Peenya Flyover: ಮುಗಿಯದ ಬೆಂಗಳೂರು ಪೀಣ್ಯ ಫ್ಲೈಓವರ್ ಕಾಮಗಾರಿ! 400 ಕೇಬಲ್ ಅಳವಡಿಕೆ ಬಾಕಿ, ಟ್ರಾಫಿಕ್..
ಬೆಂಗಳೂರು, ಏಪ್ರಿಲ್ 14: ರಾಜ್ಯ ರಾಜಧಾನಿ ಬೆಂಗಳೂರಿನಿಂದ ಮಧ್ಯ ಹಾಗೂ ಉತ್ತರ ಕರ್ನಾಟಕಕ್ಕೆ ಸಂಪರ್ಕಿಸುವಲ್ಲಿ ರಾಷ್ಟ್ರೀಯ ಹೆದ್ದಾರಿ-4 ಪ್ರಮುಖ ಪಾತ್ರವಹಿಸುತ್ತದೆ. ಈ ಹೆದ್ದಾರಿಯಲ್ಲಿರುವ ಪೀಣ್ಯ ಮೇಲ್ಸೇತುವೆ (Peenya Flyover) ಕಾಮಗಾರಿ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಇದೀಗ 400 ಕೇಬಲ್ ಅಳವಡಿಕೆ ಬಾಕಿ ಇರುವ ಕಾರಣ, ಇನ್ನು ಕೆಲವು ದಿನಗಳ ಕಾಲ ಈ ಭಾಗದಲ್ಲಿ ಓಡಾಡುವ ಪ್ರಯಾಣಿಕರು, ವಾಹನ ಸವಾರರಿಗೆ ತೊಂದರೆ ಉಂಟಾಗಬಹುದು ಎನ್ನಲಾಗುತ್ತಿದೆ.
ಕೇಬಲ್ ಅಳವಡಿಕೆ ಸೇರಿದಂತೆ ಇತರ ಸುರಕ್ಷತಾ ಕಾಮಗಾರಿ ಪ್ರಯುಕ್ತ ಇತ್ತೀಚೆಗೆ ಪ್ರತಿ ದೊಡ್ಡ ಬುಧವಾರ ವಾಹನಗಳ ಸಂಚಾರಕ್ಕೆ ನಿಷೇಧ ಹೇರಿಲಾಗಿತ್ತು. ಈ ಮೊದಲು ಎರಡು ವರ್ಷ ಕಾಮಗಾರಿ ನಡೆಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟ ಮೇಲೂ ತಿಂಗಳುಗಳಿಂದ ಕೆಬಲ್ ಅವಳಡಿಕೆ ಕೆಲಸ ನಡೆಯುತ್ತಲೇ ಇದೆ. ಒಟ್ಟು 1200 ಕೇಬಲ್ ಅವಳಡಿಕೆ ಕಾರ್ಯ ಪ್ರಗತಿಯಲ್ಲಿದೆ.

ಬೆಂಗಳೂರಿನಿಂದ ಸುಮಾರು 20 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯಲ್ಲಿ ಈ ಮೇಲ್ಸೇತುವೆ ಇರುವ ಕಾರಣ, ವಾಹನಗಳ ದಟ್ಟಣೆ ಹೆಚ್ಚಾಗಿರುತ್ತದೆ. ಈ ಕಾರಣದಿಂದಲೂ ಕೆಲಸಗಳು ತಡವಾಗುತ್ತಿವೆ ಎನ್ನಲಾಗಿದೆ. ಮೇಲ್ಸೇತುವೆಯ 120 ಪಿಲ್ಲರ್‌ಗಳಿಗೆ ಪ್ರತಿ ಪಿಲ್ಲರ್‌ಗೆ ಎರಡಂತೆ ಕೆಬಲ್ ಅಳವಡಿಕೆ ಮಾಡಲಾಗಿತ್ತು. ನಂತರ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು.
ಪ್ರತಿ ಪಿಲ್ಲರ್‌ಗೆ 10 ಕೇಬಲ್ ಅಳವಡಿಕೆ
ಇದೀಗ ಪ್ರತಿ ಪಿಲ್ಲರ್‌ಗೆ ತಲಾ ಹತ್ತು ಕೇಬಲ್‌ಗಳಂತೆ ಎಲ್ಲ ಪಿಲ್ಲರ್‌ಗಳಿಗೆ 1200 ಕೇಬಲ್ ಅಳವಡಿಕೆ ಮಾಡಬೇಕಿದೆ. ಈ ಸಂಬಂಧ 800 ಕೇಬಲ್ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿದೆ. ಇನ್ನೂ 400 ಕೇಬಲ್ ಅಳವಡಿಕೆ ಬಾಕಿ ಉಳಿದಿದೆ. ಹೀಗಾಗಿ ಇನ್ನಷ್ಟು ದಿನ ಮೇಲ್ಸೇತುವೆ ಆಗಾಗ ಬಂದ್ ಮಾಡಿ, ಕಾಮಗಾರಿ ಕೈಗೊಳ್ಳಬೇಕಾಗುತ್ತದೆ.

ನಾಲ್ಕು ವರ್ಷಗಳ ಹಿಂದೆ (2021) ಕೇಬಲ್ ಬಾಗಿದ್ದರಿಂದ ಸಮಸ್ಯೆ ಆಗಿತ್ತು ಎಂಬುದನ್ನು ಭಾರತೀಯ ಹೆದ್ದಾರಿ ಪ್ರಾಧಿಕಾರ ಪತ್ತೆ ಮಾಡಿತ್ತು. ತಜ್ಞರನ್ನು ಕರೆ ತಂದು ಪರಿಶೀಲಿಸಿತ್ತು. ನಂತರ ತಿಂಗಳುಗಳ ಸಮಯ ಪಡೆದು ಕೇಬಲ್ ಅಳವಡಿಸಿತ್ತು. ಆದರೂ ಸಮಸ್ಯೆ ಉಂಟಾಗುತ್ತಿದೆ.
ಮೇಲ್ಸೇತುವೆ ಇರುವ ಹೆದ್ದಾರಿ ಬೆಂಗಳೂರು-ಪುಣೆಗೆ ಸಂಪರ್ಕಕಲ್ಪಿಸುತ್ತದೆ. ಹೀಗಾಗಿ ನಿತ್ಯ ಲಕ್ಷಾಂತರ ವಾಹನಗಳು ಓಡಾಡುತ್ತವೆ. ಇದೀಗ ಮೇಲ್ಸೇತುವೆ ಸಮಸ್ಯೆಯಿಂದಾಗಿ ಕೆಳಗಿನ ರಸ್ತೆ ಹಿಡಿದು ಹೋಗಬೇಕಾಗುತ್ತದೆ. ಇದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಜನರು ಮಾತ್ರವಲ್ಲದೇ, ದಟ್ಟಣೆ ನಿಭಾಯಿಸುವಲ್ಲಿ ಟ್ರಾಫಿಕ್ ಪೊಲೀಸರು ಹೈರಾಣಾಗಿದ್ದಾರೆ. ಕೆಲವೊಮ್ಮೆ ಭಾನುವಾರ ವಾಹನಗಳ ಸಂಖ್ಯೆ ಕಡಿಮೆ ಇದ್ದಾಗ, ಅಗತ್ಯಕ್ಕೆ ಅನುಗುಣವಾಗಿ ದಿಢೀರ್ ಮೇಲ್ಸೇತುವೆ ಬಂದ್ ಮಾಡಿದ ಉದಾಹರಣೆಗಳುಇವೆ.
ಕಾಮಗಾರಿ ತಡವಾಗುತ್ತಿರುವುದು ಏಕೆ?
ಮೇಲ್ಸೇತುವೆ ಎತ್ತರಕ್ಕೆ ಕೆಲಸದ ಸಿಬ್ಬಂದಿ ಕ್ರೇನ್ ಸಹಾಯದಿಂದ ತೆರಳುತ್ತಾರೆ. ಅಲ್ಲಿ ಒಳಹೋಗಿ ಗ್ಯಾಸ್ ಕಟರ್ ಸಹಾಯದಿಂದ ಹಳೆಯ ಕೇಬಲ್ ಕತ್ತರಿಸಬೇಕು. ಬಳಿಕ ಹೊಸ ಕೇಬಲ್ ಅಳವಡಿಕೆ ಮಾಡಬೇಕು. ಒಂದು ಪಿಲ್ಲರ್‌ಗೆ ಹತ್ತು ಕೇಬಲ್ ಅಳವಡಿಕೆ ಮಾಡಲಾಗುತ್ತಿದೆ. ಈ ವೇಳೆ ಕ್ರೇನ್‌ನಿಂದ ಮೇಲ್ಸೇತುವೆ ಕೇಬಲ್ ಅಳಡಿಕೆಯ ಚಿಕ್ಕ ಭಾಗಕ್ಕೆ ತೆರಳಿದ ಸಿಬ್ಬಂದಿಗೆ ಸಮರ್ಪಕ ಗಾಳಿ ಸಿಗುವುದಿಲ್ಲ. ಅಷ್ಟು ಎತ್ತರದಲ್ಲಿ ಸೂಕ್ಷ್ಮವಾಗಿ ಕೆಲಸ ಮಾಡಬೇಕಾಗುತ್ತದೆ. ಜೊತೆಗೆ ವಾಹನ ಸವಾರರಿಗೂ ಸಂಚಾರಕ್ಕೆ ಅವಕಾಶ ನೀಡಲಾಗಿರುತ್ತದೆ. ಇದೆಲ್ಲ ಕಾರಣದಿಂದ ಕೇಬಲ್ ಅಳವಡಿಕೆ ಕೆಲಸ ತಡವಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.












Click it and Unblock the Notifications