7th Pay Commission: ವೇತನ ಭತ್ಯೆ ಬಗ್ಗೆ ಶಾಕ್ ಕೊಟ್ಟ ಸರ್ಕಾರಕ್ಕೆ ಎಚ್ಚರಿಕೆ, ನೌಕರರ ಕೆಲಸ ಸ್ಥಗಿತ ?
7th Pay Commission: 7ನೇ ವೇತನ ಆಯೋಗ ಜಾರಿಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ. ರಾಜ್ಯದ ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗ ಜಾರಿ ಮಾಡಬೇಕು ಎನ್ನುವ ಒತ್ತಾಯವನ್ನು ಸರ್ಕಾರಿ ನೌಕರರು ಹಲವು ವರ್ಷಗಳಿಂದ ಕೇಳುತ್ತಿದ್ದಾರೆ. ಇದೀಗ ಸರ್ಕಾರಿ ನೌಕರರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಏನಿದೆ ಎನ್ನುವ ವಿವರ ಇಲ್ಲಿದೆ.
ಕರ್ನಾಟಕದ ಮಹಾನಗರಪಾಲಿಕೆ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ಸೇರಿ ನಗರದ ಸ್ಥಳಿಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರು ಸೇರಿ ಎಲ್ಲ ಕಾಯಂ ನೌಕರರಿಗೆ 7ನೇ ವೇತನ ಆಯೋಗದ ಪರಿಷ್ಕೃತ ವೇತನವನ್ನು ಸರ್ಕಾರದಿಂದ ಬಿಡುಗಡೆ ಮಾಡಬೇಕೆಂದು ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯಲಾಗಿದೆ.

ನೌಕರರಿಗೆ ಹೆಚ್ಚುವರಿ ಅನುದಾನವನ್ನು ಸರ್ಕಾರದಿಂದ ಬಿಡುಗಡೆ ಮಾಡದೆ ಆಯಾ ನಗರ ಸ್ಥಳಿಯ ಸಂಸ್ಥೆಗಳ ಸ್ವಂತ ಮೂಲಗಳಿಂದ ಭರಿಸುವಂತೆ ಸುತ್ತೋಲೆ ಹೊರಡಿಸಲಾಗಿದೆ. 2023ರ ಏಪ್ರಿಲ್ನಿಂದ 2024ರ ಜುಲೈವರೆಗೆ ಪಾವತಿಸಬೇಕಿದ್ದ ಮಧ್ಯಂತರ ಪರಿಹಾರವನ್ನೂ ಕೂಡ ನಗರ ಸ್ಥಳಿಯ ಸಂಸ್ಥೆಗಳ ಸ್ವಂತ ನಿಧಿಯಿಂದ ಭರಿಸುವಂತೆ ಸೂಚಿಸಲಾಗಿದೆ. ಬಹುತೇಕ ಸ್ಥಳಿಯ ಸಂಸ್ಥೆಗಳ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ ಎಂದು ಸಂಘದ ಅಧ್ಯಕ್ಷ ಎ.ಅಮೃತ್ರಾಜ್ ಅವರು ಪತ್ರದಲ್ಲಿ ವಿವರಿಸಿದ್ದಾರೆ.
ಆಕ್ಟ್ರಾಯ್ ವ್ಯವಸ್ಥೆ ರದ್ದುಗೊಂಡ ವೇಳೆ ಪೌರಕಾರ್ಮಿಕರೂ ಸೇರಿ ಎಲ್ಲ ಕಾಯಂ ನೌಕರರಿಗೂ ವೇತನ ಸೇರಿ ಇತರೆ ಸೌಲಭ್ಯಗಳನ್ನು ಪಾವತಿಸಲು ಎಸ್ಎಫ್ಸಿ ಅಡಿ ವೇತನ ಅನುದಾನವನ್ನು ಸರ್ಕಾರದಿಂದ ಬಿಡುಗಡೆ ಮಾಡುವ ಪದ್ಧತಿಯನ್ನು ಜಾರಿಗೆ ತರಲಾಗಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಶೇ.10ರಷ್ಟು ವೇತನವನ್ನು ಹಾಗೂ 21 ದಿನಗಳ ವಿಶೇಷ ರಜಾ ನಗದೀಕರಣ ಸೌಲಭ್ಯವನ್ನು ನಗರ ಸ್ಥಳಿಯ ಸಂಸ್ಥೆಗಳ ಸ್ವಂತ ಮೂಲದಿಂದ ಭರಿಸಲು ಸರ್ಕಾರವು ಸೂಚಿಸಿದೆ. ಬಹುತೇಕ ನಗರ ಸ್ಥಳಿಯ ಸಂಸ್ಥೆಗಳ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ ಕಾರಣ ಈ ಸೂಚನೆ ಪಾಲಿಸಲು ಸಾಧ್ಯವಿಲ್ಲ ಎಂದು ಹೇಳಲಾಗಿತ್ತು.
ಸ್ಥಳಿಯ ಸಂಸ್ಥೆಗಳಲ್ಲಿ ಎಸ್ಎಫ್ಸಿ ಅನುದಾನದಲ್ಲಿಯೂ ಗಣನೀಯ ಇಳಿಕೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಘನತ್ಯಾಜ್ಯ, ಉದ್ಯಾನ ನಿರ್ವಹಣೆ, ಹೊರಗುತ್ತಿಗೆ ಸೇರಿ ಇತ್ಯಾದಿ ಮೂಲ ಸೌಕರ್ಯಗಳ ವೆಚ್ಚವೂ ಜಾಸ್ತಿಯಾಗಿದೆ. ಸ್ವಂತ ಮೂಲಗಳಲ್ಲಿ ಸಂಗ್ರಹವಾಗುವ ತೆರಿಗೆ, ನೀರಿನ ದರ ಸೇರಿ ಇತ್ಯಾದಗಿಳಿಂದ ವೆಚ್ಚಗಳನ್ನು ಭರಿಸಲೂ ಸಹ ಪರದಾಡುವ ಪರಿಸ್ಥಿತಿ ಇದೆ. ಹೀಗಿರುವಾಗ, ನಗರ ಸ್ಥಳಿಯ ಸಂಸ್ಥೆಗಳ ಸ್ವಂತ ಮೂಲಗಳಿಂದ ವೇತನ ವೆಚ್ಚ ಭರಿಸುವಂತೆ ಹೊರಡಿಸಿರುವ ಸುತ್ತೋಲೆಯನ್ನು ಸರ್ಕಾರ ಹಿಂಪಡೆಯಬೇಕು ಎಂದು ಅಮೃತ್ರಾಜ್ ಅವರು ಆಗ್ರಹಿಸಿದ್ದಾರೆ.
ಸರ್ಕಾರಕ್ಕೆ ಪ್ರತಿಭಟನೆ ಎಚ್ಚರಿಕೆ: ಸಾರ್ವಜನಿಕರಿಗೆ ಒದಗಿಸುವ ತುರ್ತು, ಅಗತ್ಯ ಸೇವೆಗಳಡಿ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರದ ಇತರೆ ಇಲಾಖೆಗಳಗಿಂತ ಹೆಚ್ಚಿನ ಕೆಲಸದ ಒತ್ತಡದಲ್ಲಿ ಸರ್ಕಾರಿ ನೌಕರರು ಇದ್ದಾರೆ. ಕಲ್ಯಾಣ, ಜನೋಪಯೋಗಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ನೌಕರರು ಮುಂಚೂಣಿಯಲ್ಲಿದ್ದಾರೆ. ಆದರೆ, ವೇತನ ಮತ್ತು ಸೌಲಭ್ಯ ವಿಚಾರದಲ್ಲಿ ಸರ್ಕಾರ, ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ.
ಜೊತೆಗೆ, ರಾಜ್ಯ ಮಹಾನಗರ ಪಾಲಿಕೆಯ ವೃಂದ ಮತ್ತು ನೇಮಕಾತಿ ನಿಯಾಮವಳಿಯ ಕರಡು ತಿದ್ದುಪಡ್ಡಿ ಆಗಿಲ್ಲ. ಹಾಗಾಗಿ, ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗದಿದ್ದರೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಅಧಿಕಾರಿಗಳು, ನೌಕರರು ಸೇರಿ ವಿವಿಧ ಸಂಟನೆಗಳು ಒಟ್ಟುಗೂಡಿಸಿ ಆಡಳಿತ ಚಟುವಟಿಕೆ ಕಾರ್ಯವನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗಿದೆ.
ಏಪ್ರಿಲ್ 10ಕ್ಕೆ ಸಭೆ: 7ನೇ ವೇತನ ಜಾರಿಗೆ ತರುವಲ್ಲಿ ಸರ್ಕಾರ ವಿಳಂಬ ಧರೋಣೆ ಖಂಡಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುವ ಬಗ್ಗೆ ಚರ್ಚಿಸಲು ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘದಿಂದ ಏಪ್ರಿಲ್ 10ರ ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಬಿಬಿಎಂಪಿ ಅಧಿಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಬಸವ ಭವನದಲ್ಲಿ ಪುರಸಭೆ, ನಗರಸಭೆ, ಪಟ್ಟಣ ಪಂಚಾಯಿತಿ ಸೇರಿ ಇತರೆ ಸಂಘಟನೆಗಳ ಜೊತೆ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ
ಕೆಲಸ ನಿಲ್ಲಿಸುವ ಎಚ್ಚರಿಕೆ: ಏಳನೇ ವೇತನ ಆಯೋಗ ಜಾರಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಸೂಕ್ತ ಕ್ರಮ ತೆಗೆದುಕೊಳ್ಳದೆ ಇದ್ದರೆ. ಮುಂದಿನ ದಿನಗಳಲ್ಲಿ ಕೆಲಸಕ್ಕೆ ಗೈರಾಗುವ ಎಚ್ಚರಿಕೆಯನ್ನು ನೀಡಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರಿ ನೌಕರರು ಏಪ್ರಿಲ್ 10ಕ್ಕೆ ಸಭೆ ನಡೆಸಲಿದ್ದು. ಈ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.












Click it and Unblock the Notifications