ನಮಗೇಕಿಲ್ಲ ಕ್ಯಾಂಪಸ್ ಸೆಲೆಕ್ಷನ್?: ಸರ್ಕಾರಿ ಕಾಲೇಜು ವಿದ್ಯಾರ್ಥಿಗಳ ಪರ ರಾಜಕೀಯ ಪಕ್ಷದಿಂದ ಅಭಿಯಾನ
ಬೆಂಗಳೂರು, ನವೆಂಬರ್ 27: ಬಹುತೇಕ ಕಂಪನಿಗಳು ಉದ್ಯೋಗಕ್ಕಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕ್ಯಾಂಪಸ್ ಸೆಲೆಕ್ಷನ್ ಗಾಗಿ ಪ್ರತಿಷ್ಠಿತ ಖಾಸಗಿ ಕಾಲೇಜುಗಳನ್ನೇ ಆಶ್ರಯಿಸುತ್ತಿರುವುದು ದುಃಖಕರ ವಿಚಾರ. ಅವರಷ್ಟೇ ಸರಿಸಮಾನರಾಗಿ ಖಾಸಗಿ ಕಾಲೇಜು ವಿದ್ಯಾರ್ಥಿಗಳಿದ್ದರೂ ಸಹ ಅವರತ್ತ ಗಮನ ಹರಿಸುತ್ತಿಲ್ಲ.
ಈ ವಿಷಯವಾಗಿ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳ ಪವಾಗಿ ಆಮ್ ಆದ್ಮಿ ಪಕ್ಷ ಧ್ವನಿಯಾಗಿದೆ. ಅಭಿಯಾನವೊಂದನ್ನು ಆರಂಭಿಸಿದೆ. ಸರ್ಕಾರಿ ಕಾಲೇಜುಗಳಲ್ಲಿ ಓದುವ ವಿದ್ಯಾರ್ಥಿಗಳೂ ಪ್ರತಿಭಾನ್ವಿತರಾಗಿದ್ದಾರೆ. ಒಂದೇ ವಿಷಯವನ್ನು ಅಭ್ಯಾಸ ಮಾಡಿರುತ್ತಾರೆ. ಕಲಿಕೆಯ ಗುಣಮಟ್ಟವೂ ಒಂದೇ ಆಗಿರುತ್ತದೆ. ಎಲ್ಲ ವಿಚಾರಗಳಲ್ಲಿ ಖಾಸಗಿ ಕಾಲೇಜು ವಿದ್ಯಾರ್ಥಿಗಳಿಗೆ ಸರಿಸಮನಾಗಿದ್ದಾರೆ. ಆದರೂ ಕ್ಯಾಂಪಸ್ ಸೆಲೆಕ್ಷನ್ ಗೆ ಖಾಸಗಿ ಕಾಲೇಜು ವಿದ್ಯಾರ್ಥಿಗಳಿಗೆ ಕಂಪನಿಗಳು ಮಣೆಹಾಕುತ್ತಿರುವುದು ನೋವಿನ ಸಂಗತಿಯಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಎಎಪಿ ನಾಯಕ ಜಗದೀಶ ಸದಂ ಹೇಳಿದರು.

ಕ್ಯಾಂಪಸ್ ಸೆಲೆಕ್ಷನ್ ಮಾಡುವ ಎಲ್ಲ ಕಂಪನಿಗಳು ಸರ್ಕಾರಿ ಕಾಲೇಜುಗಳನ್ನು ಪರಿಗಣಿಸಬೇಕು ಎಂಬುದು ಆಮ್ ಆದ್ಮಿ ಪಕ್ಷದ ಪ್ರಮುಖ ಒತ್ತಾಯವಾಗಿದೆ. ಸರ್ಕಾರಿ ಕಾಲೇಜು ವಿದ್ಯಾರ್ಥಿಗಳನ್ನು ಕ್ಯಾಂಪಸ್ ಸೆಲೆಕ್ಷನ್ ಗೆ ಸಿದ್ಧಗೊಳಿಸುವುದು ಹಾಗೂ ಕಂಪನಿಗಳು ಖಾಸಗಿ ಕಾಲೇಜುಗಳಿಗೆ ನೀಡುವ ಮಾನ್ಯತೆಯಂತೆ ಸರ್ಕಾರಿ ಕಾಲೇಜುಗಳಿಗೂ ಸಮನಾಗಿ ಆದ್ಯತೆ ನೀಡುವಂತೆ ಆಯಾ ಜಿಲ್ಲಾಧಿಕಾರಿಗಳು ಜವಾಬ್ದಾರಿ ವಹಿಸಬೇಕು ಎಂದು ಅವರು ಆಗ್ರಹಿಸಿದರು.
ಇದೇ ಡಿಸೆಂಬರ್ ನಿಂದ ಅಭಿಯಾನ ಆರಂಭ
ಈ ನಿಟ್ಟಿನಲ್ಲಿ ಆಮ್ ಆದ್ಮಿ ಪಕ್ಷವು ರಾಜ್ಯಾದ್ಯಂತ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳ ಪರವಾಗಿ ಅಭಿಯಾನವನ್ನು ಹಮ್ಮಿಕೊಂಡಿದೆ. ಡಿಸೆಂಬರ್ 1ರಿಂದ 4ರವರೆಗೆ ಆಮ್ ಆದ್ಮಿ ಪಕ್ಷದ ಯುವ ಘಟಕ ರಾಜ್ಯಾದ್ಯಂತ 4 ದಿನಗಳ ಅಭಿಯಾನ ನಡೆಸಲಿದೆ.

ಪ್ರಮಖವಾಗಿ ಡಿ.1ರಂದು ರಾಮನಗರ, ಡಿ.2ರಂದು ಮಂಡ್ಯ, ಡಿ.3ರಂದು ಮೈಸೂರು ಹಾಗೂ ಡಿ.4ರಂದು ಚಾಮರಾಜನಗರದಲ್ಲಿ ಅಭಿಯಾನವನ್ನು ನಡೆಸಲಿದ್ದೇವೆ. ಉಳಿದಂತೆ ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಜಿಲ್ಲಾ ಮಟ್ಟದ ಅಭಿಯಾನಗಳನ್ನು ನಡೆಸಲಿದ್ದಾರೆ. ಈ ಮೂಲಕ ಜಿಲ್ಲಾಧಿಕಾರಿಗಳ ಗಮನವನ್ನು ಸೆಳೆದು, ಸರ್ಕಾರಿ ವಿದ್ಯಾರ್ಥಿಗಳನ್ನು ಕ್ಯಾಂಪಸ್ ಆಯ್ಕೆಗೆ ಪರಿಗಣಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳವಂತೆ ಒತ್ತಡ ಹೇರಲಾಗುವುದು ಎಂದು ಪಕ್ಷದ ರಾಜ್ಯ ಯುವ ಘಟಕದ ಅಧ್ಯಕ್ಷ ಲೋಹಿತ್ ಜಿ. ಹನುಮಾಪುರ ಮಾಹಿತಿ ನೀಡಿದರು.
ದೆಹಲಿಯಲ್ಲಿ ಪಕ್ಷ ಬಲವಾಗಿದೆ
ಭಾರತದಲ್ಲಿ ಎಎಪಿ ಅತಿ ವೇಗವಾಗಿ ಬೆಳೆಯುತ್ತಿರುವ ಪಕ್ಷವಾಗಿದೆ. ಕಳೆದೊಂದು ದಶಕದಲ್ಲಿ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಸೋಲಿಯಲು ಬಿಜೆಪಿ ಶತಾಯಗತಾಯ ಪ್ರಯತ್ನ ನಡೆಸಿದರು, ಯತ್ನ ಫಲಪ್ರದವಾಗಿಲ್ಲ. ಅಲ್ಲಿನ ಜನ ಅರವಿಂದ ಕೇಜ್ರಿವಾಲ್ ಅವರನ್ನು ನಾಯಕ ಎಂದು ಒಪ್ಪಿಕೊಂಡಿದ್ದಾರೆ ಎಂದು ದೆಹಲಿ ಎಎಪಿ ಶಾಸಕ, ಕರ್ನಾಟಕ ರಾಜ್ಯ ಉಸ್ತುವಾರಿ ದಿಲೀಪ್ ಪಾಂಡೆ ವಿವರಿಸಿದರು.
ಎಎಪಿ ರಚನೆಯಾಗಿ ಇಂದಿಗೆ 11 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಜಯನಗರದಲ್ಲಿ ಸಂಸ್ಥಾಪನಾ ದಿನಾಚರಣೆ ಸಮಾರಂಭ ನಡೆಯಿತು. ಸಭೆಯಲ್ಲಿ ಭಾಗವಹಿಸಿ ದೆಹಲಿ ಮುಖ್ಯ ಸಚೇತಕರು ಹಾಗೂ ಕರ್ನಾಟಕ ರಾಜ್ಯ ಉಸ್ತುವಾರಿ ದಿಲೀಪ್ ಪಾಂಡೆ, ಬಿಜೆಪಿ ಎಲ್ಲಾ ಬಲವನ್ನು ಬಳಸಿದರೂ ಆಮ್ ಆದ್ಮಿ ಪಕ್ಷವನ್ನು ಸೋಲಿಸಲು ಆಗಿಲ್ಲ ಎಂದು ಹೆಮ್ಮ ವ್ಯಕ್ತಪಡಿಸಿದರು.












Click it and Unblock the Notifications