ನರೇಂದ್ರ ಮೋದಿ 'ಚುನಾವಣಾ ಬಾಂಡ್' ಅಕ್ರಮದ ರೂವಾರಿ: ಮುಖ್ಯಮಂತ್ರಿ ಚಂದ್ರು ಆಗ್ರಹವೇನು?
ಬೆಂಗಳೂರು: ದೆಹಲಿ ಸಿಎಂ ಜನಪ್ರಿಯ ನಾಯಕರಾದ ಅರವಿಂದ ಕೇಜ್ರಿವಾಲ್ ಅವರನ್ನು ನೇರವಾಗಿ ಎದುರಿಸಲಾಗದೆ ಪಿತೂರಿ ನಡೆಸಿ ಬಂಧನಕ್ಕೆ ಒಳಗಾಗುವಂತೆ ಮಾಡಿದ್ದಾರೆ. ಹೇಡಿಗಳು, ಕುತಂತ್ರ, ಪಿತೂರಿ ಮಾರ್ಗ ಅನುಸರಿಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ವಾಗ್ದಾಳಿ ನಡೆಸಿದರು.
ಚುನಾವಣೆ ಬಾಂಡ್ ಅಕ್ರಮದ ರೂವಾರಿ ಪ್ರಧಾನಿ ನರೇಂದ್ರ ಮೋದಿ ಎಂದು ಆರೋಪಿಸಿದ ಮುಖ್ಯಮಂತ್ರಿ ಚಂದ್ರು, ಪ್ರಧಾನಿಯನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.

ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಬಂಧನ ಆಕ್ಷೇಪಿಸಿ ವಿರೋಧಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಭಾನುವಾರ ಎಎಪಿಯಿಂದ ನಡೆದ ಸಾಮೂಹಿಕ ಉಪವಾಸ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು.
ಅರವಿಂದ್ ಕೇಜ್ರಿವಾಲ್ ವಿರುದ್ಧ ಪಿತೂರಿ
ಈ ಘಟನೆ ಮೂಲಕ ಭಾರತೀಯರಿಗೆ ಪ್ರಧಾನಿ ನರೇಂದ್ರ ಮೋದಿ ಓರ್ವ ಹೇಡಿ ಎಂಬುದು ಗೊತ್ತಾಗಿದೆ. ಜನಪ್ರಿಯ ನಾಯಕರಾದ ಅರವಿಂದ ಕೇಜ್ರಿವಾಲ್ ಅವರನ್ನು ನೇರವಾಗಿ ಎದುರಿಸಲಾಗದೆ ಪಿತೂರಿ ನಡೆಸಿ ಬಂಧಿಸಲಾಗಿದೆ ಎಂದು ಅವರು ಆಕ್ರೋಶ ಹೊರ ಹಾಕಿದರು.
ಈ ಸಂದರ್ಭ ಮಾತನಾಡಿದ ಮುಖ್ಯಮಂತ್ರಿ ಚಂದ್ರು, ಲೋಕಸಭಾ ಚುನಾವಣೆಯಲ್ಲಿ ಮತದಾರರು ತಮ್ಮನ್ನು ಅಧಿಕಾರದಿಂದ ಕಿತ್ತೆಸೆಯುತ್ತಾರೆ ಎಂಬುದನ್ನು ಅರಿತ ಪ್ರಧಾನಿ ಮೋದಿ ಸರ್ಕಾರ ಹೇಗಾದರೂ ಮಾಡಿ ಮತ್ತೆ ಅಧಿಕಾರ ಹಿಡಿಯಬೇಕೆಂಬ ಕಾರಣಕ್ಕೆ ವಾಮ ಮಾರ್ಗಗಳನ್ನು ಅನುಸರಿಸುತ್ತಿದೆ.

ಸಾಕ್ಷ್ಯಾಧಾರಗಳ ವಿವರ ಕೊಟ್ಟ ಮುಖ್ಯಮಂತ್ರಿ ಚಂದ್ರು
ಚುನಾವಣಾ ಬಾಂಡ್ ಮೂಲಕ ಅತಿದೊಡ್ಡ ಹಗರಣ ನಡೆಸಿರುವ ನರೇಂದ್ರ ಮೋದಿ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಬೇಕು. ಪ್ರಕರಣಕ್ಕೆ ಸಂಬಂಧವೇ ಹೊಂದಿರದ ಕೇಜ್ರಿವಾಲ್ ಅವರನ್ನು ಪ್ರಮುಖ ಆರೋಪಿ ಶರತ್ ಚಂದ್ರ ರೆಡ್ಡಿ ಅವರ ಒಂದು ಹೇಳಿಕೆ ಆಧರಿಸಿ ಬಂಧಿಸಲಾಗಿದೆ. ಕೇಜ್ರಿವಾಲ್ ವಿರುದ್ಧ ಹೇಳಿಕೆ ನೀಡಿದರೆ, ಚುನಾವಣಾ ಬಾಂಡ್ ಮೂಲಕ ಬಿಜೆಪಿಗೆ ದೇಣಿಗೆ ನೀಡಿದರೆ ಬಂಧಮುಕ್ತಗೊಳಿಸುವುದಾಗಿ ಪುಸಲಾಯಿಸಿ ಶರತ್ ಚಂದ್ರ ರೆಡ್ಡಿ ಅವರನ್ನು ಸಾಕ್ಷಿಧಾರನನ್ನಾಗಿ ಮಾಡಲಾಗಿದೆ ಎಂದರು.
ಶರತ್ ಚಂದ್ರ ರೆಡ್ಡಿ ಒಡೆತನದ ಕಂಪನಿ ಬಿಜೆಪಿಗೆ ಚುನಾವಣಾ ಬಾಂಡ್ ಮೂಲಕ ಕೋಟ್ಯಂತರ ರೂಪಾಯಿಯನ್ನು ದೇಣಿಗೆ ಕೊಟ್ಟಿದೆ. ನಂತರ ಬೆನ್ನು ನೋವು ಎಂಬ ಯಕಃಶ್ಚಿತ್ ಕಾರಣಕ್ಕೆ ಪ್ರಮುಖ ಆರೋಪಿಯನ್ನೇ ಬಿಡುಗಡೆ ಮಾಡಲಾಗಿದೆ. ಈ ಅವ್ಯವಹಾರದಲ್ಲಿ ನೇರವಾಗಿ ಭಾಗಿಯಾಗಿರುವ ಬಿಜೆಪಿ ನಾಯಕರನ್ನು ಏಕೆ ಬಂಧಿಸಿಲ್ಲ? ಇದರ ರೂವಾರಿ ನರೇಂದ್ರ ಮೋದಿ ಅವರನ್ನು ಬಂಧಿಸಬೇಕಲ್ಲವೇ? ಎಂದು ಅವರು ಪ್ರಶ್ನಿಸಿದರು.
ದುರುದ್ದೇಶದಿಂದ ಚುನಾವಣೆ ಗೆಲ್ಲಲು ಸಂಚು
ನಂತರ ಮಾತನಾಡಿದ ಎಎಪಿ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಪೃಥ್ವಿ ರೆಡ್ಡಿ, ಲೋಕಸಭಾ ಚುನಾವಣೆ ಮುಗಿಯವರೆಗೆ ಹೇಗಾದರೂ ಮಾಡಿ ಕೇಜ್ರಿವಾಲ್ ಅವರನ್ನು ಜೈಲಿನಲ್ಲಿಟ್ಟರೆ ಗೆಲ್ಲಬಹುದು ಎಂಬುದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ದುರುದ್ದೇಶವಾಗಿದೆ ಎಂದು ದೂರಿದರು.
ಇನ್ನೂ ಪ್ರಕರಣಕ್ಕೆ ಸಂಬಂಧಿಸಿ ಸಾಕ್ಷ್ಯಾಧಾರಗಳು, ಪುರಾವೆಗಳಿಲ್ಲದೆ ಸಂಜಯ್ ಸಿಂಗ್ ಅವರನ್ನು ಬಂಧನದಲ್ಲಿಟ್ಟಿರುವ ಬಗ್ಗೆ ನ್ಯಾಯಾಲಯ ಛೀಮಾರಿ ಹಾಕಿದೆ. ನಂತರ ಅವರನ್ನು ಬಿಡುಗಡೆ ಮಾಡಲಾಗಿದೆ. ಮನೀಷ್ ಸಿಸೋಡಿಯಾ, ಸತ್ಯೇಂದ್ರ ಜೈನ್ ಅವರನ್ನು ಯಾವುದೇ ಸಾಕ್ಷಿ ಆಧಾಗಳು ಇಲ್ಲದೆ ಅಕ್ರಮವಾಗಿ ಬಂಧಿಸಲಾಗಿದೆ. ದೆಹಲಿಯಲ್ಲಿ ಎಎಪಿ ಸರ್ಕಾರವನ್ನು ನಿಷ್ಕ್ರಿಯಗೊಳಿಸಲು ಕಳೆದ 2 ವರ್ಷಗಳಿಂದ ಹುನ್ನಾರ ನಡೆಸಲಾಗಿದೆ.
ಅಕ್ರಮ ಹಣ ವಶಕ್ಕೆ ಪಡೆದಿಲ್ಲ
ಪ್ರಕರಣದಲ್ಲಿ ಸಿಕ್ಕಿಸಿಹಾಕುವ ಪ್ರಯತ್ನಗಳು ಎಗ್ಗಿಲ್ಲದೆ ನಡೆಯುತ್ತಿವೆ. ಆದರೆ ಇದುವರೆಗೆ ಒಂದೇ ಒಂದು ರೂಪಾಯಿ ಅಕ್ರಮ ಹಣವನ್ನು ವಶಪಡಿಸಿಕೊಳ್ಳಲು ಜಾರಿ ನಿರ್ದೇಶನಾಲಯ, ತೆರಿಗೆ ಇಲಾಖೆ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ನಡೆದಿರುವ ಅಕ್ರಮವನ್ನು ಎಷ್ಟು ಅಗೆದರೆ ಏನು ಬಂತು? ಇದೆಲ್ಲವೂ ಮೋದಿ ಸರ್ಕಾರದ ಕೃಪಾಪೋಷಿತ ಕಾರ್ಯಾಚರಣೆ ಎಂಬುದನ್ನು ವಿವರಿಸಬೇಕಿಲ್ಲ ಎಂದು ಪೃಥ್ವಿ ರೆಡ್ಡಿ ಬೇಸರ ವ್ಯಕ್ತಪಡಿಸಿದರು.
ಉಪವಾಸ ಸತ್ಯಾಗ್ರಹದಲ್ಲಿ ಎಎಪಿಯ ರಾಜ್ಯ ಉಪಾಧ್ಯಕ್ಷ ಮೋಹನ್ ದಾಸರಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಟಿ. ನಾಗಣ್ಣ, ಬೆಂಗಳೂರು ನಗರ ಘಟಕದ ಅಧ್ಯಕ್ಷ ಡಾ. ಸತೀಶ್ ಕುಮಾರ್ ಸೇರಿದಂತೆ ಪಕ್ಷದ ಅನೇಕ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.












Click it and Unblock the Notifications