ಬೆಂಗಳೂರಿನ ನಾಲ್ವರು ಪೊಲೀಸರ ಅಮಾನತು

ಆಗ್ನೇಯ ಡಿಸಿಪಿ ಕಚೇರಿ ಸಹಾಯಕ ಆಡಳಿತಾಧಿಕಾರಿ ಎನ್. ಆಚಾರ್, ಡಿಸಿಪಿ ಆಪ್ತಸಹಾಯಕ ಶ್ರೀನಿವಾಸ್, ಕಂಪ್ಯೂಟರ್ ಆಪರೇಟರ್ ಸುರೇಶ್ ಹಾಗೂ ಕ್ಲರ್ಕ್ ವೀರೇಶ್ ಎಂಬುವರನ್ನು ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಅಮಾನತು ಮಾಡಿದ್ದಾರೆ.
ಆಗ್ನೇಯ ವಿಭಾಗದ ವ್ಯಾಪ್ತಿಯ 13 ಠಾಣೆಗಳ 25 ಕಾನ್ಸ್‌ಟೇಬಲ್‌ಗಳ ವರ್ಗಾವಣೆಗೆ ಡಿಸಿಪಿ ಟಿ.ಡಿ ಪವಾರ್ ನಿರ್ಧರಿಸಿದ್ದರು. ನೂರಕ್ಕೂ ಹೆಚ್ಚು ಪೇದೆಗಳು ಅರ್ಜಿಸಲ್ಲಿಸಿದ ಹಿನ್ನಲೆಯಲ್ಲಿ ಲಾಟರಿ ಎತ್ತಿ ಜೂ.9ರಂದು ವಿವಿಧ ಪೊಲೀಸ್ ಠಾಣೆಗಳಿಗೆ ಡಿಸಿಪಿ ವರ್ಗಾವಣೆ ಪಟ್ಟಿ ಸಿದ್ಧಪಡಿಸಿದ್ದರು.
ಆದರೆ, ಡಿಸಿಪಿ ಕಚೇರಿ ಸಿಬ್ಬಂದಿ ಜೂ. 9ರ ರಾತ್ರಿ ವರ್ಗಾವಣೆ ಪಟ್ಟಿಯಲ್ಲಿರುವ ಕೆಲವು ಪೇದೆಗಳಿಂದ ಹಣ ಪಡೆದು ಅವರಿಗೆ ಬೇಕಾದ ಠಾಣೆಗೆ ವರ್ಗಾವಣೆಯಾಗುವಂತೆ ಮತ್ತೊಂದು ಪಟ್ಟಿಯನ್ನು ಅಕ್ರಮವಾಗಿ ತಯಾರಿಸಿದ್ದರು.
ಜೂ.10ರಂದು ವರ್ಗಾವಣೆ ಪಟ್ಟಿಗೆ ಒಪ್ಪಿಗೆ ಸೂಚಿಸಿ ಡಿಸಿಪಿ ಪವಾರ್, ಪೊಲೀಸ್ ಆಯುಕ್ತರ ಕಚೇರಿಗೆ ಕಳುಹಿಸಿದ್ದರು. ಈ ಪಟ್ಟಿಗೆ ಆಯುಕ್ತರು ಅನುಮೊದನೆ ಸಹ ನೀಡಿದ್ದರು.
ವರ್ಗಾವಣೆ ಆದೇಶ ಹೊರ ಬಿದ್ದ ಕೂಡಲೇ ಡಿಸಿಪಿ ಪವಾರ್‌ಗೆ ಅನಾಮಧೇಯ ಪತ್ರ ಬಂದಿದೆ. ಪತ್ರ ಮಾಹಿತಿಯನ್ನು ಓದಿ ಪರಿಶೀಲಿಸಿದಾಗ ಲಾಟರಿ ಎತ್ತಿ ಆಯ್ಕೆ ಮಾಡಿದ ಪಟ್ಟಿಗೂ ವರ್ಗಾವಣೆ ಆದೇಶ ಕಳುಹಿಸದ ಪಟ್ಟಿಗೂ ಅಜಗಜಾಂತರ ವ್ಯತ್ಯಾಸವಿರುವುದು ಗೊತ್ತಾಯಿತು.
ಈ ಹಿನ್ನೆಲೆಯಲ್ಲಿ ಡಿಸಿಪಿ ಪವಾರ್ ಅವರು ಅಕ್ರಮದಲ್ಲಿ ಭಾಗಿಯಾಗಿರುವ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲು ಆಯುಕ್ತರಿಗೆ ಶಿಫಾರಸು ಮಾಡಿದ್ದರು.












Click it and Unblock the Notifications