Bengaluru Rain: ಮಹಾಮಳೆಗೆ ಬೆಂಗಳೂರಿನ 81 ಕೆರೆಗಳು ಭರ್ತಿ
ಬೆಂಗಳೂರಿನಲ್ಲಿ ಅಕ್ಟೋಬರ್ 15ರಂದು ಅಬ್ಬರಿಸಲು ಆರಂಭಿಸಿದ ಮಳೆ ಇಂದಿಗೂ ಕಡಿಮೆಯಾಗಿಲ್ಲ. ಒಂದು ವಾರದಿಂದ ನಗರದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ನಗರದಲ್ಲಿ ಹಲವು ಅವಾಂತರಗಳಿಗೆ ಕಾರಣವಾಗಿದೆ. ಹಲವು ಕಡೆ ಮನೆಗಳಿಗೆ ನೀರು ನುಗ್ಗಿದರೆ, ತಗ್ಗು ಪ್ರದೇಶಗಳು ಜಲಾವೃತವಾಗಿವೆ. ರಸ್ತೆಗಳಲ್ಲಿ, ಅಂಡರ್ ಪಾಸ್‌ಗಳಲ್ಲಿ ನೀರು ನಿಂತು ವಾಹನ ಸವಾರರು ಭಾರಿ ಸಮಸ್ಯೆ ಅನುಭವಿಸಿದ್ದಾರೆ. ಇದೆಲ್ಲದರ ನಡುವೆ ಸಮಾಧಾನದ ವಿಚಾರವೆಂದರೆ ಮಹಾಮಳೆಯಿಂದಾಗಿ ಬೆಂಗಳೂರಿನ 81 ಕೆರೆಗಳು ಭರ್ತಿಯಾಗಿವೆ.
ಬಿಬಿಎಂಪಿ ವ್ಯಾಪ್ತಿಯಲ್ಲಿರುವ 183 ಕೆರೆಗಳ ಪೈಕಿ ಸೋಮವಾರದ ವೇಳೆಗೆ 81 ಕೆರೆಗಳು ಭರ್ತಿಯಾಗಿವೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ. 81 ಕೆರೆಗಳಲ್ಲಿ 78 ಕೆರೆಗಳು ಮಹದೇವಪುರ, ಆರ್ ಆರ್ ನಗರ, ಬೊಮ್ಮನಹಳ್ಳಿ ಮತ್ತು ದಾಸರಹಳ್ಳಿ ವಲಯಗಳಲ್ಲಿದ್ದು, ಇನ್ನುಳಿದ ಮೂರು ಕೆರೆಗಳು ಪೂರ್ವ ಮತ್ತು ದಕ್ಷಿಣ ವಲಯದಲ್ಲಿವೆ ಎಂದು ಹೇಳಿದೆ.

ಮಹದೇವಪುರ ವಲಯದಲ್ಲಿ ಭಾರಿ ಮಳೆಯಾಗಿದ್ದು ಈ ಭಾಗದಲ್ಲೇ 30 ಕೆರೆಗಳು ಭರ್ತಿಯಾಗಿವೆ. ಯಲಹಂಕ ವಲಯದಲ್ಲಿ 20 ಕೆರೆಗಳು ಕೋಡಿ ಬಿದ್ದಿದ್ದು, ರಾಜ ರಾಜೇಶ್ವರಿ ನಗರ ವಲಯದ 16 ಕೆರೆಗಳು ತುಂಬಿವೆ. ಪೂರ್ವ ವಲಯದ ಅಲಸೂರು ಕೆರೆ ಕೂಡ ತುಂಬಿದೆ.
ಕಳೆದ ವರ್ಷ ಮಳೆ ಕೈಕೊಟ್ಟಿದ್ದರಿಂದ ನಗರದಲ್ಲಿ ನೀರಿನ ಸಮಸ್ಯೆ ತೀವ್ರವಾಗಿತ್ತು. ನಗರದ 25 ಕೆರೆಗಳು ಸಂಪೂರ್ಣ ಒಣಗಿದ್ದರಿಂದ ಅಂತರ್ಜಲ ಮಟ್ಟ ಕುಸಿತ ಕಂಡಿತ್ತು. ಕೆಆರ್ ಎಸ್ ಜಲಾಶಯದಲ್ಲಿ ಕೂಡ ನೀರು ಕಡಿಮೆಯಾಗಿದ್ದರಿಂದ, ಕುಡಿಯುವ ನೀರಿಗೂ ಸಮಸ್ಯೆ ಉಂಟಾಗಿತ್ತು. ಆದರೆ ಈ ಬಾರಿ ಭಾರಿ ಮಳೆಯಿಂದಾಗಿ ನಗರದ ನೀರಿನ ಸಮಸ್ಯೆ ನಿವಾರಣೆಯಾಗಿದೆ.
81 ಕೆರೆಗಳು ಸಂಪೂರ್ಣವಾಗಿ ಭರ್ತಿಯಾಗಿದ್ದರೆ, 50 ಕೆರೆಗಳು 90 ಪ್ರತಿಶತ ತುಂಬಿವೆ. ಮಳೆ ಇನ್ನೂ ಕೆಲವು ದಿನ ಮುಂದುವರೆಯಲಿದ್ದು ಈ ಕೆರೆಗಳು ಕೂಡ ಸಂಪೂರ್ಣವಾಗಿ ಭರ್ತಿಯಾಗುವುದು ಖಚಿತವಾಗಿದೆ. ಕೆರೆಗಳು ತುಂಬಿರುವ ಕಾರಣ ಅಂತರ್ಜಲ ಮಟ್ಟ ಕೂಡ ಸುಧಾರಿಸಲಿದ್ದು, ಈ ಬಾರಿ ಬೇಸಿಗೆಯಲ್ಲಿ ನಗರದಲ್ಲಿ ನೀರಿನ ಸಮಸ್ಯೆ ಬಹುತೇಕ ಇಲ್ಲವಾಗಲಿದೆ.
ಇನ್ನೂ ಎಷ್ಟು ದಿನ ಮಳೆ?
ಬೆಂಗಳೂರಿನಲ್ಲಿ ಮಂಗಳವಾರ ಕೂಡ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಸೋಮವಾರಕ್ಕೆ ಹೋಲಿಕೆ ಮಾಡಿದರೆ ಇಂದಿನಿಂದ ಮಳೆಯ ತೀವ್ರತೆ ಕಡಿಮೆಯಾಗಲಿದೆ. ಯಲಹಂಕ ವಲಯ, ಬೊಮ್ಮನಹಳ್ಳಿ, ದಕ್ಷಿಣ ವಲಯ, ಪೂರ್ವ ವಲಯ, ರಾಜರಾಜೇಶ್ವರಿ ನಗರ, ಯಲಹಂಕ ವಲಯದಲ್ಲಿ ಇಂದು ಚದುರಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದ್ದು, ದಾಸರಹಳ್ಳಿ ವಲಯ ಮತ್ತು ಉತ್ತರ ವಲಯದಲ್ಲಿ ಚದುರಿದಂತೆ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬುಧವಾರ ಬೊಮ್ಮನಹಳ್ಳಿ ವಲಯದಲ್ಲಿ ಮಾತ್ರ ಗುಡುಗು ಮಿಂಚು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ಉಳಿದ ಕಡೆಗಳಲ್ಲಿ ಹಗುರ ಮಳೆಯಾಗಲಿದೆ ಎಂದು ಹೇಳಿದೆ.












Click it and Unblock the Notifications