Bengaluru Second Airport: ಇದೇ ಜಾಗದಲ್ಲೇ ಏರ್‌ಪೋರ್ಟ್ ನಿರ್ಮಿಸಬೇಕು! ಅಸಮಾಧಾನಿತ 33 ಶಾಸಕರು ಪಟ್ಟು
ಬೆಂಗಳೂರು, ಏಪ್ರಿಲ್ 07: ಬೆಂಗಳೂರಿಗೆ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Bengaluru Second Airport updates) ಮಾಡಲು ಸರ್ಕಾರ ಯೋಜಿಸಿದೆ. ಯಾವ ಸ್ಥಳದಲ್ಲಿ ನಿರ್ಮಿಸಬೇಕು ಎಂಬ ವಿಚಾರದಲ್ಲಿ ಸರ್ಕಾರದ ನಡೆಗೆ ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕದ ಶಾಸಕರು ಪಕ್ಷಾತೀತಿವಾಗಿ ಒಟ್ಟಾಗಿ ಅಸಮಾಧಾನ ಹೊರ ಹಾಕಿದ್ದಾರೆ. ಈ ಸಂಬಂಧ ಬರೋಬ್ಬರಿ 33 ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಇದೇ ಸ್ಥಳದಲ್ಲಿ ನಿರ್ಮಿಸುವಂತೆ ಪಟ್ಟು ಹಿಡಿದಿದ್ದಾರೆ. ಸದ್ಯ ಗುರುತಿಸಲಾದ ಮೂರು ಸ್ಥಳ ಆಯ್ಕೆಗೆ ವಿಘ್ನ ಎದುರಾಗುತ್ತಾ? ಸರ್ಕಾರ ಮನಸ್ಸು ಬದಲಿಸುತ್ತಾ?..
ಉತ್ತರ ಕರ್ನಾಟಕ ಭಾಗದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೇಡಿಕೆ ಇದ್ದೆ ಇದೆ. ಯಾವಾಗ ಬೆಂಗಳೂರು ಎರಡನೇ ವಿಮಾನ ನಿಲ್ದಾಣ ನಿರ್ಮಿಸುವ ಯೋಜನೆ ಆರಂಭವಾಯಿತೋ ಅದಾಗಿನಿಂದಲೇ ತುಮಕೂರು ಜಿಲ್ಲೆ ವ್ಯಾಪ್ತಿಯಲ್ಲಿ, ಚಿತ್ರದುರ್ಗ ವ್ಯಾಪ್ತಿಯಲ್ಲಿ ನಿರ್ಮಿಸಿದರೆ ಹತ್ತಾರು ಜಿಲ್ಲೆಗಳಿಗೆ ಅನುಕೂಲ ಎಂಬ ಆಗ್ರಹ, ಮನವಿಗಳು ಕೇಳಿ ಬರುತ್ತಲೇ ಇವೆ. ಇದೀಗ JDS, BJP ಆಡಳಿತ ಪಕ್ಷ ಕಾಂಗ್ರೆಸ್ ಸೇರಿದಂತೆ ಒಟ್ಟು 33 ಶಾಸಕರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಮುಖೇನ ಆಗ್ರಹಿಸಿದ್ದಾರೆ.

150 ಕಿ.ಮೀ.ದೂರವೇ ಏರ್‌ಪೋರ್ಟ್ ನಿರ್ಮಿಸಿ
ಬೆಂಗಳೂರಿನಲ್ಲಿ ಈಗಾಗಲೇ ಸಂಚಾರ ದಟ್ಟಣೆ ಇದೆ. ಜನಸಂಖ್ಯೆ ಹೆಚ್ಚಾಗುತ್ತಿದೆ. ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊರತಾಗಿ ಏರ್‌ಪೋರ್ಟ್ ನಿರ್ಮಿಸಬೇಕಾದರೆ 150 ಕಿಲೋ ಮೀಟರ್ ದೂರದಲ್ಲಿ ನಿರ್ಮಿಸಬೇಕು. ಆದ್ದರಿಂದ ತುಮಕೂರು ಜಿಲ್ಲೆಯ ಶಿರಾ ಬಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಬೇಕು. ಇದರಿಂದ ಉತ್ತರ ಕರ್ನಾಟಕ ಮಧ್ಯ ಕರ್ನಾಟಕಕ್ಕೂ ಅನುಕೂಲವಾಗುತ್ತದೆ.
ಮೂರು ಸ್ಥಳ ಪರಿಶೀಲನೆ ಸಾಧ್ಯತೆ
ಈ ಸಂಬಂಧ ಶಾಸಕ ಟಿ.ಬಿ.ಜಯಚಂದ್ರ ಅವರು ಇತ್ತೀಚೆಗೆ ವಿಧಾನಸಭಾ ಅಧಿವೇಶನದಲ್ಲಿ ಆಗ್ರಹಿಸಿದ್ದರು. ಇದೀಗ ಅವರ ನೇತೃತ್ವದಲ್ಲಿಯೇ 33 ಮಂದಿ ಶಾಸಕರು ಸಹಿ ಹಾಕಿದ ಪತ್ರ ಮೂಲಕ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಆದರೆ ರಾಜ್ಯ ಸರ್ಕಾರ ಮೂಲ ಸೌಕರ್ಯಾಭಿವೃದ್ಧಿ ಇಲಾಖೆಯು ಕನಕಪುರದ ಕಡೆಗೆ ಎರಡು ಸ್ಥಳ ಮತ್ತು ಕುಣಿಗಲ್ ರಸ್ತೆ ಕಡೆಗೆ ಒಂದು ಸ್ಥಳ ಗುರುತಿಸಲಾಗಿದೆ. ಈ ಸ್ಥಳ ಪರಿಶೀಲನೆಗೆ ಕೇಂದ್ರ ಸರ್ಕಾರದ AAI (ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ) ತಂಡದ ಅಧಿಕಾರಿಗಳು ಇಂದು ಇಲ್ಲವೇ ನಾಳೆ ಬೆಂಗಳೂರಿಗೆ ಆಗಮಿಸಿ ಏರ್‌ಪೋರ್ಟ್ ಯೋಜನೆಗೆ ಗುರುತಿಸಿದ ಸ್ಥಳ ಪರಿಶೀಲನೆ ಮಾಡಲಿದ್ದಾರೆ.

ಶಿರಾ ಭಾಗದಲ್ಲೇ ಏರ್‌ಪೋರ್ಟ್ ಯಾಕೆ? ಶಾಸಕರು ಹೇಳೋದೇನು?
ಶಿರಾ ಭಾಗದಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಿದರೆ ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದ ಜನರಿಗೆ ಸಹಾಯವಾಗುತ್ತದೆ. ಶಿರಾ ಸುತ್ತಮುತ್ತ ರಕ್ಷಣಾ ಇಲಾಖೆ ಕಚೇರಿಗಳಿವೆ. ಗುಬ್ಬಿ ಬಳಿಕ ಎಚ್‌ಎಎಲ್ ಘಟಕ ಇದೆ. ಚಿತ್ರದುರ್ಗ ವ್ಯಾಪ್ತಿಯಲ್ಲಿ ಡಿಆರ್‌ಡಿಓ ಘಟಕ ಇದೆ. ಚಳ್ಳಕೇರಿಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ, ತುಮಕೂರಿನಲ್ಲಿ ಕೈಗಾರಿಕೆಗಳು ಇವೆ. ಇದಲ್ಲದೇ, ರಾಷ್ಟ್ರೀಯ ಹೆದ್ದಾರಿ, ರೈಲು ಸೇವೆ ಉತ್ತಮವಾಗಿದೆ. ದೊಡ್ಡ ಕೈಗಾರಿಕೆಗಳು ಇದೇ ವ್ಯಾಪ್ತಿಯಲ್ಲೇ ಇವೆ.

ಬೆಂಗಳೂರು ಬಿಟ್ಟು ಬೇರೆ ಭಾಗ, ಜಿಲ್ಲೆ ಅಭಿವೃದ್ಧಿ ಆಗಲಿ!
ಇದೆಲ್ಲ ಅಂಶಗಳು ಹಾಗೂ ಭವಿಷ್ಯದ ದೃಷ್ಟಿಯಿಂದ ರಾಜ್ಯ ಸರ್ಕಾರ ಶಿರಾ ಭಾಗದಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿರ್ಮಿಸಬೇಕೆಂಬುದು ಶಾಸಕರ ಒತ್ತಾಯವಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ ವಾಹನ ದಟ್ಟಣೆ, ಸಂಚಾರ ನಿಯಂತ್ರಿಸಲಾಗದೇ, ಮೂಲ ಸೌಕರ್ಯಗಳು ಸುಧಾರಣೆ ಇಲ್ಲದೇ ಸಾರ್ವಜನಿಕರು ದೂರುತ್ತಿದ್ದಾರೆ. ಈ ಭಾಗದಲ್ಲೇ ಕೈಗಾರಿಕೆಗಳು, ಅಪಾರ ಬಂಡವಾಳ ಹೂಡಿಕೆ ಹರಿದು ಬಂದಿದೆ. ಅಭಿವೃದ್ಧಿಯಲ್ಲಿ ಪ್ರಾದೇಶಿಕ ಅಸಮಾನತೆ ಕೂಗು ಮೊದಲಿಂದಲೂ ಕೇಳಿ ಬರುತ್ತಿದೆ. ಇಂತಹ ಸಂಧರ್ಭದಲ್ಲಿ ಶಿರಾದಲ್ಲಿ ಹೊಸ ಏರ್‌ಪೋರ್ಟ್ ನಿರ್ಮಿಸಿದರೆ ಬೆಂಗಳೂರು ಹೊರತಾಗಿ ಬೇರೆ ಭಾಗಗಳು, ಜಿಲ್ಲೆಗಳ ಅಭಿವೃದ್ಧಿಗೆ ಕೃಪೆ ತೋರಿದಂತಾಗುತ್ತದೆ ಎಂಬುದು ಜನರ ಆಶಯವಾಗಿದೆ.
ಬೆಂಗಳೂರಿನಲ್ಲೇ ಏರ್‌ಪೋರ್ಟ್ ನಿರ್ಮಿಸಬೇಕು ಎಂದು ಇತ್ತೀಚೆಗೆ ಸಚಿವ ಎಂಬಿ ಪಾಟೀಲ್ ಹೇಳಿದ್ದರು. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಕನಕಪುರ ಭಾಗದಲ್ಲಿ ನಿರ್ಮಿಸಲು ಮನಸ್ಸಿದೆ. ಸಚಿವ ಜಿ.ಪರಮೇಶ್ವರ ಅವರಿಗೂ ತುಮಕೂರು ಭಾಗದಲ್ಲಿ ನಿರ್ಮಿಸುವ ಆಲೋಚನೆ ಇದೆ. ಮುಂದಿನ ದಿನಗಳಲ್ಲಿ ಜಾಗ ಅಂತಿಮಗೊಂಡರೆ, ಹೊಸ ಏರ್‌ಪೋರ್ಟ್ ಎಲ್ಲಿ ನಿರ್ಮಾಣವಾಗುತ್ತದೆ ಎಂಬುದು ತಿಳಿಯಲಿದೆ.












Click it and Unblock the Notifications