ಹೊಸಕೋಟೆ ಬಳಿ ಶೂಟೌಟ್, 7 ಲಕ್ಷ ದರೋಡೆ
ಬೆಂಗಳೂರು, ಡಿ. 18 : ಕಂಪನಿಯ ಅಕೌಂಟ್ ಸೂಪರ್ ವೈಸರ್ ಅವರ ಮೇಲೆ ಗುಂಡಿನ ದಾಳಿ ನಡೆಸಿ, ಹಣವನ್ನು ದರೋಡೆ ಮಾಡಿರುವ ಘಟನೆ ಹೊಸಕೋಟೆ ಬಳಿ ಗುರುವಾರ ಸಂಜೆ ನಡೆದಿದೆ. ಗುಂಡಿನ ದಾಳಿಯಿಂದ ಗಾಯಗೊಂಡ ಸೂಪರ್ ವೈಸರ್‌ಅನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ.
ಗುರುವಾರ ಸಂಜೆ ಹೊಸಕೋಟೆ ಬಳಿಯ ಪಿಲ್ಲಗುಂಡೆ ಎಂಬಲ್ಲಿ ವಾಮ್ ಗೇರ್ ಕಂಪನಿಯ ಸೂಪರ್ ವೈಸರ್ ವಿರೇಂದ್ರ ಗುಪ್ತಾ (28) ಅವರ ಮೇಲೆ ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಬಳಿಕ ಅವರ ಕಾರಿನಲ್ಲಿದ್ದ 7 ಲಕ್ಷ ರೂ. ಹಣವನ್ನು ದೋಚಿ ಪರಾರಿಯಾಗಿದ್ದಾರೆ.

ವಿರೇಂದ್ರ ಗುಪ್ತಾ ಅವರ ಎದೆ, ತೊಡೆ ಭಾಗಕ್ಕೆ ಗುಂಡುಗಳು ಹೊಕ್ಕಿದ್ದು, ಅವರನ್ನು ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸೂಲಿಬೆಲೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳು : ವಿರೇಂದ್ರ ಗುಪ್ತಾ ಅವರು ಬ್ಯಾಂಕಿನಿಂದ ಹಣ ತೆಗೆದುಕೊಂಡು ಬರುವುದನ್ನು ಮೊದಲೇ ತಿಳಿದಿದ್ದ ದುಷ್ಕರ್ಮಿಗಳು ಅವರನ್ನು ಹಿಂಬಾಲಿಕೊಂಡು ಬಂದಿದ್ದಾರೆ. ಪಿಲ್ಲಗುಂಡೆ ಬಳಿ ಅವರು ಕಾರಿನಿಂದ ಇಳಿಯುತ್ತಿದ್ದಂತೆ ಅವರ ಮೇಲೆ ಗುಂಡಿನ ದಾಳಿ ಮಾಡಿ, ಕಾರಿನಲ್ಲಿದ್ದ ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ. ಇದು ಪರಿಚಿತರದ್ದೇ ಕೃತ್ಯವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.












Click it and Unblock the Notifications