ಬೆಂಗಳೂರಿನಲ್ಲಿ ಮತ್ತೊಂದು ದುರ್ಘಟನೆ: ಮದುವೆಗೆ ನಿರಾಕರಿಸಿದ್ದಕ್ಕೆ ಮಹಿಳೆಗೆ ಆಸಿಡ್
ಬೆಂಗಳೂರು, ಜೂನ್ 10: ಬೆಂಗಳೂರಿನಲ್ಲಿ ಮತ್ತೊಂದು ಮಹಿಳೆಯ ಮೇಲೆ ಆಸಿಡ್ ದಾಳಿಯ ವರದಿಯಾಗಿದೆ. ಬೆಂಗಳೂರಿನ ಸಾರಕ್ಕಿಯಲ್ಲಿ ಘಟನೆ ನಡೆದಿದೆ. ಮಹಿಳೆಗೆ ಪರಿಚಯನಾಗಿದ್ದ ಅಹಮದ್ ಎಂಬ ವ್ಯಕ್ತಿಯೇ ಮಹಿಳೆಯ ಮೇಲೆ ಆಸಿಡ್ ಎರಚಿದ್ದಾನೆ. ಕುಮಾರಸ್ವಾಮಿ ಲೇಔಟ್ ಪೊಲೀಸರು ಗಾಯಾಳು ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿದ್ದಾರೆ. ಮಹಿಳೆ ಮದುವೆಯಾಗಲು ನಿರಾಕರಿಸಿದ್ದೇ ಆಸಿಡ್ ದಾಳಿಗೆ ಕಾರಣ ಎನ್ನಲಾಗಿದ್ದು ಆರೋಪಿಗಾಗಿ ಕುಮಾರಸ್ವಾಮಿ ಲೇಔಟ್ ಪೊಲೀಸರು ಬಲೆ ಬೀಸಿದ್ದಾರೆ.
ಬೆಂಗಳೂರಿನ ಗೋರಿಪಾಳ್ಯದ ನಿವಾಸಿ ಅಹಮದ್ ಎಂಬಾತ ಮಹಿಳೆಯ ಮೇಲೆ ಆಸಿಡ್ ಎರಚಿದ್ದಾನೆ. ಸಂತ್ರಸ್ಥ ಮಹಿಳೆ ಮತ್ತು ಅಹಮದ್ ಇಬ್ಬರು ಒಬ್ಬರನ್ನೊಬ್ಬರು ಇಷ್ಟಪಟ್ಟಿದ್ದರು. ಸಂತ್ರಸ್ಥೆಗೆ ಮದುವೆಯಾಗುವಂತೆ ಅಹಮದ್ ಒತ್ತಡವನ್ನು ಹಾಕುತ್ತಿದ್ದ. ಸಂತ್ರಸ್ಥೆ ಮೊದಲೇ ಮದುವೆಯಾಗಿ ಮಗಳಿದ್ದ ಕಾರಣ ಮರುಮದುವೆಯಾಗಲು ಸಮಯಾವಕಾಶವನ್ನು ಕೇಳಿದ್ದಳು. ಆದರೆ ಅಹಮದ್ ತಕ್ಷಣವೇ ಮದುವೆಯಾಗುವಂತೆ ಪೀಡಿಸುತ್ತಿದ್ದ. ಇದರಿಂದಾಗಿ ಅಹಮದ್ ಮತ್ತು ಸಂತ್ರಸ್ಥೆಗೆ ಗಲಾಟೆಗಳು ನಡೆದಿದ್ದವು ಎನ್ನಲಾಗಿದೆ. ಸಂತ್ರಸ್ಥ ಮಹಿಳೆ ಕುಮಾರಸ್ವಾಮಿ ಲೇಔಟ್‌ನಿಂದ ಜೆಪಿನಗರಕ್ಕೆ ಕೆಲಸದ ನಿಮಿತ್ತ ಹೋಗುತ್ತಿದ್ದ ವೇಳೆಯಲ್ಲಿ ಸಾರಕ್ಕಿ ಸಿಗ್ನಲ್ ಬಳಿ ಮಹಿಳೆಯನ್ನು ಅಡ್ಡಗಟ್ಟಿ ಆಸಿಡ್ ಎರಚಿ ಎಸ್ಕೇಪ್ ಆಗಿದ್ದಾನೆ. ಆಸಿಡ್ ದಾಳಿಯಿಂದ ಮುಖಕ್ಕೆ ಮತ್ತು ಬಲಗಣ್ಣಿಗೆ ಗಂಭೀರವಾದ ಗಾಯವಾಗಿದೆ ಎನ್ನಲಾಗಿದ್ದು ಸಂತ್ರಸ್ಥ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾಳೆ.

ಮದುವೆಯಾಗಿ ಮಗಳಿದ್ದ ಆಂಟಿಗೆ ಮರುಮದುವೆಗೆ ಟಾರ್ಜರ್
ಜೆಜೆನಗರ ನಿವಾಸಿ ಅಹಮದ್ ಮದುವೆಯಾಗಿ ಮಗಳಿದ್ದ ಮಹಿಳೆಯನ್ನು ಪ್ರೀತಿಸುತ್ತಿದ್ದ. ಈ ಪ್ರೀತಿಗೆ ಸಂತ್ರಸ್ಥೆಯ ಒಪ್ಪಿಗೆಯೂ ಇತ್ತು ಎನ್ನಲಾಗಿದೆ. ಆದರೆ ಮದುವೆ ಪ್ರಸ್ತಾಪಕ್ಕೆ ಕೆಲವು ದಿನ ಕಾಯುವಂತೆ ಸಂತ್ರಸ್ಥೆ ದಿನವನ್ನು ಮುಂದೂಡಿದ್ದರಿಂದ ಮರುಮದುವೆಗಾಗಿ ಮಹಿಳೆಗೆ ಅಹಮದ್ ಇನ್ನಿಲ್ಲದಂತೆ ಕಾಡುತ್ತಿದ್ದ. ಮದುವೆಗೆ ನಿರಾಕರಿಸಿದ್ದೇ ಆಸಿಡ್ ದಾಳಿಯನ್ನು ಮಾಡಿದ್ದಾನೆ.

ಎರಡು ತಿಂಗಳ ಅಂತರದಲ್ಲಿ ನಡೆದ ಎರಡನೇ ದಾಳಿ
ಏಪ್ರಿಲ್ 28ರಂದು ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಯುವತಿಯ ಮೇಲೆ ನಾಗೇಶ್ ಎಂಬಾತ ಆಸಿಡ್ ಎರಚಿದ್ದ. ಪ್ರೀತಿಸಲು ಯುವತಿ ನಿರಾಕರಿಸಿದ್ದರಿಂದಾಗಿ ನಾಗೇಶ್ ಈ ಕೃತ್ಯ ಎಸಗಿ ಪರಾರಿಯಾಗಿದ್ದ. ಹದಿನಾರು ದಿನ ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಸ್ವಾಮೀಜಿಯ ವೇಷವನ್ನು ಧರಿಸಿದ್ದವನನ್ನು ಕಾಮಾಕ್ಷಿ ಪಾಳ್ಯ ಪೊಲೀಸರು ಬಂಧಿಸಿ ಕರೆತಂದಿದ್ದರು. ಆಸಿಡ್ ದಾಳಿಗೆ ಒಳಗಾದ ಯುವತಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆಯನ್ನು ಪಡೆಯುತ್ತಿದ್ದಾಳೆ. ಈ ಘಟನೆ ಮಾಸುವ ಮುನ್ನವೇ ಬೆಂಗಳೂರಿನಲ್ಲಿ ಮತ್ತೊಂದು ಆಸಿಡ್ ದಾಳಿಯಾಗಿದೆ.

ಕುಮಾರಸ್ವಾಮಿ ಲೇಔಟ್ ಪೊಲೀಸರು ಅಲರ್ಟ್
ಬೆಂಗಳೂರಿನಲ್ಲಿ ಕಳೆದ ಎರಡು ತಿಂಗಳಲ್ಲೇ ಎರಡನೇ ಆಸಿಡ್ ದಾಳಿ ಪ್ರಕರಣ ಇದಾಗಿದ್ದರಿಂದ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ನೇತೃತ್ವದ ಮಾರ್ಗದರ್ಶನದಲ್ಲಿ ಆರೋಪಿ ಅಹಮದ್‌ಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ. ಜೆಜೆ ನಗರದ ನಿಾಸಿಯಾಗಿರುವ ಆರೋಪಿ ಅಹಮದ್‌ನ ಬಗ್ಗೆ ಜೆಜೆನಗರ ಪೊಲೀಸ್ ಠಾಣೆಯಲ್ಲೂ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಆರೋಪಿ ಅಹಮದ್ ಬೆಂಗಳೂರು ಬಿಟ್ಟು ತೆರಳದಂತೆ ನೋಡಿಕೊಂಡಿ ಆರೋಪಿಯನ್ನು ಬಂಧಿಸಲು ಕುಮಾರಸ್ವಾಮಿ ಲೇಔಟ್ ಪೊಲೀಸರು ಅಲರ್ಟ್ ಆಗಿದ್ದಾರೆ. ಈಗಾಗಲೇ ಸಿಸಿಟಿವಿಯ ಪರಿಶೀಲನೆಯನ್ನು ಸಹ ನಡೆಸುತ್ತಿದ್ದಾರೆ.

ಸಂತ್ರಸ್ಥ ಮಹಿಳೆ ಪ್ರಾಣಾಪಾಯವಿಲ್ಲ
"ಸಂತ್ರಸ್ಥ ಮಹಿಳೆ ಮತ್ತು ಆರೋಪಿ ಇಬ್ಬರು ಒಂದೇ ಫ್ಯಾಕ್ಟರಿಯಲ್ಲಿ ಕೆಲಸವನ್ನು ಮಾಡುತ್ತಿದ್ದರು. ಆರೋಪಿ ಮಹಿಳೆಯನ್ನು ಪ್ರೀತಿಸುತ್ತಿದ್ದ. ಮಹಿಳೆಗೆ ಮದುವೆಯಾಗುವಂತೆ ಆರೋಪ ಒತ್ತಡವನ್ನು ಹಾಕಿದ್ದ. ಆದರೆ ಮದುವೆಯಾಗಿದ್ದ 32-34 ವರ್ಷದ ಮಹಿಳೆ ಮದುವೆಗೆ ನಿರಾಕರಿಸಿದ್ದರು. ಇದರಿಂದ ಮೊದಲೆ ಒಂದು ಬಾಟಲ್ ನಲ್ಲಿ ಟಾಯ್ಲೆಟ್ ಸ್ವಚ್ಛ ಮಾಡಲು ಬಳಸುವ ಲಿಕ್ವಿಡ್ , ಸಲ್ಫರಿಕ್ ಆಸಿಡ್ ಮಿಶ್ರಿತವಾದ ಲಿಕ್ವಿಡ್‌ನ ದಾಳಿಯನ್ನು ಮಾಡಿದ್ದಾನೆ. ತಕ್ಷಣಕ್ಕೆ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಕಣ್ಣನ್ನು ಸ್ವಚ್ಛಗೊಳಿಸಲಾಗಿದೆ. ಪ್ರಾಣಾಪಾಯವಿಲ್ಲ ಸಂಜಯ್ ಗಾಂಧಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಆರೋಪಿಯನ್ನು ಶೀಘ್ರವೇ ಬಂಧಿಸುತ್ತೇವೆ'' ಎಂದು ತಿಳಿಸಿದ್ದಾರೆ.












Click it and Unblock the Notifications