಟ ಚಿಕ್ಕಣ್ಣ ದರ್ಶನ್‌ರನ್ನು ಜೈಲಿನಲ್ಲಿ ಭೇಟಿಯಾಗಿದ್ದರು. ಇದರ ಬೆನ್ನಲ್ಲಿ ಚಿಕ್ಕಣ್ಣಿಗೆ ನೋಟಿಸ್ ನೀಡಿದ್ದ ಪೊಲೀಸರು ವಿಚಾರಣೆಗೆ ಬರುವಂತೆ ಸೂಚಿಸಿದ್ದರು.
ಅಂದು ನೋಟಿಸ್ ಸ್ವೀಕರಿಸಿದ್ದ ನಟ ಚಿಕ್ಕಣ್ಣ ಇಂದು ಬಸವೇಶ್ವರ ನಗರದಲ್ಲಿ ವಿಜಯನಗರ ಎಸಿಪಿ ಕಚೇರಿಗೆ ತೆರಳಿದ್ದಾರೆ. ಈ ವೇಳೆ ತನಿಖಾಧಿಕಾರಿಗಳು ಜೈಲಿನಲ್ಲಿ ಭೇಟಿ, ಮಾತುಕತೆ ಕುರಿತು ಒಂದಷ್ಟು ಪ್ರಶ್ನೆಗಳನ್ನು ಕೇಳಲಿದ್ದಾರೆ. ಅಲ್ಲದೇ ರೇಣುಕಾಸ್ವಾಮಿ ಹತ್ಯೆ ನಡೆದ ದಿನ ನಟ ದರ್ಶನ್ ಜೊತೆಗೆ ರಾಜರಾಜೇಶ್ವರಿ ನಗರದ ರೆಸ್ಟೋರೆಂಟ್‌ನಲ್ಲಿ ಜೊತೆಗೆ ಕೂತು ನಟ ಚಿಕ್ಕಣ್ಣ ಪಾರ್ಟಿ ಮಾಡಿದ್ದರು. ಆಗಲೂ ಅವರನ್ನು ಕರೆದು ವಿಚಾರಣೆ ಮಾಡಲಾಗಿತ್ತು. ಪ್ರಕರಣದ ಸಾಕ್ಷಿಯಾಗಿ ಪರಿಗಣಿಸಲಾಗಿತ್ತು. ಹೀಗೆ ಪ್ರಕರಣದಲ್ಲಿ ಸಾಕ್ಷಿಯಾದವರು ಆರೋಪಿಯನ್ನು ಜೈಲಿನಲ್ಲಿ ಭೇಟಿ ಮಾಡುವಂತಿಲ್ಲ. ಮಾಡಿದ್ದಕ್ಕಾಗಿ ಇದೀಗ ನಟ ಚಿಕ್ಕಣ್ಣ ಅವರಿಗೂ ಸಂಕಷ್ಟ ಎದುರಾಗಿದೆ.
ನಟ ದರ್ಶನ್ ಅನ್ನು ನೋಡಲು ಅವರ ಆಪ್ತರಾದ ಮತ್ತು ನಟರಾದ ವಿನೋದ್ ಪ್ರಭಾಕರ್, ಧನ್ವೀರ್, ನಟ ನಿರ್ದೇಶಕ ಪ್ರೇಮ್, ನಟಿ ರಕ್ಷಿತಾ, ರಚಿತಾ ರಾಮ್, ನಟ ಸಾಧುಕೋಕಿಲ್ ಸೇರಿದಂತೆ ಅನೇಕರು ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿದ್ದರು. ನಟ ದರ್ಶನ್ ಕ್ಷೇಮ ವಿಚಾರಿಸಿದ್ದರು.
ಇದೇ ರೀತಿ ನಟ ಚಿಕ್ಕಣ್ಣ ಅವರು ನಟ ಅಭಿಷೇಕ್ ಅಂಬರೀಶ್ ಅವರೊಂದಿಗೆ ದರ್ಶನ್ ಕಾಣಲು ಜೈಲಿಗೆ ಭೇಟಿ ನೀಡಿದ್ದರು. ಇದೀಗ ಇದೇ ಚಿಕ್ಕಣ್ಣ ಅವರನ್ನು ಸಂಕಷ್ಟಕ್ಕೆ ತಂದೊಡ್ಡಿದೆ. ಜೈಲು ಬೇಟಿ ಸಂಬಂಧಿಸಿದಂತೆ ಪೊಲೀಸರಿಂದ ಚಿಕ್ಕಣ್ಣ ವಿಚಾರಣೆ ಎದುರಿಸಿದ್ದಾರೆ.












Click it and Unblock the Notifications