Second Airport: ಹೊಸ ಏರ್‌ಪೋರ್ಟ್‌ಗೆ 5000 ಎಕ್ರೆ ಭೂಮಿ ಅಗತ್ಯ, ಏನೆಲ್ಲ ಬೇಕು-ಬೇಡ ವಿವರಿಸಿದ ಎಂಬಿ ಪಾಟೀಲ್
ಬೆಂಗಳೂರು, ಜುಲೈ 11: ಜಾಗತಿಕ ಮಟ್ಟದಲ್ಲಿ ಕೈಗಾರಿಕಾ ಬೆಳವಣಿಗೆ ಮತ್ತು ಜನಸಂಖ್ಯೆಯ ದೃಷ್ಟಿಯಿಂದ ಅತ್ಯಂತ ಕ್ಷಿಪ್ರವಾಗಿ ಬೆಂಗಳೂರು ನಗರ ಬೆಳೆಯುತ್ತಿದೆ. ಇಲ್ಲಿನ ಹಾಲಿ ವಿಮಾನ ಇಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗುತ್ತಿದೆ. ಹೀಗಾಗಿ ಇಲ್ಲಿ ವಾರ್ಷಿಕವಾಗಿ 100 ಮಿಲಿಯನ್ ಪ್ರಯಾಣಿಕರನ್ನು ನಿರ್ವಹಿಸುವ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅತ್ಯಗತ್ಯವಿದೆ ಎಂದು ಖುದ್ದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂಬಿ ಪಾಟೀಲ್ ಹೇಳಿದರು.
ಬೆಂಗಳೂರಿನ ಹಾಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೇಲಿನ ಒತ್ತಡ ಕಡಿಮೆ ಮಾಡಲು ಮತ್ತೊಂದು ಏರ್‌ಪೋರ್ಟ್ ನಿರ್ಮಾಣದ ಅವಶ್ಯಕತೆ ಇದೆ. ಅದಕ್ಕಾಗಿ 4,500-5,000 ಎಕರೆ ಭೂಮಿ ಬೇಕಾಗಬಹುದು. ಇಂತಹ ಹಲವು ಅಂಶಗಳನ್ನು ಪರಿಗಣಿಸಿ ಇದನ್ನು ಉನ್ನತ ಮಟ್ಟದ ಸಮಿತಿಯು ಆಖೈರು ಮಾಡಲಿದೆ ಎಂದು ಸಚಿವರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

KIA ದೇಶದ ಮೂರನೇ ಅತೀ ದಟ್ಟಣೆಯ ಏರ್‌ಪೋರ್ಟ್
ಬೆಂಗಳೂರು ದೇಶದ ತಂತ್ರಜ್ಞಾನ ಮತ್ತು ನವೋದ್ಯಮಗಳ ರಾಜಧಾನಿಯೂ ಆಗಿದೆ. ಈಗಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ದೆಹಲಿ ಮತ್ತು ಮುಂಬೈ ನಂತರ ಅತಿದಟ್ಟಣೆಯಿಂದ ಕೂಡಿರುವ ಮೂರನೇ ಏರ್-ಪೋರ್ಟ್ ಆಗಿದೆ.
ಸದ್ಯಕ್ಕೆ ಬೆಂಗಳೂರಿನಲ್ಲಿ ವರ್ಷಕ್ಕೆ 52 ಮಿಲಿಯನ್ ಪ್ರಯಾಣಿಕರ ಮತ್ತು 0.71 ಮಿಲಿಯನ್ ಟನ್ ಸರಕು ಸಾಗಣೆ ನಿರ್ವಹಣೆ ಆಗುತ್ತಿದೆ. ಇವುಗಳನ್ನು ಕ್ರಮವಾಗಿ 110 ಮಿಲಿಯನ್ ಮತ್ತು 1.10 ಮಿಲಿಯನ್ ಟನ್ ತನಕ ವಿಸ್ತರಿಸಬಹುದಾಗಿದೆ. 2035ರ ವೇಳೆಗೆ ಇದು ಗರಿಷ್ಠ ಮಟ್ಟ ತಲುಪಲಿದೆ. ಆದರೆ ಈಗ ಎರಡು ರನ್-ವೇ ಇದ್ದು, ಇದರಲ್ಲಿ ವಿಸ್ತರಣೆ ಸಾಧ್ಯವಿಲ್ಲದಂತಾಗಿದೆ ಎಂದು ಅವರು ಹಾಲಿ ಏರ್‌ಪೋರ್ಟ್ ಸ್ಥಿತಿಗತಿ ವಿವರಿಸಿದರು.
ತಮಿಳುನಾಡು ಏರ್‌ಪೋರ್ಟ್ ನಿರ್ಧಾರದಿಂದ ನಷ್ಟವಿಲ್ಲ
ಯಾವ ದೃಷ್ಟಿಯಿಂದ ನೋಡಿದರೂ ಕೆಂಪೇಗೌಡ ಏರ್-ಪೋರ್ಟ್ 2035ರ ವೇಳೆಗೆ ತನ್ನ ಧಾರಣ ಶಕ್ತಿಯ ತುತ್ತತುದಿ ಮುಟ್ಟಲಿದೆ. ನಾವು ಈ ಯೋಜನೆಯನ್ನು ಘೋಷಿಸಿದ ನಂತರವಷ್ಟೇ ತಮಿಳುನಾಡು ಸರ್ಕಾರ ಹೊಸೂರಿನಲ್ಲಿ ನೂತನ ಏರ್-ಪೋರ್ಟ್ ನಿರ್ಮಿಸುವ ಮಾತುಗಳನ್ನಾಡಲು ಆರಂಭಿಸಿದೆ. ಅದರಿಂದ ನಮಗೇನೂ ತೊಂದರೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಹೊಸ ಏರ್‌ಪೋರ್ಟ್‌ಗೆ ಏನೆಲ್ಲ ಬೇಕು, ಏನೆಲ್ಲ ಇರಬಾರದು?
ನೂತನ ವಿಮಾನ ನಿಲ್ದಾಣ ಸ್ಥಾಪನೆ ಮಾಡಬೇಕೆಂದರೆ ಉದ್ದೇಶಿತ ಏರ್‌ಪೋರ್ಟ್ ನಿರ್ಮಾಣ ಪ್ರದೇಶದ ಸುತ್ತಮುತ್ತ ಎಲ್ಲೂ ಬೆಟ್ಟಗುಡ್ಡ, ನದಿ/ಸಮುದ್ರಗಳಿರಬಾರದು. ಜತೆಗೆ ಗುಣಮಟ್ಟದ ರಾಜ್ಯ/ರಾಷ್ಟ್ರ ಹೆದ್ದಾರಿ, ರೈಲು ಮತ್ತು ಮೆಟ್ರೋ ಸಂಪರ್ಕ ಇರಬೇಕು.
ಇದಷ್ಟೇ ಮಾತ್ರವಲ್ಲದೇ ಕೇವಲ ಪ್ರಯಾಣಿಕರ ಹರಿವಿನ ದಟ್ಟಣೆಯನ್ನು ಪರಿಗಣಿಸಬೇಕೋ ಅಥವಾ ಕೈಗಾರಿಕಾ ಅಗತ್ಯಗಳನ್ನೂ ನೋಡಬೇಕೋ ಎನ್ನುವ ಅಂಶಗಳು ಮುಖ್ಯವಾಗುತ್ತವೆ. ಒಟ್ಟಿನಲ್ಲಿ ರಾಜ್ಯ ಸರ್ಕಾರ ಮನಸ್ಸಿನಲ್ಲಿ ಕನಕಪುರ ರಸ್ತೆ, ಮೈಸೂರು ರಸ್ತೆ, ಮಾಗಡಿ, ದೊಡ್ಡಬಳ್ಳಾಪುರ, ಡಾಬಸಪೇಟೆ, ತುಮಕೂರು ಮುಂತಾದ ಸ್ಥಳಗಳಿವೆ ಎಂದರು.
ಕೆಂಪೇಗೌಡ ವಿಮಾನ ನಿಲ್ದಾಣ ನಿರ್ಮಿಸಿರುವ ಬೆಂಗಳೂರು ಇಂಟರ್ ನ್ಯಾಷನಲ್ ಏರ್‌ರ್ಪೋರ್ಟ್ ಲಿಮಿಟೆಡ್ (ಬಿಐಎಎಲ್) 2033ರವರೆಗೆ 150 ಕಿ.ಮೀ. ಸುತ್ತಳತೆಯಲ್ಲಿ ಹೊಸ ವಿಮಾನ ನಿಲ್ದಾಣ ಸ್ಥಾಪಿಸಬಾರದು ಎನ್ನುವ ಷರತ್ತನ್ನು ಹಾಕಿತ್ತು. ಇದು 2033ಕ್ಕೆ ಮುಗಿಯಲಿದೆ. ನಾವು ಈಗಿನಿಂದಲೇ ಕೆಲಸ ಮಾಡಿದರೆ 2033ರ ವೇಳೆಗೆ ನೂತನ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸಿಯೇ ಬಿಡಬಹುದು ಎಂದು ತಿಳಿಸಿದರು.
ದೆಹಲಿ ಮತ್ತು ಮುಂಬೈಗಳಲ್ಲಿ ಹಳೆಯ ವಿಮಾನ ನಿಲ್ದಾಣಗಳಿಂದ 35-40 ಕಿ.ಮೀ. ದೂರದಲ್ಲೇ ಎರಡನೆಯ ವಿಮಾನ ನಿಲ್ದಾಣಗಳನ್ನೂ ನಿರ್ಮಿಸಲಾಗಿದೆ. ಇದನ್ನು ಕೂಡ ನಾವು ಪರಿಗಣಿಸಲಿದ್ದೇವೆ. ಒಟ್ಟಿನಲ್ಲಿ ಉದ್ದೇಶಿತ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಎಲ್ಲ ದೃಷ್ಟಿಯಿಂದಲೂ ಮತ್ತಷ್ಟು ಅನುಕೂಲವಾಗುವಂತೆ ನೋಡಿಕೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.
ಎಚ್‌ಡಿ ಕುಮಾರಸ್ವಾಮಿ ಭೇಟಿ, ಚರ್ಚೆ
ರಾಜ್ಯದಲ್ಲಿನ ಕೈಗಾರಿಕಾಭಿವೃದ್ಧಿಗೆ ಕೇಂದ್ರದ ನೆರವು ಕೋರುವ ಬಗ್ಗೆ ಕೇಂದ್ರ ಕೈಗಾರಿಕಾ ಸಚಿವ ಎಚ್ ಡಿ ಕುಮಾರಸ್ವಾಮಿ ಅವರೊಂದಿಗೂ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಸದ್ಯದಲ್ಲೇ ಖುದ್ದು ಭೇಟಿ ನೀಡಿ ಪ್ರಸ್ತಾವ ಸಲ್ಲಿಸಲಾಗುವುದು. ಅವರಿಗೂ ರಾಜ್ಯಕ್ಕೆ ಸೆಮಿಕಂಡಕ್ಟರ್ ಸೇರಿದಂತೆ ಬೃಹತ್ ಕೈಗಾರಿಕೆಗಳನ್ನು ತರಲು ಆಸಕ್ತಿ ಇದ್ದು ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಪಾಟೀಲ ಹೇಳಿದರು.












Click it and Unblock the Notifications