ಮಹಾರಾಜರು ಬೆಂಗಳೂರು ಅರಮನೆ ಮೈದಾನ ಜಾಗ ಬಿಟ್ಟು ಕೊಡುವಂತೆ ಎಎಪಿ ಆಗ್ರಹ
ಬೆಂಗಳೂರು, ಏಪ್ರಿಲ್ 19: ಬೆಂಗಳೂರು ಅರಮನೆ ಮೈದಾನದ ಎರಡೂ ಕಡೆಗಳಲ್ಲಿರುವ ರಸ್ತೆಗಳ ವಿಸ್ತರಣೆಗಾಗಿ ಮಹಾರಾಜ ಯದುವೀರ್ ಒಡೆಯರ್ ಮೈದಾನದ ಖಾಲಿ ಭೂಮಿಯನ್ನು ಬಿಟ್ಟು ಕೊಡುವ ಮೂಲಕ ಹೃದಯ ವೈಶಾಲ್ಯತೆ ಮೆರೆಯಬೇಕು ಎಂಬ ಆಗ್ರಹ ಕೇಳಿ ಬಂದಿದೆ.
ಹೌದು, ಆಮ್ ಆದ್ಮಿ ಪಕ್ಷ (ಎಎಪಿ) ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಎಎಪಿ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಅವರು, ಮೈಸೂರು ಮಹಾರಾಜರು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಅವರು ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರತಿಫಲ ಅಪೇಕ್ಷೆಯಿಲ್ಲದೆ ರಸ್ತೆ ಅಗಲೀಕರಣಕ್ಕೆ ನೆರವಾಗುವ ಮೂಲಕ ಜನಾನುರಾಗಿಗಳಾಗಬೇಕು ಎಂದು ಅವರು ಒತ್ತಾಯಿಸಿದರು.

ಜಲಾಶಯಕ್ಕಾಗಿ ಒಡೆವೆ ಅಡ ಇಟ್ಟಿದ್ದ ಒಡೆಯರು
ಈ ಹಿಂದೆ ಮೈಸೂರು ರಾಜ್ಯವನ್ನು ಆಳುತ್ತಿದ್ದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಕೆಆರ್‌ಎಸ್ ಜಲಾಶಯ ನಿರ್ಮಾಣಕ್ಕೆ ತಮ್ಮಲ್ಲಿರುವ ಎಲ್ಲ ಒಡವೆಗಳನ್ನು ಅಡವಿಟ್ಟು ಹಳೆ ಮೈಸೂರು ಭಾಗದ ರೈತರಿಗೆ ನೆಮ್ಮದಿಯ ಬದುಕು ಕಟ್ಟಿಕೊಟ್ಟರು. ಆದರೆ ಈಗ ಇರುವ ಮಹಾರಾಜರು ಇದಕ್ಕೆ ತದ್ವಿರುದ್ಧವಾಗಿ ವರ್ತಿಸುತ್ತಿದ್ದಾರೆ. ಪರಿಹಾರವಾಗಿ ಸಾರ್ವಜನಿಕರಿಂದಲೇ ಹಣ ಪಡೆಯುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಮತದಾನ ದಿನ ಜನರೇ ತೀರ್ಮಾನಿಸುತ್ತಾರೆ
ಮೇ 17ರ ಒಳಗೆ ಟಿಡಿಆರ್ ನೀಡದಿದ್ದರೆ ನ್ಯಾಯಾಂಗ ನಿಂದನೆ ಎದುರಿಸುವಂತಹ ಪರಿಸ್ಥಿತಿಗೆ ರಾಜ್ಯ ಸರ್ಕಾರವನ್ನು ತಂದೊಡ್ಡಿದ್ದಾರೆ. ಸರ್ಕಾರ ಅರಮನೆ ಮೈದಾನಕ್ಕೆ ಕೌಂಪೌಂಡ್ ಹಾಕಿದ್ದು, ಇನ್ನೂ ಪರಿಹಾರವನ್ನು ನೀಡಲಿಲ್ಲ ಎಂಬ ಅಂಶವನ್ನು ಸೇರಿಸಿದ್ದಾರೆ. ಇದು ಚುನಾವಣೆಯಲ್ಲಿ ನಿಂತಿರುವ ಮಹಾರಾಜರಿಗೆ ಶೋಭೆಯಲ್ಲ. ಈ ಕುರಿತು ಜನರು ಮತದಾನದ ದಿನ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಎಚ್ಚರಿಕೆ ಕೊಟ್ಟರು.
ಮಹಾರಾಜರ ಆಸ್ತಿಗೆ ನಾಲ್ಕು ಪಟ್ಟು ಹೆಚ್ಚು ಮೌಲ್ಯವನ್ನು ಕೊಡುವುದಾದರೆ ರಸ್ತೆ ಅಗಲೀಕರಣವಾಗದೆ ಹಲವು ವರ್ಷಗಳಿಂದ ಟ್ರಾಫಿಕ್ ಸಮಸ್ಯೆ ಎದುರಿಸುತ್ತಿರುವ ಸಾರ್ವಜನಿಕರಿಗೆ ಉಂಟಾದ ಆರ್ಥಿಕ ನಷ್ಟವನ್ನು ಯಾರು ತುಂಬಿಕೊಡುತ್ತಾರೆ? ಎಂದು ಪ್ರಶ್ನಿಸಿದರು.

ಮಹಾರಾಜರು ಸ್ಪೂರ್ತಿಯಾಗಬೇಕು: ಮನವಿ
ಮಹಾರಾಜರು ಸಂವೇದನೆಯಿಂದ ವರ್ತಿಸಬೇಕು. ಪ್ರಜೆಗಳ ಹಿತದೃಷ್ಟಿಯಿಂದ ಸರ್ಕಾರದಿಂದ ಒಂದು ರೂಪಾಯಿಯನ್ನು ಪಡೆಯದೆ ರಸ್ತೆ ವಿಸ್ತರಣೆಗೆ ಅನುವು ಮಾಡಿಕೊಡುವ ಮೂಲಕ ಸ್ಫೂರ್ತಿಯಾಗಬೇಕು ಎಂದು ಮನವಿ ಮಾಡಿದರು.
ಮೈದಾನದ ಖಾಲಿ ಭೂಮಿ ವಶಕ್ಕೆ ತೆಗೆದುಕೊಳ್ಳಲು ಮೈಸೂರು ರಾಜ ವಂಶಸ್ಥರಿಗೆ ಹಣ ನೀಡಬೇಕಿದೆ. ಸುಮಾರು ₹1,400 ಕೋಟಿ ಮೌಲ್ಯದಷ್ಟು ಟಿಡಿಆರ್ (ಅಭಿವೃದ್ಧಿ ಹಕ್ಕುಗಳ ವರ್ಗಾವಣೆ) ನೀಡಲು ಒಪ್ಪಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣಗೊಂಡಿರುವುದು ಬೇಸರದ ಸಂಗತಿ. ರಾಜ್ಯ ಸರ್ಕಾರದ ನಡೆಯು ಮಹಾರಾಜರಿಗೆ ಒಂದು ನ್ಯಾಯ, ಪ್ರಜೆಗಳಿಗೆ ಒಂದು ನ್ಯಾಯ ಎಂಬ ಧೋರಣೆಯನ್ನು ಅನುಸರಿಸಿದಂತಾಗಲಿದೆ ಎಂದು ಅವರು ತಿಳಿಸಿದರು.
ತೆರಿಗೆದಾರರ ಹಣದ ಪೋಲು ತಪ್ಪಿಸಿ
ಈ ಕೂಡಲೇ ರಾಜ್ಯ ಸರ್ಕಾರ ಇಷ್ಟೊಂದು ಬೃಹತ್ ಮೊತ್ತವನ್ನು ನೀಡುವ ನಿರ್ಧಾರವನ್ನು ಕೈ ಬಿಟ್ಟು ಮಾನ್ಯ ನ್ಯಾಯಾಲಯದಲ್ಲಿ ಮೇಲ್ಬನವಿ ಸಲ್ಲಿಸುವ ಮೂಲಕ ತೆರಿಗೆದಾರರ ಹಣವನ್ನು ರಾಜಮನೆತನಕ್ಕೆ ಪೋಲಾಗುವುದನ್ನು ತಪ್ಪಿಸಬೇಕು ಎಂದು ಅವರು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಮುಖಂಡ ದರ್ಶನ್ ಜೈನ್, ಕೇವಲ 400 ಮೀ. ರಸ್ತೆ ಅಗಲೀಕರಣಕ್ಕೆ ಅರಮನೆಗೆ ಸೇರಿದ 15.39 ಎಕರೆ ಭೂಮಿಯನ್ನು ಬಳಕೆ ಮಾಡಿಕೊಳ್ಳಲು ನಾಲ್ಕು ಪಟ್ಟು ಮೌಲ್ಯವನ್ನು ಹೆಚ್ಚಿಸಲಾಗಿದೆ. ಸುಮಾರು ₹1,400 ಕೋಟಿಯನ್ನು ರಾಜ್ಯ ಸರ್ಕಾರ ಮಹಾರಾಜರಿಗೆ ನೀಡಲು ಒಪ್ಪಿಕೊಂಡಿದೆ.
ಹೀಗೆಯೇ ಭೂಸ್ವಾಧೀನ ಮಾಲೀಕರಿಗೆ ನೆರವಿಗೆ ಧಾವಿಸಿ
ಬಿಡಿಎ ಬಡವಾಣೆಗಳ ನಿರ್ಮಾಣಕ್ಕೆ ರೈತರಿಂದ ಸ್ವಾಧೀನ ಪಡಿಸಿಕೊಂಡಿರುವ ಸಾವಿರಾರು ಎಕರೆ ಭೂಮಿಗೆ ಇದೇ ರೀತಿ ಬರಪೂರ ಪರಿಹಾರ ನೀಡಲಾಗಿದೆಯೇ? ಸಾಕಷ್ಟು ಭೂಮಾಲೀಕರು ಬೀದಿಗೆ ಬಿದ್ದಿದ್ದಾರೆ.
ಭೂಮಾಲೀಕರ ನೆರವಿಗೆ ಇದೇ ರೀತಿ ತುರ್ತಾಗಿ ಧಾವಿಸಿದೆಯೇ? ಪೆರಿಫೆರಲ್ ರಿಂಗ್ ರೋಡ್ ಯೋಜನೆಗೆ ಸಂಬಂಧಿಸಿ ಅಗತ್ಯವಿರುವ ಸುಮಾರು 2.3 ಸಾವಿರ ಎಕರೆ ಭೂಸ್ವಾಧೀನ ಪಡಿಸಿಕೊಳ್ಳುವುದಕ್ಕೆ ಪ್ರತಿಯಾಗಿ ರೈತರಿಗೆ ನ್ಯಾಯಯುತ ಪರಿಹಾರ ನೀಡಲು ಮುಂದಾಗುತ್ತಿಲ್ಲವೇಕೆ? ಅರ್ಕಾವತಿ, ಕೆಂಪೇಗೌಡ, ಶಿವರಾಮ ಕಾರಂತ ಮತ್ತಿತರ ಬಡಾವಣೆಗಳ ನಿರ್ಮಾಣಕ್ಕೆ ಸಂಬಂಧಿಸಿ ಭೂಮಿ ಕಳೆದುಕೊಂಡವರು ಇಂದಿಗೂ ಕೋರ್ಟ್ ಕಚೇರಿ ಅಲೆಯುತ್ತಿರುವುದು ಸರ್ಕಾರದ ಕಣ್ಣಿಗೆ ಕಾಣಿಸುತ್ತಿಲ್ಲವೇ? ಎಂದು ಅವರು ಕಿಡಿ ಕಾರಿದರು.












Click it and Unblock the Notifications