ನೀರಿನ ತೊಟ್ಟಿಗೆ ಬಿದ್ದು ಮೂರು ವರ್ಷದ ಮಗು ಸಾವು
ಬೆಂಗಳೂರು, ಮೇ 12 : ನೀರಿನ ತೊಟ್ಟಿಗೆ ಬಿದ್ದು ಮೂರು ವರ್ಷದ ಮಗುವೊಂದು ಮೃತಪಟ್ಟಿರುವ ಘಟನೆ ಪೀಣ್ಯ ಸಮೀಪದ ಮಾರುತಿ ಲೇಔಟ್ ನಲ್ಲಿ ನಡೆದಿದೆ. ಅಜ್ಜಿ ಮನೆಯ ಬಳಿ ಆಟವಾಡುತ್ತಿದ್ದ ಮಗು, ನಿರ್ಮಾಣ ಹಂತದ ಮನೆ ನೀರಿನ ತೊಟ್ಟಿಗೆ ಬಿದ್ದು ಮೃತಪಟ್ಟಿಗೆ ಎಂದು ಪೊಲೀಸರು ತಿಳಿಸಿದ್ದಾರೆ.
ಖಾಸಗಿ ಕಂಪನಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಮಲ್ಲಿಕಾರ್ಜುನ್ ಅವರ ಎರಡನೇ ಪುತ್ರ ಯಶವಂತ್ (3) ಮೃತಪಟ್ಟ ಮಗು ಎಂದು ಗುರುತಿಸಲಾಗಿದೆ. ಶನಿವಾರ ಮಧ್ಯಾಹ್ನ ಅಜ್ಜಿ ಮನೆಯ ಬಳಿ ಆಟವಾಡುತ್ತಿದ್ದಾಗ ಮಗು ತೊಟ್ಟಿಗೆ ಬಿದ್ದು ಸಾವನ್ನಪ್ಪಿದ್ದು, ಸಂಜೆಯ ವೇಳಗೆ ಮೃತದೇಹ ಪತ್ತೆಯಾಗಿದೆ.

ಆಂಧ್ರಪ್ರದೇಶ ಮೂಲದ ಮಲ್ಲಿಕಾರ್ಜುನ್ ಮೂರು ವರ್ಷಗಳ ಹಿಂದೆ ಬೆಂಗಳೂರಿಗೆ ಆಗಮಿಸಿದ್ದರು. ಖಾಸಗಿ ಕಂಪನಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ ಅವರು, ತಾಯಿ ಚಿಕ್ಕಮ್ಮ, ಪತ್ನಿ ರಾಜೇಶ್ವರಿ, ಮಕ್ಕಳಾದ ಜಸ್ವಂತ್ ಹಾಗೂ ಯಶವಂತ್ ಜತೆ ಮಾರುತಿ ಲೇಔಟ್ ನಲ್ಲಿ ನೆಲೆಸಿದ್ದರು. ಮಲ್ಲಿಕಾರ್ಜುನ್ ಪತ್ನಿ ರಾಜೇಶ್ವರಿ ಸಹ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. [ನೀರಿನ ತೊಟ್ಟಿಗೆ ಎಷ್ಟು ಬಲಿ ಬೇಕು?]
ಶನಿವಾರ ಇಬ್ಬರೂ ಕೆಲಸಕ್ಕೆ ಹೋದ ನಂತರ ಇಬ್ಬರು ಮಕ್ಕಳು ಅಜ್ಜಿ ಮನೆಯ ಬಳಿ ಆಟವಾಡುತ್ತಿದ್ದರು. ಈ ಸಂದರ್ಭದಲ್ಲಿ ಯಶವಂತ್ ಮನೆಯ ಪಕ್ಕದಲ್ಲಿದ್ದ ನಿರ್ಮಾಣ ಹಂತದ ಕಟ್ಟಡದ ನೀರಿನ ತೊಟ್ಟಿಗೆ ಬಿದ್ದಿದ್ದಾನೆ. ಮಗುವಿಗಾಗಿ ಅಕ್ಕಪಕ್ಕದಲ್ಲಿ ಹುಡುಕಾಟ ನಡೆಸಿದ ಪೋಷಕರಿಗೆ ಸಂಜೆಯ ವೇಳೆಗೆ ನೀರಿನ ತೊಟ್ಟಿಯಲ್ಲಿ ಶವ ಪತ್ತೆಯಾಗಿದೆ.
ತೊಟ್ಟಿಯನ್ನು ಮುಚ್ಚಿರಲಿಲ್ಲ : ಮಲ್ಲಿಕಾರ್ಜುನ್ ಅವರ ಮನೆ ಪಕ್ಕದಲ್ಲೇ ಆನಂದ ಎಂಬುವವರು ಮನೆಯನ್ನು ನಿರ್ಮಾಣ ಮಾಡುತ್ತಿದ್ದು, ಅದಕ್ಕಾಗಿ ಸುಮಾರು 10 ಅಡಿ ಆಳದ ತೊಟ್ಟಿ ನಿರ್ಮಾಣ ಮಾಡಿದ್ದಾರೆ. ಆದರೆ, ಅದನ್ನು ಮುಚ್ಚಿಲ್ಲ. ಅಲ್ಲದೇ ಅಲ್ಲಿ ಭದ್ರತಾ ಸಿಬ್ಬಂದಿಯನ್ನು ನೇಮಿಸಿಲ್ಲ. ಆದ್ದರಿಂದ ಅಲ್ಲಿ ಆಟವಾಡಲು ಹೋದ ಮಗು ಕಾಲುಜಾರಿ ತೊಟ್ಟಿಗೆ ಬಿದ್ದಿದೆ.












Click it and Unblock the Notifications