ಬಿಬಿಎಂಪಿ ವ್ಯಾಪ್ತಿಯಲ್ಲಿ 7.2 ಲಕ್ಷ ಮಕ್ಕಳಿಗೆ ಕೋವಿಡ್ ಲಸಿಕೆ
ಬೆಂಗಳೂರು, ಡಿಸೆಂಬರ್ 28; ಪ್ರಧಾನಿ ನರೇಂದ್ರ ಮೋದಿ ಶನಿವಾರ ದೇಶವನ್ನು ಉದ್ದೇಶಿಸಿ ಮಾತನಾಡಿದರು. 15 ರಿಂದ 18 ವರ್ಷದ ಮಕ್ಕಳಿಗೆ ಜನವರಿಯಿಂದ ಲಸಿಕೆ ನೀಡಲಾಗುತ್ತದೆ ಎಂದು ಘೋಷಣೆ ಮಾಡಿದರು.
ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ಮಕ್ಕಳಿಗೆ ಲಸಿಕೆ ನೀಡುವ ಕುರಿತು ಮಾರ್ಗಸೂಚಿ ಬಿಡುಗಡೆ ಮಾಡಿದೆ. ಜನವರಿ 3ರ ಸೋಮವಾರದಿಂದ ಮಕ್ಕಳಿಗೆ ದೇಶಾದ್ಯಂತ ಲಸಿಕೆ ನೀಡಲಾಗುತ್ತದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬೆಂಗಳೂರು ನಗರದಲ್ಲಿ ಮಕ್ಕಳಿಗೆ ಲಸಿಕೆ ನೀಡಲು ಸಿದ್ಧತೆ ನಡೆಸುತ್ತಿದೆ. ನಗರದಲ್ಲಿ 7.2 ಲಕ್ಷ ಮಕ್ಕಳು ಲಸಿಕೆ ಪಡೆಯಲು ಅರ್ಹರು ಎಂದು ಬಿಬಿಎಂಪಿ ಅಂದಾಜಿಸಿದೆ.

ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಗಳು ಈ ಕುರಿತು ಮಾತನಾಡಿದ್ದಾರೆ, "ನಗರದಲ್ಲಿ 7.2 ಲಕ್ಷ ಮಕ್ಕಳು ಲಸಿಕೆ ಪಡೆಯಲು ಅರ್ಹರು ಎಂದು ಅಂದಾಜಿಲಾಗಿದೆ. ನಾವು ಶಿಕ್ಷಣ ಸೇರಿದಂತೆ ಇತರೆ ಇಲಾಖೆಗಳಿಂದ ನಿಖರವಾದ ಮಾಹಿತಿ ಸಂಗ್ರಹ ಮಾಡುತ್ತಿದ್ದೇವೆ" ಎಂದು ಹೇಳಿದ್ದಾರೆ.
ಶಾಲಾ-ಕಾಲೇಜುಗಳಲ್ಲಿ ಇರುವ 15-18 ವಯೋಮಿತಿಯ ಮಕ್ಕಳ ನಿಖರವಾದ ಸಂಖ್ಯೆ ಸಿಕ್ಕ ಬಳಿಕ ವಾರ್ಡ್ ಮಟ್ಟದಲ್ಲಿ ಲಸಿಕಾ ಅಭಿಯಾನ ಆರಂಭಿಸುವ ಕುರಿತು ಯೋಜನೆ ರೂಪಿಸುತ್ತೇವೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.
ಈ ಹಿಂದೆ ಕಾಲೇಜುಗಳಲ್ಲಿ ನಡೆಸಿದ ಮಾದರಿಯಲ್ಲಿಯೇ ಶಾಲೆಗಳಲ್ಲಿ ಲಸಿಕೆ ಹಾಕಲು ಕ್ಯಾಂಪ್ ನಡೆಸಲಾಗುತ್ತದೆ. ಕ್ಯಾಂಪಸ್‌ನಲ್ಲಿಯೇ ಲಸಿಕೆ ನೀಡುವುದರಿಂದ ಹೆಚ್ಚಿನ ವಿದ್ಯಾರ್ಥಿಗಳನ್ನು ತಲುಪಲು ಸಾಧ್ಯವಾಗುತ್ತದೆ ಎಂದು ಬಿಬಿಎಂಪಿ ಹೇಳಿದೆ.
ಮಕ್ಕಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಖಾಸಗಿ ಆಸ್ಪತ್ರೆಗಳಿಗೆ ಸಹ ತೆರಳಿ ಲಸಿಕೆ ಹಾಕಿಸಿಕೊಳ್ಳುವ ಅವಕಾಶ ನೀಡಲಾಗುತ್ತದೆ. ಕೊಳಗೇರಿ ಪ್ರದೇಶಗಳಲ್ಲಿರುವ ಮಕ್ಕಳಿಗೆ ಲಸಿಕೆ ನೀಡುವುದು ಸವಾಲಿನ ಕೆಲಸವಾಗಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಕೊಳಗೇರಿ ಪ್ರದೇಶದಲ್ಲಿರುವ ಮಕ್ಕಳಿಗೆ ಲಸಿಕೆ ನೀಡಲು ನಾವು ಅಲ್ಲಿ ಕಾರ್ಯ ನಿರ್ವಹಣೆ ಮಾಡುವ ಎನ್‌ಜಿಓಗಳ ಸಹಾಯ ಪಡೆಯಬೇಕು. ನಾವು ಮೊದಲು ಶಾಲೆಯಿಂದ ಲಸಿಕೆ ನೀಡಲು ಆರಂಭಿಸುವ ಯೋಜನೆ ರೂಪಿಸುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಲಸಿಕೆ ನೀಡುವುದಾಗಿ ಘೋಷಣೆ; ಶನಿವಾರ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, "ಕೊರೊನಾದ ಹೊಸ ರೂಪಾಂತರ ಓಮಿಕ್ರಾನ್ ಸೋಂಕು ಜಗತ್ತಿನ ಹಲವು ದೇಶಗಳಲ್ಲಿ ಹರಡುತ್ತಿದೆ. ಭಾರತದಲ್ಲಿ ಕೂಡಾ ಹಲವು ಜನರು ಓಮಿಕ್ರಾನ್ ಸೋಂಕಿಗೆ ಒಳಗಾಗಿದ್ದಾರೆ. ನೀವು ಭಯಭೀತರಾಗಬಾರದು ಆದರೆ ಜಾಗ್ರತೆಯಿಂದಿರಬೇಕು ಮತ್ತು ಎಚ್ಚರದಿಂದಿರಬೇಕು. ನಾವು ಮಾಸ್ಕ್ ಧರಿಸಲು ಮತ್ತು ನಿಯಮಿತವಾಗಿ ನಮ್ಮ ಕೈಗಳನ್ನು ಸ್ಯಾನಿಟೈಸ್ ಮಾಡಲು ಮರೆಯಬಾರದು" ಎಂದು ಮನವಿ ಮಾಡುತ್ತೇನೆ ಎಂದು ಹೇಳಿದ್ದರು.
"ದೇಶದಲ್ಲಿನ 15 ರಿಂದ 18 ವರ್ಷದೊಳಗಿನ ಮಕ್ಕಳು ಈಗ ಲಸಿಕಾಕರಣಕ್ಕೆ ಒಳಪಡಲಿದ್ದಾರೆ. ಇದನ್ನು 2022ರ ಜನವರಿ 3, ಸೋಮವಾರದಿಂದ ಆರಂಭ ಮಾಡಲಾಗುತ್ತದೆ. ಈ ನಿರ್ಧಾರವು ಕೊರೊನಾ ವಿರುದ್ಧ ದೇಶ ನಡೆಸುತ್ತಿರುವ ಹೋರಾಟವನ್ನು ಬಲಪಡಿಸುವುದು ಮಾತ್ರವಲ್ಲದೆ ಶಾಲೆಗಳಿಗೆ ಮತ್ತು ಕಾಲೇಜುಗಳಿಗೆ ಹೋಗುವ ಮಕ್ಕಳ ಆತಂಕವನ್ನು ಮತ್ತು ಅವರ ಪೋಷಕರ ಆತಂಕವನ್ನು ಕಡಿಮೆ ಮಾಡಲಿದೆ" ಎಂದು ಮೋದಿ ತಿಳಿಸಿದ್ದರು.
"ಕೊರೊನಾ ವಾರಿಯರ್‌ಗಳು, ಆರೋಗ್ಯ ರಕ್ಷಣಾ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರು ದೇಶವನ್ನು ಸುರಕ್ಷಿತವಾಗಿಟ್ಟ ಅನುಭವವನ್ನು ನಾವೆಲ್ಲ ಹೊಂದಿದ್ದೇವೆ. ಅವರು ಈಗಲೂ ತಮ್ಮ ಬಹು ಸಮಯವನ್ನು ಕೊರೊನಾ ರೋಗಿಗಳಿಗೆ ಸೇವೆ ಮಾಡುವುದರಲ್ಲಿ ಕಳೆಯುತ್ತಿದ್ದಾರೆ. ಆದುದರಿಂದ ಮುಂಜಾಗರೂಕತಾ ಕ್ರಮವಾಗಿ ಸರಕಾರವು ಆರೋಗ್ಯ ಕಾರ್ಯಕರ್ತೆಯರಿಗೆ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆಯ ಮುಂಜಾಗರೂಕತಾ ಡೋಸ್ ಆರಂಭ ಮಾಡಲು ನಿರ್ಧರಿಸಿದ್ದು, ಅದು 2022ರ ಜನವರಿ 10 ರಂದು ಆರಂಭಗೊಳ್ಳಲಿದೆ" ಎಂದು ಘೋಷಣೆ ಮಾಡಿದ್ದರು.












Click it and Unblock the Notifications