ಬಿಬಿಎಂಪಿ ಚುನಾವಣೆ: ಎಲ್ಲ ವಾರ್ಡ್‌ಗಳಲ್ಲಿ ಎಎಪಿ ಅಭ್ಯರ್ಥಿಗಳು
ಬೆಂಗಳೂರು ಜುಲೈ 22: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ಎಲ್ಲ ವಾರ್ಡ್‌ಗಳಲ್ಲೂ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳು ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಅದಕ್ಕಾಗಿ ಅಭ್ಯರ್ಥಿ ಶೋಧನಾ ಸಮಿತಿ ರಚಿಸಲಾಗಿದೆ ಎಂದು ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿದರು.
ನಗರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಬಿಎಂಪಿಯ ಚುನಾವಣೆಯು ಜನಸಾಮಾನ್ಯರ ಹಾಗೂ 40 ಪರ್ಸೆಂಟ್ ಲಂಚ ಪಡೆಯುವ ಸರ್ಕಾರದ ನಡುವಿನ ಕದನವಾಗಲಿದೆ. ಭಾರತ ದೇಶ ಸ್ವಾತಂತ್ರ್ಯ ದಿನದ 75 ವರ್ಷದ ಅಮೃತ ಮಹೋತ್ಸವ ಆಚರಿಸುತ್ತಿದೆ. ಈ ಹೊತ್ತಿನಲ್ಲಿ ದೇಶದ ಆಡಳಿತ ನೋಡಿದರೆ ದುರದೃಷ್ಟವಶಾತ್ ಪ್ರಜಾಪ್ರಭುತ್ವ ಎಂಬುದು 'ಆಯ್ದ ಕೆಲವರಿಂದ, ಕೆಲವರಿಗಾಗಿ, ಕೆಲವರಿಗೋಸ್ಕರ' ಮಾತ್ರ ಇರುವಂತೆ ಎಂದು ಭಾಸವಾಗುತ್ತಿದೆ ಎಂದು ಹೇಳಿದರು.
ದೆಹಲಿ ರಾಜ್ಯದಲ್ಲಿ ಎಎಪಿಯ ಪ್ರಾಮಾಣಿಕ ಆಡಳಿತ ಇಡೀ ದೇಶಕ್ಕೇ ಮಾದರಿಯಾಗಿದೆ, ಪಂಜಾಬ್‌ನಲ್ಲೂ ಕೂಡಾ ಭ್ರಷ್ಟಾಚಾರ ರಹಿತ ಸರ್ಕಾರ ಸೃಷ್ಟಿಯಾಗಿದೆ. ಇದು ಬೆಂಗಳೂರಿನಲ್ಲಿ ಯಾಕೆ ಆಗಬಾರದು? ಬೆಂಗಳೂರಿನಲ್ಲೂ ಇದು ಸಾಧ್ಯ. ಅದಕ್ಕಾಗಿ ನಾವು ಈ 40% ಕಮಿಷನ್ ಸರ್ಕಾರವನ್ನು ಕಿತ್ತೊಗೆಯಬೇಕು. ಒಂದು ಕೋಟಿ ಜನರು ಇರುವ ಈ ನಗರವನ್ನು ಕೆಲವೇ ಕೆಲವು ದುಷ್ಟರ, ಭ್ರಷ್ಟರ ಕೈಗಳಿಗೆ ನೀಡಿದಂತಾಗಿದೆ ಎಂದು ಪೃಥ್ವಿ ರೆಡ್ಡಿ ದೂರಿದರು.

ನಗರದ ಅಭಿವೃದ್ಧಿಗಾಗಿ ಮುಂದೆ ಬನ್ನಿ
"ನಗರವನ್ನು ರಕ್ಷಿಸುವವರನ್ನು ನಾವು ಸ್ವಾಗತಿಸುತ್ತೇವೆ ಮತ್ತು ಪ್ರೀತಿಸುತ್ತೇವೆ. ಕೆರೆಗಳಿಗಾಗಿ ಹೋರಾಡುವವರು, ನಗರದ ಮರಗಳನ್ನು ರಕ್ಷಿಸುತ್ತಾ ಬಂದವರು, ಮಕ್ಕಳಿಗಾಗಿ ಶಾಲೆ, ಬಡವರಿಗಾಗಿ ಸರ್ಕಾರಿ ಆಸ್ಪತ್ರೆ, ಗುಂಡಿ ಮುಕ್ತ ರಸ್ತೆಗಳನ್ನು ಕೇಳುತ್ತಾ ಬಂದಿರುವ ಸಾಮಾಜಿಕ ಹೋರಾಟಗಾರರು ಇರಬಹುದು, ಇತರ ಪಕ್ಷಗಳ ಸಮರ್ಥ ನಾಯಕರಾಗಿ ಕಡೆಗಣಿಸಲ್ಪಟ್ಟವರು. ಹೀಗೆ ಎಲ್ಲರನ್ನೂ ಎಎಪಿ ಸ್ವಾಗತಿಸುತ್ತದೆ. ಜನರು ಬೆಂಗಳೂರಿನ ಅಭಿವೃದ್ಧಿಗಾಗಿ ಮುಂದೆ ಬರಬೇಕು ಎಂದು ಅವರು ಕರೆ ನೀಡಿದರು.
'ಕೇಜ್ರೀವಾಲ್‌ಗೆ ಒಂದು ಅವಕಾಶ' ನೀಡಿ
'ಕೇಜ್ರೀವಾಲ್‌ಗೆ ಒಂದು ಅವಕಾಶ" ಎಂಬ ಘೋಷವಾಕ್ಯದ ಅಡಿಯಲ್ಲಿ, ಎಎಪಿ ರಾಜ್ಯ ಕಾರ್ಯದರ್ಶಿ ಬಿ.ಟಿ.ನಾಗಣ್ಣ ನೇತೃತ್ವದಲ್ಲಿ ಅಭ್ಯರ್ಥಿ ಶೋಧನಾ ಸಮಿತಿಯನ್ನು ರಚಿಸಲಾಗಿದೆ. ಸುರೇಶ್ ರಾಥೋಡ್, ಕುಶಲಸ್ವಾಮಿ, ಫರಿದುದ್ದೀನ್ ಷರೀಫ್, ಸಂಚಿತ್ ಸಹಾನಿಯವರು ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಇದರ ಮೂಲಕ ನಗರದ ಸಾಮಾನ್ಯ ಪ್ರಜೆಗಳು, ಯುವಜನರು, ಮಹಿಳೆಯರು, ವಕೀಲರು ಮತ್ತು ಸಮಾಜದ ಎಲ್ಲಾ ಸ್ತರದ ಜನರನ್ನು ಚುನಾವಣೆಯಲ್ಲಿ ಭಾಗವಹಿಸಲು ಎಎಪಿ ಅವಕಾಶ ಕಲ್ಪಿಸುತ್ತಿದೆ ಎಂದು ಅವರು ತಿಳಿಸಿದರು.

ಎಎಪಿ ಬೆಂಗಳೂರು ಘಟಕದ ಸಂಘಟನಾ ಕಾರ್ಯದರ್ಶಿ ಸುರೇಶ್ ರಾಥೋಡ್ ಮಾತನಾಡಿ 'ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ಇರುವವರು ಅಭ್ಯರ್ಥಿ ಶೋಧನಾ ಸಮಿತಿಯನ್ನು (ಮೊ.7669100500) ಸಂಪರ್ಕಿಸಬಹುದು. ಅಥವಾ [email protected] ಗೆ ಇಮೇಲ್ ಕಳುಹಿಸಬಹುದು ಎಂದರು.












Click it and Unblock the Notifications