Bengaluru Secon International Airport: ಕೇಂದ್ರ ತಂಡ ನಾಳೆ ಬೆಂಗಳೂರಿಗೆ ಆಗಮನ! ಅವರ ಕಾರ್ಯವೇನು? ಅಪ್ಡೇಟ್ಸ್
ಬೆಂಗಳೂರು, ಏಪ್ರಿಲ್ 06: ಬೆಂಗಳೂರಿನ ದೇವನಹಳ್ಳಿ ಕೆಂಪೇಗೌಡ ವಿಮಾನ ನಿಲ್ದಾಣ (ಕೆಇಎ) ಮೇಲಿನ ಪ್ರಯಾಣಿಕರ ಹೊರೆ ತಗ್ಗಿಸಲು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಮೂರು ಸ್ಥಳ ಗುರುತಿಸಲಾಗಿದ್ದು, ಆ ಜಾಗಗಳ ಕಾರ್ಯಸಾಧ್ಯತಾ ಅಧ್ಯಯನಕ್ಕೆ ಸೋಮವಾರ ರಾಜಧಾನಿ ಬೆಂಗಳೂರಿಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ಬಹುಶೀಸ್ತಿಯ ತಂಡವು ಆಗಮಿಸಲಿದೆ.
ರಾಜ್ಯ ಸರ್ಕಾರದ ಮೂಲ ಸೌಕರ್ಯಾಭಿವೃದ್ಧಿ ಇಲಾಖೆ ಮತ್ತು ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ಈ ಮೊದಲೇ ಹೇಳಿದಂತೆ ಏಪ್ರಿಲ್ 7ರಿಂದ ಏಪ್ರಿಲ್ 9 ರೊಳಗೆ ಕೇಂದ್ರದ ತಂಡ ಬೆಂಗಳೂರಿಗೆ ಬರಲಿದೆ. ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಗುರುತಿಸಿದ ಕನಕಪುರ ರಸ್ತೆಯ ಭಾಗದಲ್ಲಿ ಎರಡು ಸ್ಥಳ ಮತ್ತು ಕುಣಿಗಲ್ ವ್ಯಾಪ್ತಿಯ ಹೆದ್ದಾರಿ ಸಮೀಪದ ಒಂದು ಸೇರಿ ಒಟ್ಟು ಮೂರು ಸ್ಥಳ ಪರಿಶೀಲಿಸಿ ಪೈನಲ್ ಮಾಡಲಿದ್ದಾರೆ.

ಈಗಾಗಲೇ ರಾಜ್ಯ ಕೈಗಾರಿಕೆ ಅಭಿವೃದ್ಧಿ ಮತ್ತು ಮೂಲಸೌಕರ್ಯ ನಿಗಮವು ಕೇಂದ್ರದ ತಂಡ ಆಗಮಿಸಿ ಸ್ಥಳ ಪರಿಶೀಲನೆಗಾಗಿ ಸ್ಥಳ ಗುರುತಿಸಿ ಪ್ರಸ್ತಾವನೆ ಜೊತೆಗೆ 1.20 ಕೋಟಿ ರೂಪಾಯಿ ಹಣ ಪಾವತಿಸಿದೆ. ಮೂರು ಸ್ಥಳಗಳ ಪರಿಶೀಲನೆ ಕಾರ್ಯ ನಡೆಯಲು ಕ್ಷಣಗಣನೆ ಆರಂಭವಾಗಿದೆ.
ಎಎಐ ಪರಿಶೀಲನಾ ತಂಡದ ಕಾರ್ಯವೇನು?
ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲು ಬೇಕಾದ ಎಲ್ಲ ಸೌಕರ್ಯಗಳು ಇವೆಯೇ, ಸ್ಥಳ ಪೂರಕವಾಗಿದೆಯೇ ಎಂಬಿತ್ಯಾದಿ ಪರಿಶೀಲನೆಗಳು ನಡೆಯಲಿವೆ. ಮೂರು ಸ್ಥಳಗಳ ಕಂದಾಯ ನಕ್ಷೆ, 10 ವರ್ಷಗಳ ಹವಾಮಾನ ವರದಿ, ಜಾಗಗಳು ಜ್ಯಾಮಿತಿ ಲಕ್ಷಣ ವಿವರಿಸುವ ಚಿತ್ರಗಳು, ಸರ್ವೇ ಇಲಾಖೆ ನಕ್ಷೆ, ಉದ್ದೇಶಿತ ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಸೇರಿದಂತೆ ಎಲ್ಲ ಅಂಶಗಳನ್ನು ಪರಿಶೀಲಿಸಿ ವರದಿ ಸಿದ್ದಪಡಿಸಲಿದೆ ಎಂದು ಸರ್ಕಾರದ ಮೂಲಗಳು ಮಾಹಿತಿ ನೀಡಿವೆ.

ಎಷ್ಟು ದಿನ ನಡೆಯಲಿದೆ ಪರಿಶೀಲನೆ?
ಮುಂದಿನ ಮೂರು ದಿನಗಳಲ್ಲಿ (ಏಪ್ರಿಲ್ 7ರಿಂದ 9) ಕೇಂದ್ರದ ಅಧಿಕಾರಿಗಳು ರಾಜ್ಯಕ್ಕೆ ಆಗಮಿಸಲಿದ್ದಾರೆ. ಅವರು ವ್ಯವಸ್ಥಿತ ಜಾಗ, ಇಲ್ಲಿ ನಿರ್ಮಿಸಲು ನೈಸರ್ಗಿಕ ವಾತಾವರಣ ಪೂರಕವಾಗಿದೆಯೇ ಇಲ್ಲವೇ ಎಂಬುದೆಲ್ಲ ಪರಿಶೀಲಿಸಲು ಒಂದು ಸಾಕಾಗುವುದಿಲ್ಲ ಎನ್ನಲಾಗಿದೆ. ಒಂದೆರಡು ದಿನಗಳು ಅವರು ಬೆಂಗಳೂರಿನಲ್ಲೇ ಇದ್ದರು ಕೊಂಡು ಪರಿಶೀಲನೆ ಮಾಡಿ ವರದಿ ಸಹಿತ ದೆಹಲಿಗೆ ಮರಳುವ ಸಾಧ್ಯತೆ ಇದೆ.
ಸಾಮಾನ್ಯವಾಗಿ ಹೊಸ ಏರ್‌ಪೋರ್ಟ್ ಅದರಲ್ಲೂ ಅಂತಾರಾಷ್ಟ್ರೀಯ ಏರ್‌ಪೋರ್ಟ್ ನಿರ್ಮಿಸಲು ಬೆಟ್ಟ, ಗುಡ್ಡ ಇರುಬಾರದು. ವಿಶಾಲ, ಸಮಾನಾಂತರ ಜಾಗ ಇರಬೇಕು. ಲ್ಯಾಂಡಿಂಗ್ ವೇಳೆ ಗಗನಕ್ಕೆ ಜಿಗಿಯುವಾಗ ಯಾವುದೇ ಅಡೆತಡೆ ಇಲ್ಲದ ಜಾಗ ಹಾಗೂ ಹೆದ್ದಾರಿ, ಸಾರಿಗೆ ಸೌಕರ್ಯ ಇರುವ ಮತ್ತು ನಗರಕ್ಕೆ ಹತ್ತಿರವಿರುವ ಸ್ಥಳ ಅಂತಿಮಗೊಳಿಸುವುದು ವಾಡಿಕೆ.
ಏರ್‌ಪೋರ್ಟ್‌ಗೆ ಜಾಗ ಫೈನಲ್ ಆಗಿಬಿಡುತ್ತಾ?
ಇದೇ ರೀತಿ ಎಲ್ಲವನ್ನು ಅಧಿಕಾರಿಗಳು ಪರಿಗಣಿಸಲಿದ್ದಾರೆ. ನಾಳೆ ಕೈಗಾರಿಕೆ ಮತ್ತು ಮೂಲಸೌಕರ್ಯಾಭಿವೃದ್ಧಿ ಸಚಿವ ಎಂಬಿ ಪಾಟೀಲ್ ಹಾಗೂ ರಾಜ್ಯ ಅಧಿಕಾರಿಗಳು ಸ್ಥಳದಲ್ಲಿ ಇರುವ ಸಾಧ್ಯತೆ ಇದೆ. ಕಾರ್ಯಸಾಧ್ಯತಾ ವರದಿ ಸಿದ್ಧವಾಗಲಿದೆ. ನಂತರ ಹಲವು ಪ್ರಕ್ರಿಯೆ, ಅನುಮೋದನೇ ಬಳಿಕ ಜಾಗ ಫೈನಲ್ ಆಗಲಿದೆ. ಅದಕ್ಕಿನ್ನು ಸಮಯ ಹಿಡಿಯುವ ಸಾಧ್ಯತೆ ಇದೆ. ಈಗಾಗಲೇ ನೆರೆಯ ತಮಿಳುನಾಡು ಸರ್ಕಾರ ಗುರುತಿಸಿರುವ ಹೊಸೂರು ಬಳಿಕ ನೂತನ ವಿಮಾನ ನಿಲ್ದಾಣದ ಉದ್ದೇಶಿತ ಸ್ಥಳವನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ. ಇದೀಗ ಬೆಂಗಳೂರಿನ ಮೂರು ಸ್ಥಳ ಪರಿಶೀಲಿಸಿ ವರದಿ ನೀಡಲಿದ್ದಾರೆ.












Click it and Unblock the Notifications