ದೊಡ್ಡ ಗಣಪತಿ ದೇಗುಲದ ಗಣೇಶ ಉತ್ಸವಕ್ಕೆ ಸುವರ್ಣ ಸಂಭ್ರಮ
ಬೆಂಗಳೂರು, ಸೆಪ್ಟೆಂಬರ್ 11: ನಗರದ ದೊಡ್ಡ ಬಸವಣ್ಣ ದೇವಸ್ಥಾನ ರಸ್ತೆಯಲ್ಲಿರುವ ದೊಡ್ಡಗಣಪತಿ ದೇವಸ್ಥಾನದ ಆವರಣದ ಶ್ರೀ ಧರ್ಮಸ್ಥಳ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆದು ಬರುತ್ತಿರುವ ಶ್ರೀ ವಿದ್ಯಾ ಗಣಪತಿ ಸೇವಾ ಸಮಿತಿಯ ಗಣೇಶೋತ್ಸವಕ್ಕೆ ಸುವರ್ಣ ಮಹೋತ್ಸವದ ಸಂಭ್ರಮ.
ಈ ಸಂಭ್ರಮಾಚರಣೆಯು ದಿನಾಂಕ ಸೆಪ್ಟೆಂಬರ್ 13 ರಿಂದ 21ರ ವರೆಗೆ ನಡೆಯಲಿದ್ದು, ಸೆಪ್ಟೆಂಬರ್ 13 ಸಂಜೆ 6:30 ಗಂಟೆಗೆ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀ ಪಾದರು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ.
ನಿವೃತ್ತ ನ್ಯಾ. ಎಮ್.ಎನ್.ವೆಂಕಟಾಚಲಯ್ಯ, ಹಿರಿಯ ಕಲಾವಿದ ವಿದ್ವಾನ್ ಶಂಕರ್ ರಾವ್ ಉಪಸ್ಥಿತಿಯಲ್ಲಿ, ಸಮಿತಿಯ ಅಧ್ಯಕ್ಷ ಹಾಗೂ ಮಾಜಿ ಗೃಹ ಸಚಿವ ಪಿ.ಜಿ.ಆರ್ ಸಿಂಧ್ಯಾ ಅಧ್ಯಕ್ಷತೆ ವಹಿಸಲಿದ್ದಾರೆ.

ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರದ ಗಣ್ಯರಾದ ಉತ್ತಾರಾಧಿ ಮಠದ ಪಂ. ಸತ್ಯ ಧ್ಯಾನಾಚಾರ್ ಕಟ್ಟಿ, ಡಾ.ರಾಜ್ ಕುಮಾರ್ ಕುಟುಂಬದ ಗುರು ರಾಜಕುಮಾರ್, ಶ್ರೀರಾಮ ಸೇವಾ ಮಂಡಳಿಯ ವರದರಾಜು, ಡಾ. ಗುರುರಾಜ ಪೋಶೆಟ್ಟಿಹಳ್ಳಿ ಮೊದಲಾದವರಿಗೆ "ಸುವರ್ಣ ಗಜಾನನ" ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಶಾಸಕ ರವಿ ಸುಬ್ರಹ್ಮಣ್ಯ, ಉದಯ ಗರುಡಚಾರ್, ಶರವಣ, ಧರ್ಮಸ್ಥಳದ ಸುರೇಂದ್ರ ಕುಮಾರ್, ಧಾರ್ಮಿಕ ದತ್ತಿ ಆಯುಕ್ತೆ ಸಿ.ಪಿ.ಶೈಲಜ, ನಾಡೋಜ ಮಹೇಶ್ ಜೋಷಿ, ಮಾಜಿ ಮೇಯರ್ ಕಟ್ಟೆ ಸತ್ಯ ನಾರಾಯಣ ವಿಶೇಷ ಆಹ್ವಾನಿತರಾಗಿ ಭಾಗವಹಿಸಿಲಿದ್ದಾರೆ ಎಂದು ಸಮಿತಿಯ ಆಯೋಜಕರಾದ ಡಾ.ಕೆ.ವಿ.ರಾಮಚಂದ್ರ ತಿಳಿಸಿದ್ದಾರೆ.












Click it and Unblock the Notifications