ಗೃಹ ಸಚಿವರ ಮನೆ ಮುತ್ತಿಗೆ ಗೊತ್ತಾಗಿಲ್ಲ; ಗುಪ್ತಚರ ವೈಫಲ್ಯ ಒಪ್ಪಿಕೊಂಡ ಕಮೀಷನರ್
ಬೆಂಗಳೂರು ಜುಲೈ 30: ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಮನೆ ಮೇಲೆ ಎಬಿವಿಪಿ ಸದಸ್ಯರ ಮುತ್ತಿಗೆ ಬಗ್ಗೆ ಪೊಲೀಸ್ ಇಲಾಖೆ ಮೊದಲೇ ಅರಿತುಕೊಳ್ಳಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ ಎಂದು ಹೇಳುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು ಗುಪ್ತಚರ ಇಲಾಖೆಯ ವೈಫಲ್ಯವನ್ನು ಒಪ್ಪಿಕೊಂಡಿದ್ದಾರೆ.
ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸದಸ್ಯರು ಶನಿವಾರ ಗೃಹ ಸಚಿವರ ಆರಗ ಜ್ಞಾನೇಂದ್ರ ಅವರಿಗೆ ಪಿಎಫ್‌ಐ, ಎಸ್‌ಡಿಪಿಐ ಸಂಘಟನೆಗಳ ನಿಷೇಧ ಕುರಿತು ಮನವಿ ನೀಡುವ ಬಗ್ಗೆ ಹಾಗೂ ಅವರು ಪ್ರತಿಭಟನೆ ಮಾಡುವ ಬಗ್ಗೆ ಮಾತ್ರ ಇಲಾಖೆಗೆ ಮಾಹಿತಿ ಇತ್ತು. ಆದರೆ ಎಬಿವಿಪಿ ಸಚಿವರ ನಿವಾಸದ ಮೇಲೆ ಮುತ್ತಿಗೆ ಹಾಕುವ ಬಗ್ಗೆ ಮಾಹಿತಿ ಇರಲಿಲ್ಲ. ಮುತ್ತಿಗೆ ಬಗ್ಗೆ ಪೊಲೀಸರಿಗೆ ಸುಮಾರು 10ಗಂಟೆ ವೇಳೆಗೆ ಗೊತ್ತಾಗಿದೆ. ಈ ಬಗ್ಗೆ ಪೊಲೀಸರು ಮೊದಲೇ ಮಾಹಿತಿ ಕಲೆ ಹಾಕಿರಬೇಕಿತ್ತು ಎಂದು ಅವರು ಹೇಳಿದ್ದಾರೆ.
ಸಚಿವರೊಬ್ಬರ ನಿವಾಸ ಮೇಲೆ ಈ ರೀತಿ ಮುತ್ತಿಗೆ ಒಪ್ಪುವಂತದ್ದಲ್ಲ. ಬೆಳಗ್ಗೆ ಸಚಿವ ಮನೆ ಮುಂದೆ ಆಗಮಿಸಿದ ಎಬಿವಿಪಿ ಸದಸ್ಯರು ಮೊದಲು ಗೇಟ್ ಮುಂದೆ ಮೌನವಾಗಿ ಪ್ರತಿಭಟನೆ ಆರಂಭಿಸಿದ್ದರು. ಮುಂಜಾಗ್ರತೆ ದೃಷ್ಟಿಯಿಂದ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಕೂಡಲೇ ಕಬ್ಬಿಣದ ಗೇಟ್ ಬಂದ್ ಮಾಡಿದ್ದಾರೆ. ನಂತರ ಪ್ರತಿಭಟನಾಕಾರರು ಗೇಟ್ ಜಿಗಿದು ಮನೆ ಆವರಣಕ್ಕೆ ಬಂದಿದ್ದು, ಪೊಲೀಸರನ್ನು ತಳ್ಳಿಕೊಂಡು ಬಲವಂತಾವಾಗಿ ಮನೆಗೆ ಒಳಗೆ ನುಗ್ಗಲು ಪ್ರಯತ್ನಿಸಿದ್ದಾರೆ ಎಂದು ಪ್ರತಾಪ್ ರೆಡ್ಡಿ ಘಟನೆ ಕುರಿತು ವಿವರಿಸಿದರು.

ಅಧಿಕಾರಿಗಳ ತಪ್ಪಿದ್ದರು ಕಾನೂನು ಕ್ರಮ
ಇದೀಗ ಪ್ರತಿಭಟನಾ ನಿರತ ಹಲವರನ್ನು ಬಂಧಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿದ್ದೇವೆ. ಅಲ್ಲದೇ ಘಟನೆಯಲ್ಲಿ ಅಧಿಕಾರಿಗಳ ತಪ್ಪು ಕಂಡು ಬಂದರೆ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ಡಿಸಿಪಿ, ಹೆಚ್ಚುವರಿ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದರು.
ಸಿಎಆರ್ ಪೊಲೀಸ್ ಇಬ್ಬಂದಿ ಇರುವಾಗ ಮನೆ ಮುತ್ತಿಗೆ ಒಪ್ಪುವಂತದ್ದಲ್ಲ. ಈ ಘಟನೆ ಕುರಿತು ಆರಗ ಜ್ಞಾನೇಂದ್ರ ಅವರಿಗೆ ಮಾಹಿತಿ ನೀಡಿದ್ದೇವೆ ಎಂದು ಅವರು ತಿಳಿಸಿದರು.

ನ್ಯಾಯಕ್ಕಾಗಿ ಎಬಿವಿಪಿ ಆಗ್ರಹ
ರಾಜ್ಯದಲ್ಲಿ ಕೋಮು ಧ್ವೇಷಗಳ ಹಿನ್ನೆಲೆ ಹಿಂದುಗಳ ಕೊಲೆ ಮುಂದುವರಿದ್ದು, ಇತ್ತೀಚೆಗೆ ಬಿಜೆಪಿ ಯುವ ಮೋರ್ಚಾ ಕಾರ್ಯಾಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಅವರನ್ನು ಕೊಲೆ ಮಾಡಲಾಗಿದೆ. ಇತ್ತ ರಾಜ್ಯ ಸರ್ಕಾರ ಸೂಕ್ತ ಕ್ರಮ, ಕಠಿಣ ಕ್ರಮದ ಜಪ ಮಾಡುತ್ತಿದೆ. ಹತ್ಯೆ ಪ್ರವೃತ್ತಿಯಿಂದಾಗಿ ಬಡ ಮಕ್ಕಳು ಸಾವೀಗಿಡಾಗಿದ್ದಾರೆ. ಹತ್ಯೆ ಪ್ರಕರಣಗಳಲ್ಲಿ ಪಾಪುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮತ್ತು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಸಂಘಟನೆಗಳು ಇವೆ ಎಂದು ಪ್ರತಿಭಟನಾ ನಿರತ ಎಬಿವಿಪಿ ಕಾರ್ಯಕರ್ತರು ಆರೋಪಿಸಿದ್ದಾರೆ.
ಕೂಡಲೇ ರಾಜ್ಯದಲ್ಲಿ ಪಿಎಫ್‌ಐ ಮತ್ತು ಎಸ್‌ಡಿಪಿಐ ಸಂಘಟನೆಗಳಿಗೆ ನಿಷೇಧ ಹೇರುವ ಮೂಲಕ ನಮಗೆ ನ್ಯಾಯ ಕೊಡಿಸಬೇಕು ಎಂದು ಎಬಿವಿಪಿ ಆಗ್ರಹಿಸಿದೆ.












Click it and Unblock the Notifications