ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ; 20 ಸಾವಿರ ಮರಕ್ಕೆ ಕೊಡಲಿ
ಬೆಂಗಳೂರು, ನವೆಂಬರ್ 09 : ಬೆಂಗಳೂರು-ಚೆನ್ನೈ ನಡುವಿನ ಎಕ್ಸ್‌ಪ್ರೆಸ್ ವೇ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಟೆಂಡರ್ ಕರೆದಿದೆ. ದಕ್ಷಿಣ ಭಾರತದ ಮೊದಲ ಹಸಿರು ಎಕ್ಸ್‌ಪ್ರೆಸ್ ವೇ ಹೆದ್ದಾರಿಗೆ 20 ಸಾವಿರ ಮರಗಳಿಗೆ ಕೊಡಲಿ ಬೀಳಲಿದೆ.
ಎನ್‌ಎಚ್‌ಎಎಐ ಯೋಜನೆಯನ್ನು ಮೂರು ಭಾಗವಾಗಿ ವಿಭಾಗ ಮಾಡಿದೆ. ಮೊದಲ ಹಂತದ ಕಾಮಗಾರಿ ಕೈಗೊಳ್ಳಲು ಈಗ ಟೆಂಡರ್ ಕರೆಯಲಾಗಿದೆ. ಇದಕ್ಕಾಗಿ ಕರ್ನಾಟಕ 20,748 ಮರಗಳನ್ನು ಕಳೆದುಕೊಳ್ಳಲಿದೆ.
ಮೊದಲ ಹಂತದ ಯೋಜನೆ ಬೆಂಗಳೂರು ಹೊರವಲಯದಿಂದ ಆರಂಭಗೊಂಡು ಕೋಲಾರ ಜಿಲ್ಲೆಯ ಮುಳಬಾಗಿಲು ಬೇತಮಂಗಲ ಬಳಿ ಕೊನೆಯಾಗಲಿದೆ. ಕೋಲಾರ ಭಾಗದಲ್ಲಿ ಶೇ 85ರಷ್ಟು ಮರಗಳನ್ನು ಕಡಿಯಬೇಕಾಗುತ್ತದೆ.

ಇವುಗಳಲ್ಲಿ ನೀಲಗಿರಿ, ಮಾವು, ತೆಂಗು, ಸಾಗುವಾನಿ, ಪೇರಳೆ, ಹುಣಸೆ ಮರಗಳು ಸೇರಿವೆ. ನೀಲಗಿರಿ ಮರಗಳ ಕಡಿತದಿಂದ ಹಾನಿಯಾಗುವುದಿಲ್ಲ. ಆದರೆ, ಉಳಿದ ಮರಗಳನ್ನು ಕಡಿಯುವುದರಿಂದ ರೈತರ ಬದುಕಿನ ಮೇಲೆಯೂ ಪರಿಣಾಮ ಉಂಟಾಗಲಿದೆ.
ಮೊದಲ ಹಂತದ ಮಾರ್ಗಕ್ಕಾಗಿ 1890 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತದೆ. ಒಟ್ಟು 72 ಗ್ರಾಮಗಳ ಮೂಲಕ ರಸ್ತೆ ಹಾದು ಹೋಗಲಿದೆ. ಕೇಂದ್ರ ಪರಿಸರ ಅರಣ್ಯ ಮತ್ತು ಹವಾಮಾನ ಸಚಿವಾಲಯ ಈಗಾಗಲೇ ಯೋಜನೆಗೆ ಅನುಮತಿಯನ್ನು ನೀಡಿದೆ.
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಕರ್ನಾಟಕ-ಆಂಧ್ರಪ್ರದೇಶ ಮೂಲಕ ಸಾಗಿ ತಮಿಳುನಾಡು ತಲುಪಲಿದೆ. ಈ ಯೋಜನೆ ಪೂರ್ಣಗೊಂಡರೆ ಬೆಂಗಳೂರು-ಚೆನ್ನೈ ನಡುವಿನ ದೂರ 250 ಕಿ. ಮೀ.ಗೆ ಕಡಿಮೆಯಾಗಲಿದೆ.
1990ರಲ್ಲಿ ಕೇಂದ್ರ ಹಣಕಾಸು ಸಚಿವರಾಗಿದ್ದ ಪಿ. ಚಿದಂಬರಂ ಬೆಂಗಳೂರು-ಚೆನ್ನೈ ನಡುವೆ ಎಕ್ಸ್‌ಪ್ರೆಸ್ ವೇ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದ್ದರು. ಕೇಂದ್ರ ಸರ್ಕಾರ ಈಗ ಯೋಜನೆಗೆ ಚುರುಕು ನೀಡಿದೆ.












Click it and Unblock the Notifications