ಶಿವಾನಂದ ಸ್ಟೀಲ್ ಬ್ರಿಡ್ಜ್: ಬಿಜೆಪಿ ಅಕ್ರಮ ಎಸಗಿದೆ- ಎಎಪಿ
ಬೆಂಗಳೂರು ಆಗಸ್ಟ್ 24: ಬೆಂಗಳೂರಿನ ಹೃದಯಭಾಗ ಶಿವಾನಂದ ವೃತ್ತದಲ್ಲಿ 39 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ 'ಉಕ್ಕಿನ ಮೇಲ್ಸೇತುವೆ' ಯು ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಚಾರ ದಂಧೆಯ ಅಕ್ರಮ ಶಿಶು ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರಾಧ್ಯಕ್ಷ ಮೋಹನ್ ದಾಸರಿ ಆರೋಪಿಸಿದರು.
ಬುಧವಾರ ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೋಹನ್ ದಾಸರಿ, 'ಶಿವಾನಂದ ವೃತ್ತದ ಉಕ್ಕಿನ ಮೇಲ್ಸೇತುವೆ (ಸ್ಟೀಲ್ ಬ್ರಿಡ್ಜ) ಕಳಪೆ ಗುಣಮಟ್ಟದ ಬೇರಿಂಗ್, ಶಾಕ್ ಅಬ್ಸಾರ್ವರ್ ಬಳಸಿ ನಿರ್ಮಿಸಲಾಗಿದೆ. ಆಗಸ್ಟ್ 15ರಿಂದ ಒಂದು ಬದಿಯ ಸಂಚಾರ ಸೇವೆ ಆರಂಭವಾಗಿದೆ. ಅಲ್ಲಿ ಸಂಚರಿಸಿದರೆ ಮೇಲ್ಸೇತುವೆ ನಿರ್ಮಾಣದಲ್ಲಿ ಎಷ್ಟು ಕಳಪೆ ಕಾಮಗಾರಿ ನಡೆದಿದೆ ಎಂಬುದು ಸ್ಪಷ್ಟವಾಗುತ್ತಿದೆ. ಇದು ಆಡಳಿತ ಪಕ್ಷ ಬಿಜೆಪಿಯ 40ಪರ್ಸೆಂಟ್ ಕಮಿಷನ್ ಅಕ್ರಮದ ಶಿಶು ಎಂದು ಅವರು ಕಿಡಿ ಕಾರಿದರು.
ಶಿವಾನಂದ ವೃತ್ತದ ಉಕ್ಕಿನ ಮೇಲ್ಸೇತುವೆಯಲ್ಲಿ ಸುಮಾರು 20ಮೀಟರ್‌ಗೊಮ್ಮೆ ಜಾಯಿಂಟ್ ಗಳು ಬರುವಂತೆ ನಿರ್ಮಿಸಲಾಗಿದೆ. ಜತೆಗೆ ವಾಹನ ಸವಾರರಿಗೆ ಕಿರಿಕಿರಿಯಾಗುವಂತಹ ಅವೈಜ್ಞಾನಿಕ ರೋಡ್ ಹಂಪ್‌ಗಳನ್ನು ನಿರ್ಮಿಸಲಾಗಿದೆ. ಲಘು ವಾಹನ ಸಂಚರಿಸಿದರೂ ಸೇತುವೆಯು ಕಂಪಿಸುವ (ವೈಬ್ರೇಟ್) ಅನುಭವ ಆಗುತ್ತಿದೆ ಎಂದು ಮೋಹನ್ ದಾಸರಿ ಆರೋಪಿಸಿದರು.

ಆಗಸ್ಟ್ 29ಕ್ಕೆ ಅಣಕು ಪ್ರದರ್ಶನ
ಬಹುನಿರೀಕ್ಷಿತ ಶಿವಾನಂದ ವೃತ್ತದ ಸ್ಟೀಲ್ ಸೇತುವೆಯು ಆಗಸ್ಟ್ 30ರಂದು ಪೂರ್ಣ ಪ್ರಮಾಣದಲ್ಲಿ ಲೋಕಾರ್ಪಣೆಯಾಗುವ ಸಾಧ್ಯತೆಯಿದೆ. ಆಮ್ ಆದ್ಮಿ ಪಾರ್ಟಿಯು ಅದರ ಹಿಂದಿನ ದಿನವಾದ ಆಗಸ್ಟ್ 29ರಂದು ಉದ್ಘಾಟನೆಯ ಅಣಕು ಪ್ರದರ್ಶನ ನಡೆಸಿ ಕಳಪೆ ಕಾಮಗಾರಿಯನ್ನು ಬಯಲು ಮಾಡಲಿದೆ. ಈ ಮೂಲಕ ಭ್ರಷ್ಟ ಬಿಜೆಪಿ ಸರ್ಕಾರದ ಅವ್ಯವಹಾರದ ಕುರಿತು ಜನಜಾಗೃತಿ ಮೂರಿಸಲಾಗುವುದು ಎಂದು ಅವರು ತಿಳಿಸಿದರು.

ಸ್ಟೀಲ್ ಬ್ರೀಡ್ಜನಲ್ಲಿ ಬಿಜೆಪಿ ಲೂಟಿ
2017ರಲ್ಲಿ ಆರಂಭವಾದ ಕಾಮಗಾರಿಯು ಒಂದೂವರೆ ವರ್ಷದೊಳಗೆ ಪೂರ್ಣಗೊಳ್ಳಬೇಕಿತ್ತು. ಆದರೆ ಕಾಮಗಾರಿ ಕೆಲಸ ಮುಗಿಸಲು ಇಷ್ಟು ವರ್ಷಗಳ ಸಮಯ ತೆಗೆದುಕೊಂಡಿರುವುದು ದುರಂತ. ಆರಂಭದಲ್ಲಿ ಕೇವಲ 19 ಕೋಟಿ ರೂಪಾಯಿಯಾಗಿದ್ದ ಕಾಮಗಾರಿ ಮೊತ್ತವು ಈಗ ಬರೋಬ್ಬರಿ 39 ಕೋಟಿ ರೂಪಾಯಿಗೆ ಏರಿಕೆ ಆಗಿದೆ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರವು 2,000 ಕೋಟಿ ರೂ. ವೆಚ್ಚದಲ್ಲಿ ಚಾಲುಕ್ಯ ವೃತ್ತದಿಂದ ಹೆಬ್ಬಾಳದ ತನಕ ಸ್ಟೀಲ್ ಸೇತುವೆ ನಿರ್ಮಾಣ ನೆಪದಲ್ಲಿ ಲೂಟಿಗೆ ಮುಂದಾದಾಗ ಎಎಪಿ ಹಾಗೂ ಹಲವು ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು ಎಂದರು.

ಶೇ.40 ಕಮಿಷನ್ ದಂಧೆ ಶೇ.50ಕ್ಕೆ ಏರಿದೆ
ಅಂದು ಆಡಳಿತದಲ್ಲಿದ್ದ ಕಾಂಗ್ರೆಸ್‌ನ ಸಿದ್ದರಾಮಯ್ಯ ಅವರ ವಿರುದ್ಧ 500 ಕೋಟಿ ರೂಪಾಯಿ ಲಂಚ ಪಡೆದ ಆರೋಪ ಕೇಳಿಬಂದಿತ್ತು. ಇದರಿಂದ ಪ್ರೇರಣೆಗೊಂಡ ಬಿಜೆಪಿ ಸರ್ಕಾರವು ಅಕ್ರಮ ನಡೆಸಲೆಂದೇ ಸ್ಟೀಲ್ ಸೇತುವೆಯನ್ನು ಪೂರ್ಣಗೊಳಿಸಿದೆ ಎಂದು ಅವರು ದೂರಿದರು.
ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರ ಉಪಾಧ್ಯಕ್ಷ ಬಿ.ಟಿ.ನಾಗಣ್ಣ ಮಾತನಾಡಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಕೆಲವು ದಿನಗಳ ಹಿಂದೆ ಶೇ. 40ರಷ್ಟಿದ್ದ ಕಮಿಷನ್ ದಂಧೆ ಈಗ ಶೇ. 50ಕ್ಕೆ ಏರಿಕೆಯಾಗಿದೆ ಎಂದು ಬಿಬಿಎಂಪಿಯ ಆಯುಕ್ತರಿಗೆ ಬಿಬಿಎಂಪಿ ಕಾರ್ಯನಿರತ ಪತ್ರಕರ್ತರ ಸಂಘವು ದೂರು ಸಲ್ಲಿಸಿರುವುದು ಆಘಾತಕಾರಿ.
ಕಮಿಷನ್ ನೀಡಲು ಒಪ್ಪದ ಕಾರಣಕ್ಕಾಗಿ ಹಲವು ಗುತ್ತಿಗೆದಾರರಿಗೆ 22 ತಿಂಗಳುಗಳಿಂದ ಬಿಲ್ ಪಾವತಿಯಾಗಿಲ್ಲ. ಕಮಿಷನ್ ದಂಧೆಗೆ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗುತ್ತಿದ್ದರೂ ಬಿಜೆಪಿಯು ತಲೆಕೆಡಿಸಿಕೊಳ್ಳದೇ, ಕಮಿಷನ್ ಹೆಚ್ಚಿಸುವುದರಲ್ಲಿ ನಿರತವಾಗಿದೆ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ರಾಜಶೇಖರ್ ದೊಡ್ಡಣ್ಣ ಉಪಸ್ಥಿತರಿದ್ದರು.

ಉಕ್ಕಿನ ಮೇಲ್ಸೇತುವೆಯ ಕಳಪೆ ಕಾಮಗಾರಿ
ಬಿಬಿಎಂಪಿಯು 2017ರಲ್ಲಿ ಶಿವಾನಂದ ವೃತ್ತದ ಮೇಲ್ಸೇತುವೆ ಕಾಮಗಾರಿಗೆ ಚಾಲನೆ ನೀಡಿತ್ತು. ಅಲ್ಲಿಂದ ಈವರೆಗೆ ಅನೇಕ ಗಡುವುಗಳನ್ನು ಮೀರುವ ಮೂಲಕ ಕಾಮಗಾರಿಯು ಹಾಗೂ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸ್ಥಳೀಯ ನಿವಾಸಿಗಳು, ವಾಹನ ಸವಾರರು ಸಾಕಷ್ಟು ತೊಂದರೆ ಅನುಭವಿಸಿದ್ದರು. ಇದೀಗ ಕಾಮಗಾರಿ ಪೂರ್ಣಗೊಂಡಿದ್ದು, ಆಗಸ್ಟ್ 15ರಿಂದ ಮೇಲ್ಸೇತುವೆಯ ಒಂದು ಬದಿಗೆ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆದರೆ ಡಾಂಬರಿನಲ್ಲಿ ಉಬ್ಬು ತಗ್ಗು, ಕಳಪೆ ಕಾಮಗಾರಿ, ಕಾಮಗಾರಿ ಹಣದಲ್ಲಿ ಲೂಟಿ ವಿಚಾರವಾಗಿ ಮೇಲ್ಸೇತುವೆ ಸುದ್ದಿಯಲ್ಲಿದೆ.












Click it and Unblock the Notifications