ಆಸಿಡ್ ದಾಳಿಕೋರನನ್ನು ಹಿಡಿಯಲಾರದೇ ಹರಸಾಹಸ ಪಡುತ್ತಿರುವ ಪೊಲೀಸರು
ಬೆಂಗಳೂರು, ಮೇ 3: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದ ಆಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಹಿಡಿಯಲು ಬೆಂಗಳೂರು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಆಸಿಡ್ ದಾಳಿಕೋರ ನಾಗೇಶ್ ಎಲ್ಲಿದ್ದಾನೆ ಎಂಬ ಸಣ್ಣ ಸುಳಿವು ಸಹ ಸಿಗದೇ ಪೊಲೀಸರು ಪರದಾಡುತ್ತಿದ್ದಾರೆ. ನಾಗೇಶ್ ಪತ್ತೆಗಾಗಿ ಲುಕ್‌ಔಟ್ ನೋಟಿಸ್ ಕೊಟ್ಟಿದ್ದಾರೆ. ಇನ್ನೊಂದೆಡೆ ನಾಗೇಶ್ ಸ್ನೇಹಿತರು, ಗಾರ್ಮೆಂಟ್ಸ್ ನಲ್ಲಿ ನಾಗೇಶ್ ಜೊತೆೆ ಆತ್ಮಿಯವಾಗಿದ್ದ ಕೆಲಸಗಾರರು ಸಹ ಇನ್ನಿಲ್ಲದ ಟಾರ್ಚರ್ ಅನುಭವಿಸುತ್ತಿದ್ದಾರೆ.
ನಾಗೇಶ್ ತನ್ನನ್ನು ಪ್ರೀತಿಸಲು ಮತ್ತು ಮದುವೆಯಾಗಲು ನಿರಾಕರಿಸಿದ ಯುವತಿಯ ಮೇಲೆ ಆಸಿಡ್ ದಾಳಿ ನಡೆಸಿ ಬರೋಬ್ಬರಿ ಏಳು ದಿನಗಳು ಕಳೆದಿವೆ. ಕೃತ್ಯ ನಡೆದ ಕೆಲವೇ ಕ್ಷಣಗಳಲ್ಲಿ ಪೊಲೀಸರು ಅಲರ್ಟ್ ಆಗಿದ್ದರೇ ನಾಗೇಶ್ ತಪ್ಪಿಸಿಕೊಳ್ಳುವ ಪ್ರಮೇಯವೇ ಉದ್ಭವವಾಗುತ್ತಿರಲಿಲ್ಲ. ಆದರೆ ಅರೇ ಕ್ಷಣ ಪೊಲೀಸರು ಸೋಮಾರಿತನವನ್ನು ತೋರಿದ್ದರಿಂದಾಗಿ ನಾಗೇಶ್ ಎಸ್ಕೇಪ್ ಆಗಲು ಅನುಕೂಲವಾಗಿತ್ತು. ಇದೀಗ ನಾಗೇಶ್ ಬಂಧನಕ್ಕಾಗಿ ಇನ್ನಿಲ್ಲದ ಕಸರತ್ತನ್ನು ಪೊಲೀಸರು ಮಾಡುತ್ತಿದ್ದಾರೆ.
ನಾಗೇಶ್ ಹುಡುಕಾಟಕ್ಕೆ ಲುಕ್‌ಔಟ್ ನೋಟಿಸ್
ಸದ್ಯ ನಾಗೇಶ್ ಹುಡುಕಾಟವನ್ನು ತೀವ್ರಗೊಳಿಸಿರುವ ಕಾಮಾಕ್ಷಿ ಪಾಳ್ಯ ಪೊಲೀರು, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣಗಳಿಗೆ, ಎಲ್ಲಾ ರಾಜ್ಯಗಳಿಗೂ ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದಾರೆ. ಇನ್ನು ಇದರ ಜೊತೆ ನಾಗೇಶ್‌ನ ಫೋಟೋ, ಆತ ಗಡ್ಡಧಾರಿಯಾಗಿದ್ದರೆ ಹೇಗೆ ಕಾಣಿಸುತ್ತಾನೆ, ತಲೆಯಲ್ಲಿ ಕೂದಲು ಬೋಳಿಸಿಕೊಂಡರೆ ಹೇಗೆ ಕಾಣಿಸುತ್ತಾನೆ ಎಂಬೆಲ್ಲಾ ಮಾದರಿಯ ಭಾವಚಿತ್ರಗಳನ್ನು ತಯಾರಿಸಲಾಗಿದೆ.

ಲುಕ್ ಔಟ್ ನೋಟಸ್ ನಲ್ಲಿರುವ ಅಂಶಗಳೇನು..?
ಆರೋಪಿ : ನಾಗೇಶ್ ಬಾಬು ಅಲಿಯಸ್ ನಾಗೇಶ್
ಜಿಲ್ಲೆ: ಬೆಂಗಳೂರು ನಗರ ಜಿಲ್ಲೆ
ಪೊಲೀಸ್ ಠಾಣೆ: ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ.
ಎಫ್ ಐಆರ್ ಸಂಖ್ಯೆ: 163/20222
ಇನ್ನು ಆರೋಪಿಯ ಬಣ್ಣ ಮತ್ತು ವಯಸ್ಸು ಸೇರಿದಂತೆ ಇತರೆ ಮುಖಚಹರೆ ಗುರುತು ಪತ್ತೆೆ ಮಾಡುವ ಸಲುವಾಗಿ ಸಂಪೂರ್ಣ ವಿವರವನ್ನು ನೀಡಲಾಗಿದೆ.

ನಾಗೇಶ್ ಸ್ನೇಹಿತರು ಮತ್ತು ಗಾರ್ಮೆಂಟ್ಸ್ ನೌಕರರಿಗೂ ತೊಂದರೆ
ನಾಗೇಶ್ ತಲೆ ಮರೆಸಿಕೊಂಡಿರುವ ಕಾರಣ ಆತನ ಬಂಧನಕ್ಕಾಗಿ ಹತ್ತಕ್ಕೂ ಹೆಚ್ಚು ತಂಡಗಳು ಬೇರೆ ಬೇರೆ ಆಯಾಮಗಳಲ್ಲಿ ಹುಡುಕಾಟವನ್ನು ನಡೆಸುತ್ತಿದ್ದಾರೆ. ಇನ್ನು ನಾಗೇಶ್ ಸ್ನೇಹಿತರನ್ನು ಮತ್ತು ನಾಗೇಶ್ ಜೊತೆಗೆ ಕೆಲಸ ಮಾಡುತ್ತಿದ್ದವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆತ ಎಲ್ಲಿದ್ದಾನೆ. ಎಲ್ಲಿರಬಹುದು ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳುತ್ತಾ ಬೆಳಗ್ಗೆಯಿಂದ ಸಂಜೆವರೆಗೂ ಕೆಲವು ಸ್ನೇಹಿತರನ್ನು ಮತ್ತು ಗಾಂರ್ಮೆಂಟ್ಸ್ ನೌಕರರನ್ನು ಕರೆಸಿ ಕೂರಿಸಿಕೊಳ್ಳುತ್ತಿದ್ದಾರೆ. ನಾಗೇಶನ ಕೃತ್ಯದಿಂದಾಗಿ ಸ್ನೇಹಿತರು ಇನ್ನಿಲ್ಲದ ನರಕಯಾತನೆಯನ್ನು ಅನುಭವಿಸುವಂತಾಗಿದೆ.

ಕಮೀಷನರ್ ಸಾಹೇಬ್ರೇ ಇನ್ನು ಸಂಜೆಯಾಗಿಲ್ವಾ!
ಮಾನ್ಯ ನಗರ ಪೊಲೀಸ್ ಆಯುಕ್ತರಾದ ಕಮಲ್ ಪಂಥ್ ರವರು ಮೂರು ದಿನದ ಹಿಂದೆಯೇ, ""ಸಂಜೆಯೊಳಗೆ ಆರೋಪಿಯನ್ನು ಹಿಡಿಯುವುದಾಗಿ,'' ಹೇಳಿದ್ದರು. ಆದರೆ ಆಯುಕ್ತರು ಯಾವ ದಿನದ ಸಂಜೆಯೊಳಗೆ ಆರೋಪಿಯನ್ನು ಹೇಳಿದ್ದರು ಎಂಬುದು ತಿಳಿಯತ್ತಿಲ್ಲ. ಯಾಕೆಂದರೆ ಮೂರು ದಿನದ ಹಿಂದೆಯೇ ಆರೋಪಿಯನ್ನು ಬಂಧಿಸುವುದಾಗಿ ಬಹಳಷ್ಟು ನಂಬಿಕೆಯನ್ನು ಹೊಂದಿದ್ದರು. ಆದರೆ, ನಾಗೇಶ್ ಸುಳಿವು ಮಾತ್ರ ಪತ್ತೆಯಾಗದಿರುವುದು ಪೊಲೀಸರ ತಲೆನೋವನ್ನು ಹೆಚ್ಚಿಸುವುವಂತೆ ಮಾಡಿದೆ. ಹೇಗಾದರೂ ಮಾಡಿ ನಾಗೇಶ್‌ನನ್ನು ಬಂಧಿಸಬೇಕು ಎಂದು ಬಲೆ ಬೀಸಿದ್ದಾರೆ.
Recommended Video
ಆಸಿಡ್ ದಾಳಿಗೆ ಒಳಗಾಗಿದ್ದ ಸಂತ್ರಸ್ತ ಯುವತಿ ಕ್ರಮೇಣ ಚೇತರಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಆದರೆ ಆಸಿಡ್ ದಾಳಿಯನ್ನು ನಡೆಸಿದ ಆರೋಪಿ ಮಾತ್ರ ಎಲ್ಲಿದ್ದಾನೆ ಎಂಬುದು ಈವರೆಗೂ ಪತ್ತೆಯಾಗಿಲ್ಲ. ಆರೋಪಿ ನಾಗೇಶನ ಬಂಧನಕ್ಕಾಗಿ ಪೊಲೀಸರು ಊರೂರು ತಿರುಗುವಂತಾಗಿದೆ.












Click it and Unblock the Notifications