ಬಲವಂತದ ಮತಾಂತರ ಆರೋಪ ಹೊತ್ತಿರುವವನಿಂದಲೇ ನಿಷೇಧ ಪ್ರಶ್ನಿಸಿ ಅರ್ಜಿ
ಬೆಂಗಳೂರು, ನವೆಂಬರ್ 22: ಇದೊಂದು ವಿಚಿತ್ರ ಪ್ರಕರಣ, ಬಲವಂತದ ಮತಾಂತರದ ಆರೋಪ ಹೊತ್ತಿರುವ ವ್ಯಕ್ತಿಯೇ ಮತಾಂತರ ನಿಷೇಧ ಕಾಯಿದೆ ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬಾ ತಾಲೂಕಿನ ವಿಕ್ಟರ್ ಮಾರ್ಟಿಸ್ ಮತಾಂತರ ನಿಷೇಧ ಕಾಯ್ದೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸಿಜೆ ಪಿ.ಬಿ.ವರಲೇ ಅವರಿದ್ದ ವಿಭಾಗೀಯಪೀಠದ ಸೋಮವಾರ ವಿಚಾರಣೆ ನಡೆಸಿದೆ.
ಅರ್ಜಿದಾರರ ವಾದ ಆಲಿಸಿದ ಬಳಿಕ ಅಡ್ವೊಕೇಟ್ ಜನರಲ್ ಪ್ರಭುಲಿಂಗ್ ನಾವದಗಿ, ಅರ್ಜಿದಾರರ ವಿರುದ್ದವೇ ಎರಡು ಬಲವಂತದ ಮತಾಂತರ ಕೇಸ್‌ಗಳಿವೆ. ಅಂತಹ ವ್ಯಕ್ತಿಯ ಅರ್ಜಿ ಪುರಸ್ಕರಿಸಬಾರದು ಎಂದು ಹೈಕೋರ್ಟ್‌ಗೆ ಮನವಿ ಮಾಡಿದರು.

ಆಗ ನ್ಯಾಯಪೀಠ, ಅರ್ಜಿದಾರರ ವಿರುದ್ದವೇ ಕ್ರಿಮಿನಲ್ ಪ್ರಕರಣಗಳಿವೆ. ಹಾಗಾಗಿ ಅದನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿ ಪರಿಗಣಿಸುವುದು ಹೇಗೆ ಎಂದು ಪ್ರಶ್ನಿಸಿ ಒಂದು ವಾರದಲ್ಲಿ ಪ್ರತಿಕ್ರಿಯಿಸುವಂತೆ ಅರ್ಜಿದಾರರಿಗೆ ಹೈಕೋರ್ಟ್ ಸೂಚನೆ ನೀಡಿ ವಿಚಾರಣೆಯನ್ನು ನ.28 ಕ್ಕೆ ಮುಂದೂಡಿತು.
ವಂಚನೆ ಆರೋಪ ಕೈಬಿಡಲು ನಕಾರ
ನೂರು ಕೋಟಿ ಹಣ ಸಾಲ ಕೊಡಿಸುವುದಾಗಿ ಹೇಳಿ ಮುದ್ರಾಂಕ ಶುಲ್ಕದ ಹೆಸರಿನಲ್ಲಿ ಒಂದು ಕೋಟಿ ರೂ. ಪಡೆದು ವಂಚಿಸಿದ ಪ್ರಕರಣದಲ್ಲಿ ಸಚಿವಾಲಯದ ಕಾರು ದುರುಪಯೋಗ ಮಾಡಿದ ಸಂಬಂಧ ಶಾಸಕರ ಭವನದ ಕಾರು ಚಾಲಕನ ವಿರುದ್ಧದ ಆರೋಪವನ್ನು ಕೈ ಬಿಡಲು ಹೈಕೋರ್ಟ್ ನಿರಾಕರಿಸಿದೆ.
ತಮ್ಮ ವಿರುದ್ಧದ ಆರೋಪಗಳನ್ನು ಕೈ ಬಿಡಲು ನಿರಾಕರಿಸಿದ 8ನೇ ಎಸಿಎಂಎಂ ಕೋರ್ಟ್ ಆದೇಶ ರದ್ದುಗೊಳಿಸಲು ಕೋರಿ ನಗರದ ಪ್ಯಾಲೆಸ್ ಗುಟ್ಟಹಳ್ಳಿ ನಿವಾಸಿ ಬಿ.ಎಂ. ಸತೀಶ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಆದೇಶಿಸಿದೆ.

"ಅರ್ಜಿದಾರ ಶಾಸಕರ ಭವನದ ಸೇವೆಗೆ ಮೀಸಲಿಟ್ಟ ಸರ್ಕಾರಿ ಕಾರಿನ ಚಾಲಕರಾಗಿದ್ದಾರೆ. ಸಚಿವಾಲಯಕ್ಕೆ ಸೇರಿದ ಕಾರನ್ನು ಅಕ್ರಮ ಚಟುವಟಿಕೆಗಳಿಗೆ ಬಳಸಿಕೊಂಡಿದ್ದಾರೆಂಬ ಆರೋಪವಿದೆ. ಈ ಕುರಿತ ಸಾಕ್ಷ್ಯಾಧಾರಗಳ ಬಗ್ಗೆ ನ್ಯಾಯಾಲಯ ಸೂಕ್ತ ಪರಿಶೀಲನೆ ನಡೆಸಿ, ಅರ್ಜಿದಾರನ ವಿರುದ್ಧದ ಆರೋಪಗಳನ್ನು ಕೈ ಬಿಡಲು ನಿರಾಕರಿಸಿದ ಎಸಿಎಂಎಂ ಕೋರ್ಟ್ ಆದೇಶದಲ್ಲಿ ಯಾವುದೇ ತಪ್ಪಿಲ್ಲ" ಎಂದು ಅರ್ಜಿ ವಜಾ ಮಾಡಿದೆ.
ಅರ್ಜಿದಾರ ಪರ ವಕೀಲರು, ಪ್ರಕರಣದ 5ನೇ ಆರೋಪಿಯ ಸೂಚನೆ ಮೇರೆಗೆ ದೂರುದಾರೆ ಇಂದಿರಾ ಮತ್ತು ರಮೇಶ್ ಎಂಬುವರನ್ನು ನಗರದ ಖಾಸಗಿ ಹೋಟೆಲ್‌ನಿಂದ ವಿಧಾನಸೌಧದವರೆಗೆ ಸರ್ಕಾರಿ ವಾಹನದಲ್ಲಿ ಕರೆದುಕೊಂಡು ಹೋದ ಬಗ್ಗೆ ಅರ್ಜಿದಾರರ ಮೇಲೆ ಆರೋಪವಿದೆ. ಅದು ಬಿಟ್ಟು ಇನ್ಯಾವುದೇ ಆರೋಪಕ್ಕೆ ಅರ್ಜಿದಾರರ ವಿರುದ್ಧ ಪುರಾವೆ ಇಲ್ಲ. ತನಿಖಾಧಿಕಾರಿ ಅವರನ್ನು ಅನಗತ್ಯವಾಗಿ ಪ್ರಕರಣದಲ್ಲಿ ಸಿಲುಕಿದ್ದಾರೆ. ಅವರ ವಿರುದ್ಧದ ಆರೋಪ ಕೈಬಿಡಬೇಕೆಂದು ಕೋರಿದರು.
ಪ್ರಕರಣದ ವಿವರವೇನು?
ತಮಿಳುನಾಡಿನ ಕೊಯಮತ್ತೂರಿನ ಎಸ್. ಇಂದಿರಾ 2019ರ ಜ.17ರಂದು ಕಬ್ಬನ್ ಪಾರ್ಕ್ ಠಾಣೆ ಪೊಲೀಸರಿಗೆ ದೂರು ನೀಡಿ, ಗೋಡಂಬಿ ವ್ಯಾಪಾರಕ್ಕಾಗಿ100 ಕೋಟಿ ರೂ ಸಾಲ ಕೊಡಿಸಲು ತಮಗೆ ಪರಿಚಯವಿದ್ದ ರಮೇಶ್ ಅವರಲ್ಲಿ ಕೋರಿದ್ದೆ. ಆಂಧ್ರಪ್ರದೇಶದ ಇಳಮದಿರ, ಸುಂದರಂ, ಸೆಲ್ವಂ ಮತ್ತು ಅಜಯ್ ಮತ್ತವರ ತಂದೆ ಕೆ.ಕೆ.ಶೆಟ್ಟಿ ಕಡಿಮೆ ಬಡ್ಡಿಗೆ ಸಾಲ ಕೊಡುವುದಾಗಿ ರಮೇಶ್ ತಿಳಿಸಿದ್ದರು. ನಂತರ ಈ ಕುರಿತು ಎಲ್ಲರ ಮಧ್ಯೆ ಚರ್ಚೆ ಸಹ ನಡೆಯಿತು. ನಂತರ ಮುದ್ರಾಂಕ ಶುಲ್ಕಕ್ಕಾಗಿ ನಗರದ ಖಾಸಗಿ ಹೋಟೆಲ್ ಆವರಣದಲ್ಲಿ ತಮ್ಮಿಂದ 1.12 ಕೋಟಿ ರೂ. ಹಣವನ್ನು ಅಜಯ್ ಮತ್ತಿತರು ಪಡೆದು ಹಣ ಹಿಂದಿರುಗಿಸದೆ ವಂಚಿಸಿದ್ದಾರೆ ಎಂದು ಆರೋಪಿಸಿದ್ದರು.
ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಿದ್ದ ಪೊಲೀಸರು, ನಂಬಿಕೆ ದ್ರೋಹ, ವಂಚನೆ, ಅಪರಾಧಿಕ ಒಳಸಂಚು ಇನ್ನಿತರ ಆರೋಪಗಳ ಸಂಬಂಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. 13ನೇ ಆರೋಪಿಯಾಗಿರುವ ಅರ್ಜಿದಾರ, ತಮ್ಮ ವಿರುದ್ಧದ ಆರೋಪಗಳನ್ನು ಕೈಬಿಡಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಎಸಿಎಂಎಂ ನ್ಯಾಯಾಲಯವು 2019ರ ಆಗಸ್ಟ್ 19ದು ವಜಾಗೊಳಿಸಿತ್ತು. ಹಾಗಾಗಿ ಆತ ಹೈಕೋರ್ಟ್‌ಗೆ ಮೆಟ್ಟಿಲೇರಿದ್ದನು.












Click it and Unblock the Notifications