Vande Bharat Express: ಬೆಂಗಳೂರಿನಲ್ಲಿ ಒಂದೇ ದಿನ ಮೂರು ವಂದೇ ಭಾರತ್ ರೈಲುಗಳ ಮೇಲೆ ಕಲ್ಲು ತೂರಾಟ
ಬೆಂಗಳೂರು, ಮಾರ್ಚ್ 04: ನೈಋತ್ಯ ರೈಲ್ವೆ ವಲಯದಲ್ಲಿ ಹಾದು ಹೋಗುತ್ತಿದ್ದ ಮೂರು ವಿಭಿನ್ನ ವಂದೇ ಭಾರತ್ ರೈಲುಗಳ ಮೇಲೆ ಮಾರ್ಚ್ 3ರ ಭಾನುವಾರ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಪ್ರಯಾಣಿಕರಿಗೆ ಯಾವುದೇ ಗಾಯಗಳಾಗದಿದ್ದರೂ ರೈಲಿನ ಕಿಟಕಿ ಗಾಜುಗಳಿಗೆ ಹಾನಿಯಾಗಿದೆ.
"ದುರದೃಷ್ಟವಶಾತ್, ಒಂದೇ ದಿನದಲ್ಲಿ ಮೂರು ಘಟನೆಗಳು ನಡೆದಿವೆ. ನಮ್ಮ ಪೊಲೀಸರು ವಿವಿಧ ಸ್ಥಳಗಳಿಗೆ ಧಾವಿಸಿದ್ದಾರೆ ಮತ್ತು ತನಿಖೆ ನಡೆಸುತ್ತಿದ್ದಾರೆ. ಈವರೆಗೆ ಯಾವುದೇ ಬಂಧನವಾಗಿಲ್ಲ" ಎಂದು ಇನ್‌ಸ್ಪೆಕ್ಟರ್ ಜನರಲ್ ಕಮ್ ಪ್ರಿನ್ಸಿಪಲ್ ಚೀಫ್ ಸೆಕ್ಯುರಿಟಿ ಕಮಿಷನರ್, ರೈಲ್ವೇ ಪ್ರೊಟೆಕ್ಷನ್ ಫೋರ್ಸ್, ಎಸ್‌ಡಬ್ಲ್ಯೂಆರ್, ರಾಮ ಶಂಕರ್ ಪ್ರಸಾದ್ ಸಿಂಗ್ ಹೇಳಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಉಲ್ಲೇಖಿಸಿದೆ.

ಕಲ್ಲು ತೂರಾಟ ವರದಿಯಾಗಿರುವ ಮೂರು ಘಟನೆಗಳಲ್ಲಿ ಎರಡು ಬೆಂಗಳೂರು ರೈಲ್ವೆ ವಿಭಾಗದ ವ್ಯಾಪ್ತಿಯಲ್ಲಿ ಸಂಭವಿಸಿವೆ. ಮಾರ್ಚ್ 3ರ ಬೆಳಗ್ಗೆ 6.15ಕ್ಕೆ ಕೆಎಸ್‌ಆರ್ ಬೆಂಗಳೂರು - ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 20661) ಬೆಂಗಳೂರು ರೈಲ್ವೆ ವಿಭಾಗದ ಚಿಕ್ಕಬಾಣಾವರ ರೈಲು ನಿಲ್ದಾಣವನ್ನು ದಾಟಿದಾಗ ಮೊದಲ ಘಟನೆ ನಡೆದಿದೆ. ಕೋಚ್ C6ರ 40, 41 ಮತ್ತು 42 ಸೀಟ್‌ಗಳಲ್ಲಿರುವ ಕಿಟಕಿಯ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ ಎಂದು ರಾಮ ಶಂಕರ್ ಪ್ರಸಾದ್ ಸಿಂಗ್ ಹೇಳಿದ್ದಾರೆ.
ಎರಡನೇ ಘಟನೆ ಮಧ್ಯಾಹ್ನ 3.20 ರ ಸುಮಾರಿಗೆ ಧಾರವಾಡ - ಕೆಎಸ್‌ಆರ್ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 20662) ಹಿಂತಿರುಗುವ ದಿಕ್ಕಿನಲ್ಲಿ ಪ್ರಯಾಣಿಸುತ್ತಿದ್ದಾಗ ಸಂಭವಿಸಿದೆ. ಮೈಸೂರು ವಿಭಾಗದ ಹಾವೇರಿ ಮತ್ತು ಹರಿಹರ ರೈಲು ನಿಲ್ದಾಣದ ಸಿ5 ಕೋಚ್‌ನ ಕಿಟಕಿ ಗಾಜುಗಳ ಮೇಲೆ ಕಲ್ಲು ತೂರಾಟ ನಡೆದಿದೆ.
ಮೂರನೇ ಘಟನೆ ಮೈಸೂರು-ಎಂಜಿಆರ್ ಸೆಂಟ್ರಲ್ ವಂದೇ ಭಾರತ್ ರೈಲಿನಲ್ಲಿ ಬೆಂಗಳೂರು ವಿಭಾಗದ ಕುಪ್ಪಂ ನಿಲ್ದಾಣಕ್ಕೆ 200 ಮೀಟರ್ ದೂರದಲ್ಲಿರುವಾಗ ಸಂಜೆ 4.30 ಕ್ಕೆ ಸಂಭವಿಸಿದೆ. ಇಂಜಿನ್‌ನ ಬಲಭಾಗದಿಂದ, 40, 41 ಮತ್ತು 42 ಆಸನಗಳಿರುವ C4 ಕೋಚ್ ಮೇಲೆ ಕಲ್ಲು ಎಸೆದಿದ್ದು, ಗಾಜಿನ ಫಲಕಗಳು ಹಾನಿಯಾಗಿವೆ.

ಸೆಕ್ಷನ್ 147 (ರೈಲ್ವೆ ಹಳಿಯಲ್ಲಿ ಅತಿಕ್ರಮಣ) ಮತ್ತು ಸೆಕ್ಷನ್ 153 (ಉದ್ದೇಶಪೂರ್ವಕ ಕ್ರಿಯೆ ಅಥವಾ ಲೋಪದಿಂದ ರೈಲ್ವೆಯಲ್ಲಿ ಪ್ರಯಾಣಿಸುವ ವ್ಯಕ್ತಿಗಳ ಸುರಕ್ಷತೆಗೆ ಅಪಾಯವನ್ನುಂಟುಮಾಡುವುದು) ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ರಾಮ ಶಂಕರ್ ಪ್ರಸಾದ್ ಸಿಂಗ್ ಹೇಳಿದ್ದಾರೆ.
ವಂದೇ ಭಾರತ್ ರೈಲುಗಳ ಮೇಲೆ ಕಲ್ಲು ತೂರಾಟ ಪ್ರಕರಣಗಳಲ್ಲಿ ಕಳೆದ ವರ್ಷ ಜುಲೈನಿಂದ ಡಿಸೆಂಬರ್ ವರೆಗೆ 45 ಮಂದಿಯನ್ನು ಬಂಧಿಸಲಾಗಿದೆ ಎಂದು ರಾಮ ಶಂಕರ್ ಪ್ರಸಾದ್ ಸಿಂಗ್ ಹೇಳಿದರು. ಇವರಲ್ಲಿ ಸುಮಾರು 70 ಪ್ರತಿಶತ ಮಂದಿ ಅಪ್ರಾಪ್ತ ವಯಸ್ಕರು. ಮೋಜಿಗಾಗಿ ಇಂತಹ ಅಪರಾಧ ಮಾಡುತ್ತಾರೆ ಎಂದಿದ್ದಾರೆ.
"ನಾವು ಅವರನ್ನು ಬಾಲಾಪರಾಧಿ ನ್ಯಾಯಾಲಯಕ್ಕೆ ಹಸ್ತಾಂತರಿಸುತ್ತೇವೆ ಮತ್ತು ಅವರು ತೆಗೆದುಕೊಳ್ಳಬೇಕಾದ ಕ್ರಮವನ್ನು ನಿರ್ಧರಿಸುತ್ತಾರೆ. ವಯಸ್ಕರ ವಿಷಯದಲ್ಲಿ, ನಾವು ಅವರನ್ನು ರೈಲ್ವೆ ಕಾಯಿದೆಯಡಿಯಲ್ಲಿ ಬಂಧಿಸುತ್ತವೆ. ಆರ್‌ಪಿಎಫ್ ತೆಗೆದುಕೊಂಡ ಕಟ್ಟುನಿಟ್ಟಿನ ಕ್ರಮದ ನಂತರ, ಘಟನೆಗಳು ತೀವ್ರವಾಗಿ ಕಡಿಮೆಯಾಗಿದೆ. ಆದರೆ ಭಾನುವಾರ ಇದ್ದಕ್ಕಿದ್ದಂತೆ ಒಂದೇ ದಿನ ಮೂರು ರೈಲುಗಳ ಮೇಲೆ ಕಲ್ಲು ತೂರಾಟ ನಡೆದಿದೆ" ಎಂದು ತಿಳಿಸಿದ್ದಾರೆ.












Click it and Unblock the Notifications