BMTC Traffic Violation: ಬಿಎಂಟಿಸಿ ಬಸ್‌ಗಳ 12 ಸಾವಿರ ಕೇಸ್, ರಿಯಾಯಿತಿಯಡಿ ಕಟ್ಟಬೇಕಾದ ದಂಡ ಎಷ್ಟು?
ರಾಜ್ಯ ಸರ್ಕಾರ ಸಾರ್ವಜನಿಕರಿಗಾಗಿ ನೀಡಿದ್ದ ಸಂಚಾರ ನಿಯಮ ಉಲ್ಲಂಘನೆಯ ಮೇಲಿನ ಶೇ.50 ರಿಯಾಯಿತಿಯ ಲಾಭವನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಪಡೆದುಕೊಂಡಿದೆ.
ಬೆಂಗಳೂರು, ಮಾರ್ಚ್ 07: ರಾಜ್ಯ ಸರ್ಕಾರ ಸಾರ್ವಜನಿಕರಿಗಾಗಿ ನೀಡಿದ್ದ ಸಂಚಾರ ನಿಯಮ ಉಲ್ಲಂಘನೆಯ ಮೇಲಿನ ಶೇ.50 ರಿಯಾಯಿತಿಯ ಲಾಭವನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಪಡೆದುಕೊಂಡಿದೆ.
ಹೌದು, ನಗರದಲ್ಲಿ ಪ್ರಯಾಣಿಕರನ್ನು ಒಂದು ಕಡೆಯಿಂದ ಮತ್ತೊಂದು ಕಡೆ ತಲುಪಿಸುವ ಸಾರ್ವಜನಿಕ ಸಾರಿಗೆಯಾದ ಬಿಎಂಟಿಸಿ ಸಹ ಸಾವಿರಾರು ಬಾರಿ ಸಂಚಾರ ನಿಯಮ ಉಲ್ಲಂಘಿಸಿದೆ. ಈ ಸಂಬಂಧ ಶೇ. 50ರ ರಿಯಾಯಿತಿ ಸೌಲಭ್ಯದಡಿಯಲ್ಲಿ ಬಿಎಂಟಿಸಿ ನಿಗಮವು ಲಕ್ಷಾಂತರ ರೂಪಾಯಿ ದಂಡ ಕಟ್ಟಲು ಸಿದ್ಧತೆ ಮಾಡಿಕೊಂಡಿದೆ.

ಸಂಚಾರ ನಿಯಮ ಉಲ್ಲಂಘನೆಯ ನಿಮಯದ ಮೇಲೆ ಅರ್ಧದಷ್ಟು ಕೊಡುಗೆ ಘೋಷಿಸಿದ ಬಳಿಕ ವಾಹನ ಸವಾರರು ಮುಗಿಬಿದ್ದು, ಸರತಿ ಸಾಲಲ್ಲಿ ನಿಂತು ದಂಡ ಕಟ್ಟಿದ್ದು ಗೊತ್ತೇ ಇದೆ. ಅದೇ ರೀತಿ ಸರ್ಕಾರಿ ವ್ಯಾಪ್ತಿಯ ಬಿಎಂಟಿಸಿ ಸಹ ಒಟ್ಟು 33,00,000 ಲಕ್ಷ ರೂಪಾಯಿ ದಂಡ ಪಾವತಿಸಲಿದೆ.
ನಿತ್ಯ ನಗರದ ತುಂಬೆಲ್ಲ ಓಡಾಡುವ, ಸಾರಿಗೆ ಸೇವೆ ನೀಡುವ ಈ ಬಿಎಂಟಿಸಿ ಬಸ್‌ಗಳ ವಿರುದ್ಧ ಸಿಗ್ನಲ್ ಜಂಪ್, ನಿಷೇಧಿತ ಸ್ಥಳದಲ್ಲಿ ನಿಲುಗಡೆ ಸೇರಿದಂತೆ ಒಟ್ಟು 12,000 ಪ್ರಕರಣಗಳು ದಾಖಲಾಗಿವೆ. ಈ ಸಂಬಂಧ ಸಂಚಾರ ಪೊಲೀಸ್ ಇಲಾಖೆ ಚಲನ್ ಹೊರಡಿಸಿದೆ. ಇಷ್ಟು ಪ್ರಮಾಣದ ಪ್ರಕರಣಗಳಿಂದ ಬಿಎಂಟಿಸಿಗೆ ಒಟ್ಟು 66ಲಕ್ಷ ರೂಪಾಯಿ ದಂಡ ಬಿದ್ದಿದೆ. ಆದರೆ ಸದ್ಯ ಎರಡನೇ ಬಾರಿಗೆ ಸರ್ಕಾರ ಶೇ. 50ರ ರಿಯಾಯಿತಿ ಘೊಷಿಸಿದೆ. ಹೀಗಾಗಿ ಬಿಎಂಟಿಸಿ ಅರ್ಧದಷ್ಟು ಅಂದರೆ 33 ಲಕ್ಷ ರೂಪಾಯಿಯನ್ನು ದಂಡವಾಗಿ ಕಟ್ಟಲು ನಿರ್ಧರಿಸಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಇಷ್ಟು ಪ್ರಮಾಣದ ದಂಡದ ಮೊತ್ತ ಪಾವತಿಸಲು ಉಲ್ಲಂಘನೆ ಮಾಡಿದ ಆಯಾ ಬಸ್‌ಗಳ ಚಾಲಕರ ಸಂಬಳದಿಂದಲೇ ಹಣ ಕಡಿತ ಮಾಡಲಾಗಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಬಸ್ ಚಾಲಕರು ಸಂಚಾರ ನಿಯಮ ಉಲ್ಲಂಘನೆ ಮಾಡುವುದನ್ನು ತಡೆಗೆ ವೇತನ ಕಡಿತದ ಮೂಲಕ ಎಚ್ಚರಿಸಲಾಗುತ್ತಿದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
ದಂಡ ಪಾವತಿಗೆ ಮತ್ತೆ ಮಾ.18ರವರೆಗೆ ಅವಕಾಶ
ಇತ್ತೀಚೆಗೆ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನೇತೃತ್ವದಲ್ಲಿ ನಡೆದ ಸಭೆ ಬಳಿಕ ರಾಜ್ಯ ಸರ್ಕಾರ ಫೆಬ್ರವರಿ 2ರಿಂದ ಫೆ.11ರವರೆಗೆ ಮೊದಲ ಬಾರಿಗೆ ಸಂಚಾರ ನಿಯಮದ ದಂಡದ ಮೇಲೆ ಶೇ. 50 ರಷ್ಟು ರಿಯಾಯಿತಿ ಘೋಷಿಸಿದೆ. ಈ ನಿರ್ಧಾರಕ್ಕೆ ವ್ಯಾಪಕ ಸ್ಪಂದನೆ ದೊರೆತು ಕೋಟ್ಯಾಂತರ ರೂಪಾಯಿ ಸರ್ಕಾರದ ಭೊಕ್ಕಸಕ್ಕೆ ಹರಿದು ಬಂತು. ಇದಾದ ಬಳಿಕ ಸಾಕಷ್ಟು ಕಡೆಗಳಿಂದ ಈ ರಿಯಾಯಿತಿ ಕೊಡುಗೆಯನ್ನು ಇನ್ನಷ್ಟು ದಿನಗಳ ಕಾಲ ವಿಸ್ತರಿಸುವಂತೆ ಬೇಡಿಕೆ ಶುರುವಾಯಿತು.
ಅಂತಿಮವಾಗಿ ರಾಜ್ಯ ಸರ್ಕಾರ ಇದೇ ಮಾರ್ಚ್ 04ರಿಂದ ಮುಂದಿನ 15 ದಿನಗಳ ಕಾಲ ಮತ್ತೆ ಸಂಚಾರ ನಿಯಮ ಉಲ್ಲಂಘನೆಯ ದಂಡವನ್ನು ಶೇ. 50 ರಿಯಾಯಿತಿ ದರದಲ್ಲಿ ಕಟ್ಟಬಹುದು ಎಂದು ನಿರ್ಧಾರ ಪ್ರಕಟಿಸಿತು. ಇದರ ಲಾಭವನ್ನು ಸದ್ಯ ಸಾರ್ವಜನಿಕರು, ಕಾರು, ಜೀಪ್, ದ್ವಿಚಕ್ರ ವಾಹನಗಳಂತ ಇತರ ವಾಹನಗಳ ಚಾಲಕರ ಸೇರಿದಂತೆ ಬಿಎಂಟಿಸಿ ಸಹ ಪಡೆದುಕೊಂಡಿದೆ.
ವಾಹನ ಸವಾರರು ಇದೇ ಮಾರ್ಚ್ 18ರವರೆಗೆ ರಿಯಾಯಿತಿ ದರದಲ್ಲಿ ಸಂಚಾರ ನಿಯಮ ಉಲ್ಲಂಘನೆಯ ದಂಡವನ್ನು ನಿಮ್ಮ ಹತ್ತಿರದ ಸಂಚಾರ ಪೊಲೀಸ್ ಠಾಣೆ, ಸಂಚಾರ ನಿರ್ವಹಣಾ ಕೇಂದ್ರ, ಸಂಚಾರ ಪೊಲೀಸರ ಬಳಿ, ಕರ್ನಾಟಕ ಒನ್ ಮೊಬೈಲ್ ಅಪ್ಲಿಕೇಷನ್ ಮೂಲಕ ಪಾವತಿಸಲು ಅವಕಾಶ ನೀಡಲಾಗಿದೆ ಎಂದು ಸರ್ಕಾರ ತಿಳಿಸಿದೆ.












Click it and Unblock the Notifications