Bengaluru: ಬೆಂಗಳೂರು ಉಪನಗರ ರೈಲ್ವೆ ಯೋಜನೆ ಅನುಷ್ಠಾನವಾದರೆ 40,000 ಸಾವಿರ ಬಸ್‌ಗಳ ಸಂಚಾರ ಸ್ಥಗಿತ
ಬೆಂಗಳೂರು: ಬೆಂಗಳೂರಿಗರ ಬಹು ವರ್ಷಗಳ ಕನಸಾಗಿರುವ ಉಪನಗರ ರೈಲ್ವೆ ಯೋಜನೆ (ಬಿಎಸ್‌ಆರ್‌ಪಿ)ಯ ಬಗ್ಗೆ ಮಹತ್ವದ ಚರ್ಚೆ ನಡೆದಿದೆ. ಈ ಯೋಜನೆಯು ಒಮ್ಮೆ ಪೂರ್ಣಗೊಂಡರೆ, ಸುಮಾರು 19 ಲಕ್ಷ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಅಲ್ಲದೆ ಅಂದಾಜು 40,000 ಬಸ್ ಸಂಚಾರವನ್ನು ತಪ್ಪಿಸಬಹುದು ಅಥವಾ 40 ಸಾವಿರ ಬಸ್ ಸಂಚಾರವನ್ನು ತೆಗೆದುಹಾಕಬಹುದಾಗಿದೆ ಎಂದು ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ (ಕರ್ನಾಟಕ) ಲಿಮಿಟೆಡ್ (ಕೆ-ರೈಡ್) ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ್ ಸಿಂಗ್ ಅವರು ಹೇಳಿದ್ದಾರೆ.
ಬೆಂಗಳೂರು ಹಾಗೂ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಟ್ರಾಫಿಕ್ ಜಾಮ್ ಕಂಟ್ರೋಲ್ ಮಾಡುವಲ್ಲಿ ಹಾಗೂ ಸಮಯ ಉಳಿತಾಯ ಮಾಡುವಲ್ಲಿ ಉಪನಗರ ರೈಲ್ವೆ ಯೋಜನೆಯು ಮಹತ್ವದ ಪಾತ್ರವನ್ನು ವಹಿಸುತ್ತದೆ. ಈ ಯೋಜನೆಯು ಸುಮಾರು 24 ಲೆವೆಲ್ ಕ್ರಾಸಿಂಗ್‌ಗಳನ್ನು ತೆಗೆದು ಹಾಕಲಿದೆ. 17 ಮೆಟ್ರೋ ನಿಲ್ದಾಣಗಳು, 22 ರೈಲು ನಿಲ್ದಾಣಗಳು ಮತ್ತು ಬಸ್ ನಿಲ್ದಾಣ ಮಾರ್ಗಗಳಿಗೆ ಸಮೀಪ ಸಂಪರ್ಕ ಸಾಧ್ಯವಾಗಲಿದೆ. ಇದರಿಂದ ಬೆಂಗಳೂರು ಹಾಗೂ ಬೆಂಗಳೂರಿನ ಸುತ್ತಮುತ್ತಲಿನ ಹಳ್ಳಿಯ ಜನರಿಗೆ ಹಾಗೂ ನಿತ್ಯವೂ ಬೆಂಗಳೂರಿಗೆ ಪ್ರಯಾಣಿಸುವವರಿಗೆ ಭಾರೀ ಅನುಕೂಲವಾಗಲಿದೆ.

ಇನ್ನು ಬೆಂಗಳೂರಿನ ಭಾರತೀಯ ಕಾಂಕ್ರೀಟ್ ಸಂಸ್ಥೆ ಬುಧವಾರ ಆಯೋಜಿಸಿದ್ದ ಕಾಂಕ್ರೀಟ್ ಪನೋರಮಾ ಮತ್ತು ಡೆಮಿನಾರ್ 2026 ರಲ್ಲಿ 'ಇಂಟಿಗ್ರೇಟೆಡ್ ರೈಲ್ ನೆಟ್‌ವರ್ಕ್‌ನೊಂದಿಗೆ ಭವಿಷ್ಯದ ನಗರಗಳನ್ನು ನಿರ್ಮಿಸುವುದು ವಿಷಯದ ಕುರಿತು ಲಕ್ಷ್ಮಣ್ ಸಿಂಗ್ ಅವರು ಮಾತನಾಡಿದ್ದಾರೆ. ಸಂಪಿಗೆ, ಮಲ್ಲಿಗೆ, ಪಾರಿಜಾತ ಮತ್ತು ಕನಕ ಎಂಬ ನಾಲ್ಕು ಕಾರಿಡಾರ್‌ಗಳಲ್ಲಿ 57 ನಿಲ್ದಾಣಗಳೊಂದಿಗೆ 148 ಕಿ.ಮೀ ಉದ್ದದ ಮಾರ್ಗವನ್ನು ಉಪನಗರ ರೈಲ್ವೆ ಯೋಜನೆ ಒಳಗೊಂಡಿದೆ.
ಉಪನಗರ ರೈಲು ಜಾಲ ಹೇಗೆ ಅನುಕೂಲ
ಐಐಎಸ್ಸಿ ದತ್ತಾಂಶದ ಪ್ರಕಾರ, ಎಲ್ಲಾ ಕಾರಿಡಾರ್‌ಗಳು ಸಿದ್ಧವಾದರೆ 2027ರ ವೇಳೆಗೆ ಈ ಜಾಲವು ಪ್ರತಿದಿನ 19 ಲಕ್ಷ ಪ್ರಯಾಣಿಕರ ಪ್ರಯಾಣಕ್ಕೆ ಸಹಕಾರಿಯಾಗಲಿದೆ. ಈ ಯೋಜನೆಯು ಒಮ್ಮೆ ಪೂರ್ಣಗೊಂಡರೆ ರಸ್ತೆಗಳಲ್ಲಿರುವ ಅಂದಾಜು 40,000 ಬಸ್‌ಗಳ ಸಂಚಾರ ಸೇವೆಗೆ ಗುಡ್‌ಬಾಯ್ ಹೇಳಬಹುದು. ಇದರಿಂದಾಗಿ ಬೆಂಗಳೂರು ಹಾಗೂ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆಯು ಭಾರೀ ಇಳಿಕೆಯಾಗಲಿದೆ.
ಉಪನಗರ ರೈಲು ಜಾಲವು 17 ಮೆಟ್ರೋ ನಿಲ್ದಾಣಗಳು, 22 ರೈಲ್ವೆ ನಿಲ್ದಾಣಗಳು ಮತ್ತು ಪ್ರಮುಖ ಬಸ್ ಡಿಪೋಗಳಿಗೆ ಸಮೀಪವಾಗಿ ಇರಲಿದೆ. ಇದು ತಡೆರಹಿತ ಬಹು-ಮಾದರಿ ಸಂಪರ್ಕವನ್ನು ಖಚಿತಪಡಿಸುತ್ತದೆ. ಹೆಚ್ಚುವರಿಯಾಗಿ ಸೌರ ಫಲಕಗಳನ್ನು ಅಳವಡಿಸುವುದು, ಮಳೆ ನೀರು ಕೊಯ್ಲು ವ್ಯವಸ್ಥೆ ಮತ್ತು ವಾರ್ಷಿಕವಾಗಿ ಸುಮಾರು 10 ಮಿಲಿಯನ್ ಟನ್ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ತಪ್ಪಿಸುವುದು. ವರ್ಷಕ್ಕೆ 22 ಮಿಲಿಯನ್ ಲೀಟರ್ ನೀರನ್ನು ಸಂಗ್ರಹಿಸುವ ಗುರಿಯನ್ನು ಸಹ ಹಾಕಿಕೊಳ್ಳಲಾಗಿದೆ.
ಅಲ್ಲದೆ ಇದರಲ್ಲಿನ ಮತ್ತೊಂದು ಪ್ರಮುಖ ಅಂಶವೆಂದರೆ ಯಶವಂತಪುರ ಇಂಟರ್ಚೇಂಜ್‌ನ ವಿನ್ಯಾಸ, ಇದು ಉಪನಗರ ರೈಲು, ಮೆಟ್ರೋ ಮತ್ತು ರೈಲ್ವೆಗಳನ್ನು ಸಂಯೋಜಿಸುತ್ತದೆ. ಐದು ಅಂತಸ್ತಿನ ಈ ನಿಲ್ದಾಣದಲ್ಲಿ ಎರಡು ಬೇಸ್‌ಮೆಂಟ್ ಪಾರ್ಕಿಂಗ್ ಹಂತಗಳು ಹಾಗೂ ಒಂದರ ಮೇಲೊಂದು ಇರುವ ಉಪನಗರ ರೈಲು ಮಾರ್ಗಗಳ ವ್ಯವಸ್ಥೆ ಇರಲಿದೆ. ನಗರದಲ್ಲಿ ಇದೇ ಮೊದಲ ಬಾರಿ ಇಂತಹ ವಿನ್ಯಾಸ ಮಾಡಲಾಗುತ್ತಿದೆ.
ಉಪನಗರ ರೈಲುಗಳು ಹೆಚ್ಚಿನ ಬಾರಿ ಸಂಚರಿಸಲು ಸುಮಾರು 24 ಲೆವೆಲ್ ಕ್ರಾಸಿಂಗ್‌ಗಳನ್ನು ತೆಗೆದುಹಾಕಲಾಗುತ್ತದೆ. ಹೆಚ್ಚು ಜನಸಂಚಾರ ಇರುವ ಪ್ರದೇಶಗಳಲ್ಲಿ ಸಾಮಾನ್ಯ ಫ್ಲೈಓವರ್ ನಿರ್ಮಿಸಲು ಸಾಧ್ಯವಾಗದ ಕಾರಣ, ಟ್ರಾಫಿಕ್‌ಗೆ ಹೆಚ್ಚು ಅಡಚಣೆ ಆಗದಂತೆ ಹಾಗೂ ಮನೆಗಳನ್ನು ಕೆಡವುವ ಅಗತ್ಯವಿಲ್ಲದಂತೆ, ಹೊಸ ತಂತ್ರಜ್ಞಾನ ಬಳಸಿ ಭಾರತೀಯ ರೈಲ್ವೆಯ ಹಳಿಗಳನ್ನು ಎತ್ತರಕ್ಕೆ ಎತ್ತುವ ಯೋಜನೆ ಇದಾಗಿದೆ ಎಂದು ಲಕ್ಷ್ಮಣ್ ಸಿಂಗ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.












Click it and Unblock the Notifications