ಗುಂಡಿ ಮುಚ್ಚಲು 7,121 ಕೋಟಿ, ಬಿಬಿಎಂಪಿ ಅಂಕಿಅಂಶ ಕಂಡು ಸುಸ್ತು
ಬಿಬಿಎಂಪಿ 2019-20, 2020-21 ಮತ್ತು 2021-22ರ ಅವಧಿಯಲ್ಲಿ ನಗರದ ಆರ್ಟಿರಿಯಲ್, ಉಪ ಆರ್ಟಿರಿಯಲ್ ಮತ್ತು ಪ್ರಮುಖ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಲು 7,121 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ.
ಬೆಂಗಳೂರು, ಫೆಬ್ರವರಿ 4: ಬೆಂಗಳೂರಿನ ರಸ್ತೆ ಗುಂಡಿಗಳದ್ದು ಎಂದೂ ಮುಗಿಯದ ಸಮಸ್ಯೆ, ಇದರಿಂದ ಅನೇಕ ಅಮಾಯಕ ಜನರು ತಮ್ಮ ಜೀವವನ್ನೇ ಬಿಟ್ಟದ್ದಾರೆ. ಎಲ್ಲೆಂದರಲ್ಲಿ ಕಂಡುಬರುವ ಗುಂಡಿಗಳು ಬೆಂಗಳೂರಿಗೆ ಅಂತಾರಾಷ್ಟ್ರೀಯ ಅಪಖ್ಯಾತಿಯನ್ನು ತಂದುಕೊಟ್ಟಿವೆ. ಆದರೆ ಬಿಬಿಎಂಪಿ ಗುಂಡಿಮುಚ್ಚಲು ತಾನು ಖರ್ಚು ಮಾಡಿದ ಹಣ ತಿಳಿದರೆ ನಿಮಗೆ ತಲೆತಿರುಗೋದು ಗ್ಯಾರಂಟಿ.
ಹೌದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಳೆದ ಮೂರು ವರ್ಷಗಳಲ್ಲಿ ಮಾತ್ರವೇ ಅಂದರೆ 2019-20, 2020-21 ಮತ್ತು 2021-22ರ ಅವಧಿಯಲ್ಲಿ ನಗರದ ಆರ್ಟಿರಿಯಲ್, ಉಪ ಆರ್ಟಿರಿಯಲ್ ಮತ್ತು ಪ್ರಮುಖ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಲು 7,121 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ ಎಂದು ಅದರ ರಸ್ತೆ ಮೂಲಸೌಕರ್ಯ ಇಲಾಖೆ ಹಂಚಿಕೊಂಡ ಅಂಕಿಅಂಶಗಳು ತಿಳಿಸಿವೆ.
ಬಿಬಿಎಂಪಿ ಬರೀ ಮೂರು ವರ್ಷಗಳಲ್ಲಿ ಬರೋಬ್ಬರಿ 7,121 ಕೋಟಿ ರಸ್ತೆ ಗುಂಡಿ ಮುಚ್ಚಲು ಖರ್ಚು ಮಾಡಿದ್ದರೂ ಗುಂಡಿಗಳ ಸಮಸ್ಯೆ ಹಾಗೇ ಇದೆ. ಕಳೆದ ತಿಂಗಳುಗಳ ಹಿಂದೆ ಪ್ರಧಾನಿ ಬಂದಾಗ ಹಾಕಲಾಗಿದ್ದ ಡಾಂಬರೂ ಎರಡೇ ದಿನದಲ್ಲಿ ಕಿತ್ತುಬಂದು ರಾಷ್ಟ್ರೀಯ ಸುದ್ದಿಯಾಯಿತು. ನಗರದ ಯಾವುದಾದರೂ ಒಂದು ಮೂಲೆಯಲ್ಲಿ ರಸ್ತೆ ಅಗೆಯುತ್ತಿರುವುದು ನೀವು ಓಡಾಡುತ್ತಿದ್ದರೆ ನಿಮ್ಮ ಗಮನಕ್ಕೆ ಬಂದೇ ಬರುತ್ತದೆ. ಸಾವಿರಾರು ಕೋಟಿ ಖರ್ಚು ಮಾಡಿದರೂ ರಸ್ತೆ ಸರಿ ಹೋಗಲಿಲ್ಲ ಎಂದರೆ ಯಾವ ಬಗೆಗಿನ ಹಣದ ದುರ್ಬಳಕೆ ಹಾಗೂ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಜನರ ಅಂತರ್ಜಾಲದಲ್ಲಿ ಪ್ರಶ್ನಿಸಿದ್ದಾರೆ.
ಬಿಬಿಎಂಪಿ ಪ್ರಕಾರ, ಈ ಮೂರು ವರ್ಷಗಳಲ್ಲಿ ವಾರ್ಷಿಕ ಕನಿಷ್ಠ 23,000ದಿಂದ 25,000 ಗುಂಡಿಗಳನ್ನು ಮುಚ್ಚಲಾಗಿದೆ. ಆದರೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರೇ, ರಸ್ತೆ ಗುಂಡಿಗಳನ್ನು ತುಂಬಲು 7,121 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂಬ ನಾಗರಿಕ ಸಂಸ್ಥೆಯ ಅಂಕಿಅಂಶಗಳ ಬಗ್ಗೆ ಅಪನಂಬಿಕೆ ವ್ಯಕ್ತಪಡಿಸಿ ಅಂಕಿಅಂಶಗಳಲ್ಲಿ ಏನಾದರೂ ತಪ್ಪಾಗಿರಬಹುದು ಎಂದು ಹೇಳಿದ್ದಾರೆ.
ದತ್ತಾಂಶದಲ್ಲಿ ಅವರು ವಲಯಗಳು ಮತ್ತು ಪ್ರಮುಖ ರಸ್ತೆಗಳಾದ್ಯಂತ ರಸ್ತೆಗಳ ಪುನರುಜ್ಜೀವನದ ವೆಚ್ಚವನ್ನು ಸೇರಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ. ತಾವು ಅಂಕಿಅಂಶವನ್ನು ಪರಿಶೀಲಿಸುವುದಾಗಿ ಅವರು ಹೇಳಿದ್ದಾರೆ. ಇಷ್ಟು ಮೊತ್ತದ ಹಣವನ್ನು ಗುಂಡಿಗಳನ್ನು ಮುಚ್ಚಲು ಏಕೆ ವ್ಯಯಿಸಲಾಗುತ್ತಿದೆ ಎಂಬುದನ್ನು ನಾವು ಪರಿಶೀಲಿಸುತ್ತೇವೆ ಎಂದು ತಿಳಿಸಿದ್ದಾರೆ.

ವೈಟ್‌ಟಾಪ್‌ಗೆ 10 ಕೋಟಿ ರೂ. ಖರ್ಚು
ನಗರದಲ್ಲಿ ಅಪಘಾತಗಳಿಗೆ ಪ್ರಮುಖ ಕಾರಣವಾಗಿರುವ ಗುಂಡಿಗಳನ್ನು ಮುಚ್ಚಲು ವಿಳಂಬ ಮಾಡುತ್ತಿರುವ ಬಗ್ಗೆ ಬಿಬಿಎಂಪಿ ಹೈಕೋರ್ಟ್‌ನ ಟೀಕೆಗೆ ಗುರಿಯಾಗಿತ್ತು. ಅಧಿಕಾರಿಗಳ ಪ್ರಕಾರ, 1 ಕಿ.ಮೀ ರಸ್ತೆ ವೈಟ್‌ಟಾಪ್‌ಗೆ 10 ಕೋಟಿ ರೂ. ಮತ್ತು ಡಾಂಬರೀಕರಣಕ್ಕೆ 15 ಕೋಟಿ ರೂ. ವೆಚ್ಚವಾಗುತ್ತದೆ. ಇದು 2019-20ರಲ್ಲಿ 4,297 ಕೋಟಿ ರೂ., 2020-21ರಲ್ಲಿ 1,547 ಕೋಟಿ ರೂ. ಮತ್ತು 2021-22ರಲ್ಲಿ 1,277 ಕೋಟಿ ರೂ.ಗಳನ್ನು ಹಾಗೂ ಒಟ್ಟಾರೆಯಾಗಿ ಮೂರು ವರ್ಷಗಳಲ್ಲಿ 7,121 ಕೋಟಿ ರೂಗಳನ್ನು ಗುಂಡಿಗಳನ್ನು ಮುಚ್ಚಲು ಬಿಬಿಎಂಪಿ ಖರ್ಚು ಮಾಡಿದೆ.

1,465 ಕೋಟಿ ರೂಪಾಯಿ ಖರ್ಚು
ವಲಯ ಅಧಿಕಾರಿಗಳು ತಮ್ಮ ವ್ಯಾಪ್ತಿಯ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಿದರೆ, ಪ್ರಮುಖ ರಸ್ತೆಗಳಲ್ಲಿ ರಸ್ತೆ ಮೂಲಸೌಕರ್ಯ ಇಲಾಖೆ ಮತ್ತು ಯೋಜನೆಯ ಕೇಂದ್ರ ವಿಭಾಗದಿಂದ ಮುಚ್ಚಲಾಗುತ್ತದೆ. ಎಂಟು ವಲಯಗಳ ಪೈಕಿ ಮಹದೇವಪುರದಲ್ಲಿ ಗುಂಡಿ ಮುಚ್ಚಲು ಅತಿ ಹೆಚ್ಚು ಅಂದರೆ 1,456 ಕೋಟಿ ರೂಪಾಯಿ ಖರ್ಚಾಗಿದೆ. 10 ಪ್ರಾಧಿಕಾರಗಳ ಪೈಕಿ ರಸ್ತೆ ಮೂಲಸೌಕರ್ಯ ಇಲಾಖೆ ಮೂರು ವರ್ಷಗಳಲ್ಲಿ ಗರಿಷ್ಠ 1,465 ಕೋಟಿ ರೂಪಾಯಿ ಖರ್ಚು ಮಾಡಿದೆ ಎಂದು ಟೈಮ್ಸ್ ವರದಿ ಮಾಡಿದೆ.

ಇದುವರೆಗೆ 36,000 ಗುಂಡಿ ಭರ್ತಿ
ಪ್ರಾಸಂಗಿಕವಾಗಿ 2021-22ಕ್ಕೆ ದಕ್ಷಿಣ, ಬೊಮ್ಮನಹಳ್ಳಿ ಮತ್ತು ಯಲಹಂಕ ವಲಯಗಳಿಗೆ ಗುಂಡಿ ಮುಚ್ಚಿರುವ ಅಂಕಿಅಂಶವೇ ಕಾಣೆಯಾಗಿದೆ ಎಂದು ತೋರುತ್ತದೆ. ಏಕೆಂದರೆ ಆ ವರ್ಷದ ಶೀರ್ಷಿಕೆಯ ಅಡಿಯಲ್ಲಿ ಶೂನ್ಯ ವೆಚ್ಚವನ್ನು ತೋರಿಸಲಾಗಿದೆ. ಆ ವರ್ಷದಲ್ಲಿ ಈ ವಲಯಗಳಲ್ಲಿ ಯಾವುದೇ ಗುಂಡಿಗಳನ್ನು ಮುಚ್ಚಿಲ್ಲ. ಪ್ರತಿ ವರ್ಷ 23,000ದಿಂದ 25,000 ಗುಂಡಿಗಳನ್ನು ತುಂಬಲಾಗುತ್ತಿತ್ತು. ಆದರೆ 2022-23ರಲ್ಲಿ ಬಿಬಿಎಂಪಿ ಇದುವರೆಗೆ 36,000 ಗುಂಡಿಗಳನ್ನು ತುಂಬಿದೆ ಎಂದು ಬಿಬಿಎಂಪಿ ಎಂಜಿನಿಯರ್‌ಗಳು ಹೇಳಿದ್ದಾರೆ.

ಹಣವನ್ನು ಲಪಟಾಯಿಸಲು ಸುಲಭ
2021-22ರಲ್ಲಿ ಮೂರು ವಲಯಗಳ ವೆಚ್ಚದ ಬಗ್ಗೆ ಅಂಕಿಅಂಶಗಳ ಏಕೆ ಮೌನವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ನಾಗೇಶ್ ಅರಸ್ ಆಶ್ಚರ್ಯ ವ್ಯಕ್ತಪಡಿಸಿದರು. ಇದರರ್ಥ ಇಲಾಖೆ ಸಲ್ಲಿಸಿಲ್ಲ. ಈ ದುಬಾರಿ ವೆಚ್ಚವನ್ನು ವಿವರಿಸುವ ಜವಾಬ್ದಾರಿ ಬಿಬಿಎಂಪಿ ಮೇಲಿದೆ ಎಂದರು. ಹೊಂಡ ಗುಂಡಿಗಳ ಕುರಿತು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ ವಿಜಯನ್ ಮೆನನ್ ಅವರು, ಇಷ್ಟು ಹಣವನ್ನು ಅವರು ಖರ್ಚು ಮಾಡಿದ್ದರೆ ಬೆಂಗಳೂರಿಗೆ "ಚಿನ್ನದ ಸುಸಜ್ಜಿತ" ರಸ್ತೆಗಳು ಇರಬೇಕಿತ್ತು. "ಬಿಬಿಎಂಪಿಯು ಹಣವನ್ನು ಪೋಲು ಮಾಡಲು ಸಾಧ್ಯವಾಗುತ್ತದೆ. ಏಕೆಂದರೆ ಲೆಕ್ಕಪತ್ರವು ಗುಂಡಿಗಳಿಗೆ ಪ್ರತ್ಯೇಕ ಹೆಡರ್ ಅನ್ನು ಹೊಂದಿಲ್ಲ. ಇದು ಖರ್ಚು ಅಥವಾ ಹಣವನ್ನು ಲಪಟಾಯಿಸಲು ಸುಲಭವಾಗುತ್ತದೆ ಎಂದು ಅವರು ಹೇಳಿದ್ದಾರೆ.












Click it and Unblock the Notifications