ಅತಿಯಾದ ಮೊಬೈಲ್ ಮಾತು, ಪ್ರಾಣಕ್ಕೆ ತಂದಿತು ಕುತ್ತು
ಬೆಂಗಳೂರು, ಸೆ. 8: ಹೆಂಡತಿ ಹೇಳಿದ ಮಾತು ಕೇಳದೆ ಸದಾ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರಿಂದ ಬೇಸತ್ತ ಪತಿ ಪತ್ನಿಯನ್ನೇ ಹತ್ಯೆ ಮಾಡಿದ್ದಾನೆ.
ರಾಜಗೋಪಾಲನಗರದ ಸಂಜೀವಿನಿ ನಗರ ನಿವಾಸಿ ರೇಣುಕಾ (19) ಅತಿಯಾದ ಮೊಬೈಲ್ ಸಂಭಾಷಣೆ ನಡೆಸಿ ಪ್ರಾಣ ಕಳೆದುಕೊಂಡಿದ್ದಾರೆ. ಪ್ರೀತಿಸಿ ಮದುವೆಯಾಗಿ ಸುಂದರ ಬಾಳು ನಡೆಸಬೇಕಿದ್ದವರ ಬಾಳು ಬರಡಾಗಿದೆ. ಹೆಂಡತಿ ಕೊಲೆ ಮಾಡಿದ ಸೈಮನ್ ಪೊಲೀಸರ ಅತಿಥಿಯಾಗಿದ್ದಾನೆ.(ನೀರಿನ ಬಕೆಟ್ ಸೇರಿದ ವಿದ್ಯಾರ್ಥಿಗಳ ಮೊಬೈಲ್!)

ಮೂಲತಃ ಯಾದಗಿರಿಯವಳಾದ ರೇಣುಕಾ ತನ್ನ ಮನೆ ಸಮೀಪದ ವಾಸಿ ಸೈಮನ್‍ನನ್ನು ಪ್ರೀತಿಸಿ ವಿವಾಹವಾಗಿದ್ದಳು. ದಂಪತಿ ಸಂಜೀವಿನಿನಗರಕ್ಕೆ ಬಂದು ನೆಲೆಸಿದ್ದು, ಸೈಮನ್ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ರೇಣುಕಾ ನಿತ್ಯ ಅತಿಯಾಗಿ ಮೊಬೈಲ್ ಸಂಭಾಷಣೆಯಲ್ಲಿ ತೊಡಗಿರುತ್ತಿದ್ದಳು ಎನ್ನಲಾಗಿದೆ.
ಕರೆ ಮಾಡಿ ಮಾತನಾಡಿದವರು ಯಾರೆಂದು ಪತಿ ಕೇಳಿದರೂ ಆಕೆ ಉತ್ತರಿಸುತ್ತಿರಲಿಲ್ಲ. ಇದೇ ವಿಚಾರವಾಗಿ ದಂಪತಿ ನಡುವೆ ಜಗಳವಾಗುತ್ತಿದ್ದು, ನಿನ್ನೆಯೂ ಜಗಳವಾಗಿದೆ. ಒಂದು ಹಂತದಲ್ಲಿ ಸೈಮನ್ ಚಾಕುವಿನಿಂದ ಪತ್ನಿಯ ಕತ್ತುಕೊಯ್ದು ಪರಾರಿಯಾಗಿದ್ದ.
ರಾಜಗೋಪಾಲನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಸೈಮನ್‍ನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.












Click it and Unblock the Notifications