ಕೆಪಿಎಸ್‍ಸಿ ಅಕ್ರಮ : ಆರೋಪಿಗಳನ್ನು ವಜಾಗೊಳಿಸಿ
ಬೆಂಗಳೂರು, ಮೇ 14 : ಕೆಪಿಎಸ್‍ಸಿ ಅಕ್ರಮ ನೇಮಕಾತಿ ಹಗರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಿ, ನೇಮಕಾತಿಯನ್ನು ರದ್ದುಪಡಿಸಬೇಕೆಂದು ಆಮ್ ಆದ್ಮಿ ಪಕ್ಷ ಸರ್ಕಾರವನ್ನು ಒತ್ತಾಯಿಸಿದೆ. ಭ್ರಷ್ಟರನ್ನು ರಕ್ಷಿಸುವ ಸಲುವಾಗಿ ಎಂಟು ತಿಂಗಳು ವಿಳಂಬವಾಗಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಗಿದೆ ಎಂದು ಪಕ್ಷ ಆರೋಪಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಆಮ್ ಆದ್ಮಿ ಪಕ್ಷ 2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಅಧಿಕಾರಿಗಳ ನೇಮಕಾತಿಗೆ ಸಂಬಂಧಿಸಿದಂತೆ ಸಿಐಡಿಯು ಮಧ್ಯಂತರ ವರದಿ ಸಲ್ಲಿಸಿದ ಎಂಟು ತಿಂಗಳು ಕಳೆದಿದೆ. ಈಗ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಭ್ರಷ್ಟರನ್ನು ರಕ್ಷಿಸಲು ದೋಷರೋಪ ಪಟ್ಟಿ ಸಲ್ಲಿಸಲು ವಿಳಂಬ ಮಾಡಲಾಗಿದೆ ಎಂದು ಪಕ್ಷ ದೂರಿದೆ.

ಭ್ರಷ್ಟರನ್ನು ರಕ್ಷಿಸುವ ಸಲುವಾಗಿ ಸಿಐಡಿ ತನಿಖೆಯಲ್ಲಿ ಹಸ್ತಕ್ಷೇಪ ಮಾಡಲಾಗಿದೆ. ಆಮ್ ಆದ್ಮಿ ಪಕ್ಷದ ಕರ್ನಾಟಕ ಘಟಕ ಇಂತಹ ಹಸ್ತಕ್ಷೇಪವನ್ನು ಮತ್ತು ವಿಳಂಬವನ್ನು ತೀವ್ರವಾಗಿ ಖಂಡಿಸುತ್ತದೆ. 2011ರಲ್ಲಿ ನಡೆಸಿದ ನೇಮಕಾತಿಯನ್ನು ಸರ್ಕಾರ ರದ್ದುಗೊಳಿಸಬೇಕು ಎಂದು ಪಕ್ಷ ಒತ್ತಾಯಿಸಿದೆ. [ಕೆಪಿಎಸ್‍ಸಿ ಅಕ್ರಮ ಚಾರ್ಚ್ ಶೀಟ್ ಸಲ್ಲಿಕೆ]
ಅಧಿಕಾರಿಗಳನ್ನು ವಜಾ ಮಾಡಿ : ಸಿಐಡಿ ತನ್ನ 10,521 ಪುಟಗಳ ದೋಷಾರೋಪ ಪಟ್ಟಿಯಲ್ಲಿ ಸರ್ಕಾರಿ ಅಧಿಕಾರಿಗಳಾದ ಎಸ್.ಅರುಣಾಚಲಂ, ಬಿ.ಅಶೋಕ್ ಕುಮಾರ್, ಸುಧೀರ್, ಸೋಮನಾಥ್ ಎಂ.ಚಿಕ್ಕಮಠ, ಕೆ.ಆರ್.ರಾಜಶೇಖರ್ ಮೇಲಿನ ಆರೋಪಗಳು ದೃಢಪಟ್ಟಿವೆ ಎಂದು ಹೇಳಿದೆ ಸರ್ಕಾರ ತಕ್ಷಣ ಈ ನೌಕರರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಪಕ್ಷ ಆಗ್ರಹಿಸಿದೆ.
ಈ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಕೆಪಿಎಸ್‌ಸಿಯ ಹಿಂದಿನ ಕಾರ್ಯದರ್ಶಿ ಕೆ.ಆರ್.ಸುಂದರ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲು ರಾಜ್ಯ ಸರ್ಕಾರ ಸಿಐಡಿಗೆ ಅನುಮತಿ ನೀಡಿಲ್ಲ. ಸರ್ಕಾರ ಈ ಕೂಡಲೆ ತನ್ನ ನಿಲುವನ್ನು ಬದಲಾಯಿಸಿಕೊಂಡು ಸಿಐಡಿಗೆ ಅನುಮತಿ ನೀಡಬೇಕೆಂದು ಆಮ್ ಆದ್ಮಿ ಪಕ್ಷ ಒತ್ತಾಯಿಸಿದೆ.
ಕೆಪಿಎಸ್‍ಸಿಯ ಮಾಜಿ ಸದಸ್ಯೆ ಡಾ.ಮಂಗಳಾ ಶ್ರೀಧರ್ ಅವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲು ರಾಜ್ಯಪಾಲರ ಒಪ್ಪಿಗೆ ದೊರೆತಿಲ್ಲ ಎಂದು ತಿಳಿದುಬಂದಿದೆ. ಈ ವಿಚಾರವಾಗಿ ಪಕ್ಷ ರಾಜ್ಯಪಾಲರನ್ನು ಭೇಟಿ ಮಾಡಿ, ವಿಷಯಕ್ಕೆ ಸಂಬಂಧಪಟ್ಟ ಕಡತವನ್ನು ಪರಿಶೀಲಿಸಿ ಶೀಘ್ರ ವಿಲೇವಾರಿ ಮಾಡುವಂತೆ ಮನವಿ ಮಾಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.












Click it and Unblock the Notifications