ಜ್ಞಾನಭಾರತಿ ಆವರಣದಲ್ಲಿ ವಿದ್ಯಾರ್ಥಿನಿಗೆ ಅಪಘಾತ: 1.5ಕೋಟಿ ರೂ. ಪರಿಹಾರಕ್ಕೆ ವಿದ್ಯಾರ್ಥಿಗಳ ಆಗ್ರಹ
ಬೆಂಗಳೂರು, ಅಕ್ಟೋಬರ್ 11: ಬೆಂಗಳೂರು ವಿಶ್ವವಿದ್ಯಾನಿಯಲದ ವಿದ್ಯಾರ್ಥಿನಿ ಅಪಘಾತ ಪ್ರಕರಣ ಸಂಬಂಧ ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರಿದಿದೆ. ಗಂಭೀರ ಸ್ಥಿತಿಯಲ್ಲಿರುವ ವಿದ್ಯಾರ್ಥಿನಿಗೆ 1.5ಕೋಟಿ ರೂ. ಪರಿಹಾರ ನೀಡಬೇಕು, ಸ್ಥಳಕ್ಕೆ ಕೂಡಲೇ ಶಿಕ್ಷಣ ಮತ್ತು ಸಚಿವರು ಆಗಮಿಸುವಂತೆ ಪ್ರತಿಭಟನಾನಿರತ ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ.
ಇಳಿಯುವಾಗ ಆಯತಪ್ಪಿ ಬಿದ್ದ ಬೆಂಗಳೂರು ವಿಶ್ವವಿದ್ಯಾನಿಯಲದ ವಿದ್ಯಾರ್ಥಿನಿ ಶಿಲ್ಪಶ್ರೀ (22) ಎಂಬುವವರ ಮೇಲೆ ಬಿಎಂಟಿಸಿ ಬಸ್ ಹರಿದ ಪರಿಣಾಮ ವಿದ್ಯಾರ್ಥಿನಿಯ ಸ್ಥಿತಿ ಗಂಭೀರವಾಗಿದೆ. ತೀವ್ರ ರಕ್ತಸ್ರಾವವಾಗಿದೆ. ಈಗಾಗಲೇ ಎರಡು ಶಸ್ತ್ರಚಿಕಿತ್ಸೆ ನೀಡಿರುವ ವೈದ್ಯರು ಇನ್ನೂ ಎರಡರಿಂದ ಮೂರು ಶಸ್ತ್ರ ಚಿಕಿತ್ಸೆ ಮಾಡಬೇಕು ಎಂದು ಹೇಳಿದ್ದಾರೆ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಗಂಭೀರ ಸ್ಥಿತಿಯಲ್ಲಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿರುವ ವಿದ್ಯಾರ್ಥಿನಿ ಸೂಕ್ತ ಪರಿಹಾರ ವ್ಯವಸ್ಥೆ ಮಾಡಬೇಕು. ಅದಕ್ಕಾಗಿ ಶಿಕ್ಷಣ ಸಚಿವರು ಹಾಗೂ ಸಾರಿಗೆ ಸಚಿವರು ಸ್ಥಳಕ್ಕೆ ಬರಬೇಕು. ಅಲ್ಲಿಯವರೆಗೂ ಹೋರಾಟ ಮುಂದುವರಿಯಲಿದೆ ಎಂದು ಪಟ್ಟು ಹಿಡಿದಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯ ಸ್ನಾತಕೋತ್ತರ ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟದಿಂದ ಸೋಮವಾರ ಬೆಳಗ್ಗೆ ಆರಂಭವಾದ ಪ್ರತಿಭಟನೆ ಮಂಗಳವಾರ ಮಧ್ಯಾಹ್ನವೂ ಮುಂದುವರಿದಿದೆ. ವಿವಿಧ ವಿಶ್ವವಿದ್ಯಾಲಯ ಸೇರಿದಂತೆ ವಿದ್ಯಾರ್ಥಿಗಳ ಸಮೂಹ ನೈತಿಕವಾಗಿ ಬೆಂಬಲ ಸೂಚಿಸಿವೆ ಎಂದು ಒಕ್ಕೂಟದ ಸದಸ್ಯ ಲೋಕೇಶ್ ಮಾಹಿತಿ ನೀಡಿದರು.
ಅಪಘಾತಕ್ಕೆ ತುತ್ತಾದ ವಿದ್ಯಾರ್ಥಿನಿ ಶಿಲ್ಪಶ್ರೀಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ 50 ಲಕ್ಷ ರೂ, ಸಾರಿಗೆ ಇಲಾಖೆಯಿಂದ 50 ಲಕ್ಷ ರೂ. ಹಾಗೂ ಬೆಂಗಳೂರು ವಿಶ್ವವಿದ್ಯಾಲಯದಿಂದ 50 ಲಕ್ಷ ರೂ. ಸೇರಿ ಒಟ್ಟು 1.5ಕೋಟಿ ರೂ. ಪರಿಹಾರ ನೀಡಬೇಕು. ಅಲ್ಲದೇ ಸರ್ಕಾರ ಸಂತ್ರಸ್ತೆಯ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ಕೊಡಿಸಬೇಕು. ಕೂಡಲೇ ಸಚಿವರು ಸ್ಥಳಕ್ಕೆ ಆಗಮಿಸಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದ್ದಾರೆ.

ವಸತಿ ಸಚಿವರ ಭೇಟಿ ಸಾಧ್ಯತೆ
ವಿದ್ಯಾರ್ಥಿನಿ ಅಪಘಾತ ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದೆ. ಪ್ರತಿಭಟನೆ ಮುಂದುವರಿದಿದೆ. ಇದನ್ನು ಅರಿತ ವಸತಿ ಸಚಿವ ವಿ.ಸೋಮಣ್ಣ ಅವರು ಮಧ್ಯಾಹ್ನದ ನಂತರ ಪ್ರತಿಭಟನೆ ನಡೆಯುತ್ತಿರುವ ವಿಶ್ವವಿದ್ಯಾಲಯ ಆವರಣಕ್ಕೆ ಭೇಟಿ ನೀಡಲಿದ್ದಾರೆ. ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಪರಿಹಾರದ ಭರವಸೆ ನೀಡುವ ಜತೆಗೆ ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಲಿದ್ದಾರೆ. ಜತೆಗೆ ಪ್ರತಿಭಟನೆ ಕೈ ಬಿಡುವಂತೆ ಮನವೊಲಿಸಲಿದ್ದಾರೆ ಎನ್ನಲಾಗಿದೆ.
ಬೆಂಗಳೂರು ವಿಶ್ವವಿದ್ಯಾಯಲದ ಆವರಣದಲ್ಲಿ ಸೋಮವಾರ ಬೆಳಗ್ಗೆ ವಿದ್ಯಾರ್ಥಿನಿ ಶಿಲ್ಪಶ್ರಿ ಬಿಎಂಟಿಸಿ ಬಸ್ ಇಳಿಯುವಾಗ ಏಕಾಎಕಿ ಬಸ್ ಮುಂದೆ ಚಲಿಸಿದ ಪರಿಣಾಮ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಬಸ್‌ನ ಹಿಂಬದಿ ಚಕ್ರ ವಿದ್ಯಾರ್ಥಿನಿ ಸೋಂಟದ ಮೇಲೆ ಹರಿದಿದ್ದು, ಆಕೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಬಿಎಂಟಿಸಿ ಬಸ್ ಚಾಲಕನನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ವಿಶ್ವವಿದ್ಯಾಲಯ ಆವರಣದಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಡಿದ್ದಕ್ಕೆ ಸುಮಾರು 20ಮಂದಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.












Click it and Unblock the Notifications