Karnataka Election 2023: ಬಿಜೆಪಿಗೆ ವೋಟ್ ಹಾಕೋದಾದ್ರೆ ಮಾತ್ರ ವೋಟರ್ ಐಡಿ: ಬಿಬಿಎಂಪಿ ಗುತ್ತಿಗೆ ನೌಕರನ ದರ್ಪ
ರಾಜ್ಯ ವಿಧಾನಸಭಾ ಚುನಾವಣೆ ಸಮೀಪವಾಗುತ್ತಿದ್ದು ಮತದಾರರು ತಮ್ಮ ಹಕ್ಕು ಚಲಾಯಿಸಲು ಸಜ್ಜಾಗಿದ್ದಾರೆ. ಮತದಾರರು ಯಾವುದೇ ಹಣ, ಉಡುಗೊರೆಯ ಆಮಿಷಕ್ಕೆ ಒಳಗಾಗದಂತೆ ಮತ ಚಲಾವಣೆ ಮಾಡಲು ಚುನಾವಣಾ ಆಯೋಗ ಎಲ್ಲಾ ಕಡೆ ಜಾಗೃತಿ ಮೂಡಿಸುತ್ತಿದೆ. ಆದರೆ, ಇಲ್ಲೊಬ್ಬ ವ್ಯಕ್ತಿ ಬಿಜೆಪಿಗೆ ವೋಟ್ ಹಾಕೋದಾದ್ರೆ ಮಾತ್ರ ಮತದಾರರ ಗುರುತಿನ ಚೀಟಿ ಮಾಡಿಕೊಡ್ತಿನಿ ಅಂತ ದರ್ಪ ತೋರಿದ್ದಾರೆ.
ಬಿಜೆಪಿಗೆ ವೋಟ್ ಮಾಡಿದರೆ ಮಾತ್ರ ವೋಟರ್ ಐಡಿ ಕಾರ್ಡ್ ಅಪ್ಲೈ ಮಾಡೋದು.
— ಸಂತು Straight Forward 🇮🇳 (@SStraightForwar) April 23, 2023
ಬೊಮ್ಮನಹಳ್ಳಿ ಬಿಬಿಎಂಪಿ ಕಚೇರಿಯಲ್ಲಿ ಸರಕಾರಿ ಸೇವೆಗಳ ಅಂಗಡಿ ಇಟ್ಟಿರುವ ಪ್ರಕಾಶ್#ಬಿಜೆಪಿ_ಸೋಲಿಸಿ_ಕರ್ನಾಟಕ_ಉಳಿಸಿ #KarnatakaElection2023 #KarnatakaAssemblyElection2023 pic.twitter.com/uJazmehY1O
ಮತದಾನ ಗುರುತಿನ ಚೀಟಿಗಾಗಿ ಅರ್ಜಿ ಸಲ್ಲಿಸಲು ಹೋದವರ ಬಳಿ ಬಿಬಿಎಂಪಿ ನೌಕರನೊಬ್ಬ ಬಿಜೆಪಿಗೆ ವೋಟ್ ಹಾಕೋದಾದ್ರೆ ಮಾತ್ರ ಅಪ್ಲೈ ಮಾಡ್ತೀನಿ ಬೇರೆ ಪಕ್ಷಕ್ಕೆ ವೋಟ್ ಹಾಕ್ತೀನಿ ಅಂದ್ರೆ ವೋಟರ್ ಐಡಿಗೆ ಅಪ್ಲೈ ಮಾಡಲ್ಲ ಎಂದು ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲಿರುವ ವ್ಯಕ್ತಿಯನ್ನು ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಬಿಬಿಎಂಪಿ ಕಚೇರಿಯಲ್ಲಿ ಸರಕಾರಿ ಸೇವೆಗಳ ಅಂಗಡಿಯನ್ನು ಹೊಂದಿರುವ ಪ್ರಕಾಶ್ ಎಂದು ವಿಡಿಯೋದಲ್ಲಿ ತಿಳಿಸಲಾಗಿದೆ. ಈತ ಬಿಜೆಪಿ ಪ್ರಭಾವಿಗಳ ಜೊತೆ ಗುರುತಿಸಿಕೊಂಡಿರುವ ವ್ಯಕ್ತಿ ಎಂದು ಹೇಳಲಾಗಿದೆ. ಪ್ರಭಾವಿಗಳ ಜೊತೆ ಸಂಪರ್ಕ ಇರುವುದರಿಂದಲೇ ಈ ರೀತಿ ದರ್ಪ ತೋರಿದ್ದಾನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ಕ್ರಮ ತೆಗೆದುಕೊಳ್ಳಲು ಸಾರ್ವಜನಿಕರ ಒತ್ತಾಯ
ಇದೇ ಪಕ್ಷಕ್ಕೆ ಮತ ಹಾಕಿ ಎಂದು ಒತ್ತಾಯ ಮಾಡುವ ಅಧಿಕಾರ ಯಾರಿಗೂ ಇಲ್ಲ, ಎಲ್ಲಾ ದಾಖಲೆಗಳನ್ನು ಪರಿಶೀಲನೆ ಮಾಡಿ ಅದನ್ನು ಸಂಬಂಧಪಟ್ಟ ಇಲಾಖೆಗೆ ಕಳುಹಿಸುವುದು ಮಾತ್ರ ಗುತ್ತಿಗೆ ನೌಕರರ ಕೆಲಸವಾಗಿದೆ. ಅರ್ಜಿ ಸಲ್ಲಿಸಲು ಬಂದವರ ಬಳಿ ಬಿಜೆಪಿಗೆ ಮತ ಹಾಕುವಂತೆ ಒತ್ತಾಯ ಮಾಡುತ್ತಿರುವ ಪ್ರಕಾಶ್ ವಿರುದ್ಧ ಕೂಡಲೇ ಕ್ರಮ ತೆಗೆದುಕೊಂಡು, ಕೆಲಸದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಆದರೆ ಈ ವಿಡಿಯೋ ಯಾವಾಗ ತೆಗದಿದ್ದು ಎನ್ನುವುದು ತಿಳಿದಿಲ್ಲವಾದರೂ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿದೆ.
ಕರ್ನಾಟಕ ವಿಧಾನಸಭೆ ಚುನಾವಣೆ ಸದ್ಯ ರಂಗೇರಿದೆ, ರಾಷ್ಟ್ರದ ಎಲ್ಲಾ ಪಕ್ಷಗಳ ನಾಯಕರು ಸದ್ಯ ಕರ್ನಾಟಕಕ್ಕೆ ಧಾವಿಸುತ್ತಿದ್ದು, ಮತದಾರರನ್ನು ಸೆಳೆಯಲು ಕಸರತ್ತು ಮಾಡುತ್ತಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಭರ್ಜರಿ ಬಹುಮತ ಪಡೆಯುವ ಮೂಲಕ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದು, ಜೆಡಿಎಸ್ ಕೂಡ ಸರ್ಕಾರ ರಚನೆ ಮಾಡುವ ಉತ್ಸಾಹದಲ್ಲಿದೆ. ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications