ಅಭಿಷೇಕ್ ಅಂಬರೀಶ್ ಹಸೆಮಣೆ ಏರಲು ಮುಹೂರ್ತ ಫಿಕ್ಸ್; ವಿವಾಹಕ್ಕೆ ಬರುತ್ತಾರಾ ಪ್ರಧಾನಿ?
ಖ್ಯಾತ ಚಲನಚಿತ್ರ ನಟ ಕಂ ರಾಜಕಾರಣಿ ದಿ. ಅಂಬರೀಶ್ ಹಾಗೂ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್‌ರ ವಿವಾಹ ದಿನಾಂಕ ನಿಗದಿ ಮಾಡಲಾಗಿದೆ. ಕಲ್ಯಾಣೋತ್ಸವಕ್ಕೆ ಈಗಾಗಲೇ ಅಂಬರೀಶ್ ಕುಟುಂಬದವರು ಎಲ್ಲ ತಯಾರಿ ನಡೆಸಿದ್ದಾರೆ.
ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ನಟ ಅಭಿಷೇಕ್ ಅಂಬರೀಶ್ ಮತ್ತು ಫ್ಯಷನ್ ಡಿಸೈನರ್ ಅವಿವಾ ಬಿದ್ದಪ್ಪ ಕೊನೆಗೂ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ಮತ್ತೊಂದು ಸ್ಟಾರ್ ವಿವಾಹ ಸಮಾರಂಭಕ್ಕೆ ಸ್ಯಾಂಡಲ್‌ವುಡ್ ಕಾಯುತ್ತಿದೆ. ರಾಜಕೀಯ ಮತ್ತು ಚುನಾವಣಾ ಜಂಜಾಟದಲ್ಲಿದ್ದ ಸುಮಲತಾ ಅಂಬರೀಶ್ ಕೊಂಚ ಬಿಡುವು ಮಾಡಿಕೊಂಡು ಪುತ್ರನ ಮದುವೆ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ.

ಇನ್ನು ಜೂನ್ 5ರಂದು ವಿವಾಹ ಕಾರ್ಯಕ್ರಮವಿರಲಿದೆ. ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿ ಆವರಣದಲ್ಲಿ ಅಭಿಷೇಕ್ ಹಾಗೂ ಅವಿವಾ ವಿವಾಹ ಅದ್ಧೂರಿಯಾಗಿ ನಡೆಯಲಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಅನಂತರ ಜೂನ್ 7ರಂದು ಮಂಡ್ಯದಲ್ಲಿ ಆರತಕ್ಷತೆ ಮತ್ತು ಬೀಗರ ಊಟ ಕಾರ್ಯಕ್ರಮ ಆಯೋಜನೆಯಾಗಿದ್ದು, ಈ ವೇಳೆ 10ರಿಂದ 15 ಸಾವಿರ ಅತಿಥಿಗಳು ಭಾಗವಹಿಸಲಿದ್ದಾರೆ ಎನ್ನಲಾಗುತ್ತಿದೆ.

ಫ್ಯಾಷನ್ ಈವೆಂಟ್‌ವೊಂದರಲ್ಲಿ ಅಭಿಷೇಕ್ ಮತ್ತು ಅವಿವಾ ಪರಿಚಯವಾಗಿದ್ದರು. ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿ ಮೊಳಕೆಯೊಡೆಯಿತು. 3-4 ವರ್ಷಗಳ ಡೇಟಿಂಗ್ ನಂತರ ಕಳೆದ ವರ್ಷ ಈ ಜೋಡಿ ಎಂಗೇಜ್‌ಮೆಂಟ್ ಮಾಡಿಕೊಂಡಿತ್ತು. ಇದೀಗ ವಿವಾಹ ಮುದ್ರೆಯೊತ್ತಲು ರೆಡಿಯಾಗಿದ್ದಾರೆ.
ಅಭಿಷೇಕ್ ಅಂಬರೀಶ್ ಸದ್ಯ ಕನ್ನಡ ಚಲನಚಿತ್ರದಲ್ಲಿ ನಟನಾಗಿ ಗುರುತಿಸಿಕೊಂಡಿದ್ದರೆ, ಅವಿವಾ ಬಿದ್ದಪ್ಪ ಫ್ಯಾಷನ್ ಡಿಸೈನರ್ ಆಗಿದ್ದಾರೆ. ಅವಿವಾ ತಂದೆ ಪ್ರಸಾದ್ ಬಿದ್ದಪ್ಪ ಕೂಡ ಖ್ಯಾತ ಫ್ಯಾಷನ್ ಡಿಸೈನರ್ ಆಗಿ ಗುರುತಿಸಿಕೊಂಡಿದ್ದಾರೆ.

ಇನ್ನು ಅಭಿಷೇಕ್ ಮತ್ತು ಅವಿವಾ ವಿವಾಹ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಸಾಧ್ಯತೆ ಇದೆ. ಏಪ್ರಿಲ್ 5ರಂದು ಅಭಿಷೇಕ್ ಹಾಗೂ ತಾಯಿ ಸುಮಲತಾ ಅಂಬರೀಷ್ ಅವರು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಆಮಂತ್ರಣ ಪತ್ರಿಕೆ ನೀಡಿದ್ದರು. ಇದನ್ನು ಸ್ವತಃ ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈಗಾಗಲೇ ಹಲವು ಗಣರನ್ನು ವಿವಾಹ ಸಮಾರಂಭಕ್ಕೆ ಆಹ್ವಾನಿಸಲಾಗಿದೆ.
ಮಾಜಿ ಸಚಿವ, ನಟ ಅಂಬರೀಷ್ ಪುತ್ರ ಅಭಿಷೇಕ್ ವಿವಾಹ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಮಾಜಿ ಸಿಎಂಗಳಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸೇರಿದಂತೆ ಹಾಲಿ, ಮಾಜಿ ಸಚಿವರು, ಶಾಸಕರು, ಸಂಸದರು, ಕನ್ನಡ ಚಲನಚಿತ್ರ ರಂಗ ಸೇರಿದಂತೆ ದಕ್ಷಿಣ ಭಾರತದ ಹಲವು ನಟ-ನಟಿಯರು ಹಾಜರಾಗುವ ನಿರೀಕ್ಷೆ ಇದೆ.
ಅಭಿಷೇಕ್ ಮತ್ತು ಅವಿವಾ ಮದುವೆಗಾಗಿ ಆಭರಣ, ವಸ್ತ್ರಗಳ ಖರೀದಿಯೂ ಜೋರಾಗಿ ನಡೆದಿದೆ. ಸ್ವತಃ ಫ್ಯಾಷನ್ ಡಿಸೈನರ್ ಆಗಿರುವ ಅವಿವಾ ಬಿದ್ದಪ್ಪ ಅವರೇ ತಮ್ಮ ಹಾಗೂ ಅಭಿಷೇಕ್‌ರ ಉಡುಗೆಯನ್ನು ಡಿಸೈನ್ ಮಾಡುತ್ತಿದ್ದಾರೆ ಎನ್ನಲಾಗಿದೆ.












Click it and Unblock the Notifications