2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ.
2nd PUC: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕರ್ನಾಟಕದ ವಿದ್ಯಾರ್ಥಿಗಳು ಹೊಸ ದಾಖಲೆ ಬರೆದಿದ್ದಾರೆ. ಇನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಪಾಲಿಕೆಗಳಲ್ಲಿನ ಪಿಯುಸಿ ಕಾಲೇಜಿನಲ್ಲೂ ಶೇ 74.16 ರಷ್ಟು ಫಲಿತಾಂಶ ಬಂದಿದೆ. ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. ಪ್ರೋತ್ಸಾಹ ಧನ ನೀಡಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಂದಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ 5 ನಗರ ಪಾಲಿಕೆಗಳಲ್ಲಿ ಬರುವ ಶಿಕ್ಷಣ ಇಲಾಖೆಯಲ್ಲಿ ಒಟ್ಟು 19 ಪದವಿ ಪೂರ್ವ ಕಾಲೇಜುಗಳಿದ್ದು, 2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಒಟ್ಟು 2,593 ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಪೈಕಿ 1,923 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 74.16 ರಷ್ಟು ಫಲಿತಾಂಶ ಬಂದಿದೆ. ಅದರಂತೆ, ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 2,593 ವಿದ್ಯಾರ್ಥಿಗಳ ಪೈಕಿ 260 ವಿದ್ಯಾರ್ಥಿಗಳು ಶೇ. 85 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ನಗರ ಪಾಲಿಕೆಗಳ ಪದವಿ ಪೂರ್ವ ಕಾಲೇಜುಗಳಲ್ಲಿ ಪಶ್ಚಿಮ ನಗರ ಪಾಲಿಕೆಯ ಭೈರವೇಶ್ವರನಗರ ಪದವಿ ಪೂರ್ವ ಕಾಲೇಜು ಶೇ. 88.82 ಫಲಿತಾಂಶದೊಂದಿಗೆ ಅಗ್ರಸ್ಥಾನ ಪಡೆದಿದೆ. ಕೇಂದ್ರ ನಗರ ಪಾಲಿಕೆಯ ಕಸ್ತೂರಿಬಾನಗರ ಪದವಿ ಪೂರ್ವ ಕಾಲೇಜು ಶೇ. 86.45 ಫಲಿತಾಂಶದೊಂದಿಗೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದು, ಪಶ್ಚಿಮ ನಗರ ಪಾಲಿಕೆಯ ಶ್ರೀರಾಂಪುರ ಪದವಿ ಪೂರ್ವ ಕಾಲೇಜು ಶೇ. 81.99 ಫಲಿತಾಂಶದೊಂದಿಗೆ ತೃತೀಯ ಸ್ಥಾನ ಪಡೆದಿದೆ.
ವೈಯಕ್ತಿಕ ಸಾಧನೆಯಲ್ಲಿ, ಉತ್ತರ ನಗರ ಪಾಲಿಕೆಯ ಕ್ಲೀವ್ ಲ್ಯಾಂಡ್ ಟೌನ್ ಪದವಿ ಪೂರ್ವ ಕಾಲೇಜಿನ ಫಿರ್ದೋಸ್ ಹಾಗೂ ಶಾಜೀದ್ ಅವರು ವಾಣಿಜ್ಯ ವಿಭಾಗದಲ್ಲಿ 600 ಕ್ಕೆ 582 ಅಂಕಗಳನ್ನು (97.00%) ಗಳಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಅದೇ ಕಾಲೇಜಿನ ಅರ್ಫಿನ್ ಖಾನಂ ಅವರು ವಿಜ್ಞಾನ ವಿಭಾಗದಲ್ಲಿ 600 ಕ್ಕೆ 578 ಅಂಕಗಳನ್ನು (96.33%) ಪಡೆದು ಮೆಚ್ಚುಗೆ ಪಡೆದಿದ್ದಾರೆ. ಪಶ್ಚಿಮ ನಗರ ಪಾಲಿಕೆಯ ಭೈರವೇಶ್ವರನಗರ ಪದವಿ ಪೂರ್ವ ಕಾಲೇಜಿನ ಮುಸ್ರತ್ ಅವರು ಕಲಾ ವಿಭಾಗದಲ್ಲಿ 600 ಕ್ಕೆ ಲ್ಲಿ 574 ಅಂಕಗಳನ್ನು (95.66%) ಗಳಿಸಿ ಸಾಧನೆ ಮಾಡಿದ್ದಾರೆ.
ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಎಲ್ಲಾ 260 ವಿದ್ಯಾರ್ಥಿಗಳಿಗೆ ನಗರಪಾಲಿಕೆಗಳ ವತಿಯಿಂದ ತಲಾ 35,000 ರೂ. ಪ್ರೋತ್ಸಾಹಧನ ನೀಡಿ ಗೌರವಿಸಲಾಗುವುದು ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
2nd PUC: ಮುಖ್ಯ ಆಯುಕ್ತರಿಂದ ವಿದ್ಯಾರ್ಥಿಗಳಿಗೆ ಅಭಿನಂದನೆ
ಜಿಬಿಎ ಪದವಿ ಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೂ ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಭಿನಂದನೆಗಳನ್ನು ತಿಳಿಸಿದ್ದಾರೆ.












Click it and Unblock the Notifications