ಹಲ್ಲೆ ಆರೋಪ: ಸೋಮಣ್ಣ ಮಗನ ವಿರುದ್ಧ ದೂರು ಸಲ್ಲಿಕೆ
ಬೆಂಗಳೂರು, ಮೇ 11: ಬಿಜೆಪಿ ಮುಖಂಡ ವಿ. ಸೋಮಣ್ಣ ಅವರ ಮಗ ಅರುಣ್ ಸೋಮಣ್ಣ ಮತ್ತು ಕೆಲವರು ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ನವೀನ್ ಪ್ರಸಾದ್ ಸಿ.ಜಿ. ಎಂಬುವವರು ಚಂದ್ರಾ ಲೇ ಔಟ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಘಟನೆ ವೇಳೆ ತಮ್ಮ ಬಳಿಯಿದ್ದ ಚಿನ್ನದ ಸರ ಮತ್ತು ನಗದು ಹಣವನ್ನು ಕಸಿದುಕೊಂಡಿದ್ದಾರೆ. ಮತ್ತೊಮ್ಮೆ ಈ ಕಡೆ ಬಂದರೆ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕೀ ಕಸಿದುಕೊಂಡರು:
ಸೋಮವಾರ ರಾತ್ರಿ 8.30ರ ಸಮಯದಲ್ಲಿ ನಾಯಂಡಹಳ್ಳಿಯ ರಸ್ತೆಯಲ್ಲಿ ಸ್ನೇಹಿತ ಪುನೀತ್ ಬಿ.ಕೆ. ಅವರೊಂದಿಗೆ ಮತ್ತೊಬ್ಬ ಸ್ನೇಹಿತನ ಮನೆಗೆ ತೆರಳುತ್ತಿದ್ದಾಗ 40-60 ಜನರ ಗುಂಪು ನಮ್ಮ ವಾಹನವನ್ನು ಅಡ್ಡಗಟ್ಟಿತು. ಅದರಲ್ಲಿ ಅರುಣ್ ಸೋಮಣ್ಣ ಅವರೂ ಇದ್ದರು. ಹಣ ಹಂಚಲು ಹೋಗುತ್ತಿದ್ದೀಯಾ ಎಂದು ಪ್ರಶ್ನಿಸಿದ ಅವರು, ವಾಹನದ ಕೀ ಕಸಿದುಕೊಂಡು ಹಲ್ಲೆ ನಡೆಸಿದರು. ಅರುನ್ ಸೋಮಣ್ಣ ಕೂಡ ತಮ್ಮನ್ನು ತಳ್ಳಾಡಿ ಅವಾಚ್ಯ ಶಬ್ಧಗಳಿಂದ ಬೈದಿದ್ದಲ್ಲದೆ, ಜಾತಿ ನಿಂದನೆ ಮಾಡಿದರು.
ವಾಹನವನ್ನು ಪರಿಶೀಲಿಸಿ ಜೇಬಿಗೆ ಕೈಹಾಕಿ ಪರಿಶೀಲಿಸಿದರು. ಅದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಎಳೆದಾಡಿ 48 ಗ್ರಾಂ ಚಿನ್ನದ ಸರ ಮತ್ತು 5,550 ರೂಪಾಯಿಗಳನ್ನು ಯಾರೋ ಕಸಿದುಕೊಂಡಿದ್ದಾರೆ. ಬಳಿಕ ಪೊಲೀಸರು ತಮ್ಮನ್ನು ಹಾಗೂ ಸ್ನೇಹಿತನನ್ನು ರಕ್ಷಿಸಿದ್ದಾರೆ ಎಂದು ನವೀನ್ ಪ್ರಸಾದ್ ಅವರು ದೂರಿನಲ್ಲಿ ವಿವರಿಸಿದ್ದಾರೆ.












Click it and Unblock the Notifications