ಕೇಂದ್ರ ಬಜೆಟ್ ಕುರಿತು ಸಂಸದ ತೇಜಸ್ವಿ ಸೂರ್ಯ ಮೆಚ್ಚುಗೆ ಮಾತು
ಬೆಂಗಳೂರು, ಫೆಬ್ರವರಿ 19: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2022-23ನೇ ಸಾಲಿನ ಕೇಂದ್ರ ಬಜೆಟ್ ಯಶಸ್ವಿ ಹಾಗೂ ದೂರಗಾಮಿಯಾಗಿದೆ ಎಂದು ಸಂಸದ ಹಾಗೂ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಬೆಂಗಳೂರು ಜಯನಗರದ 5ನೇ ಹಂತದ 11ನೇ ಮುಖ್ಯ ರಸ್ತೆಯ ಸಂಸದರ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೃಷಿಯಿಂದ ವಿಜ್ಞಾನ, ನಗರೀಕರಣದಿಂದ ರೈಲ್ವೆ ಆಧುನೀಕರಣದವರೆಗೆ ಅನುದಾನ ಕೊಡಲಾಗಿದೆ ಎಂದರು. ಈ ವೇಳೆ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಡಾ.ಎನ್.ಆರ್.ರಮೇಶ್, ಬೆಂಗಳೂರು ದಕ್ಷಿಣ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಅಶ್ವತ್ಥನಾರಾಯಣ, ಬೆಂಗಳೂರು ದಕ್ಷಿಣ ಜಿಲ್ಲಾ ವಕ್ತಾರರಾದ ರಾಘವೇಂದ್ರ ರಾವ್ ಅವರು ಉಪಸ್ಥಿತರಿದ್ದರು.
Budget 2022; ಬೆಂಗಳೂರು ಸಬ್ ಅರ್ಬನ್ ರೈಲಿಗೆ 450 ಕೋಟಿ
ಸಣ್ಣ ವ್ಯಾಪಾರಿಗಳಿಗೆ ಪ್ರೋತ್ಸಾಹ, ಯುವಕರಿಗೂ ಉದ್ಯೋಗಾವಕಾಶ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳಿಗೆ ಉತ್ತೇಜನ, ಸರ್ವಸ್ಪರ್ಶಿ ಸರ್ವವ್ಯಾಪಿ ಬಜೆಟ್ ಎಂದಿರುವ ತೇಜಸ್ವಿ ಸೂರ್ಯ, ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಕೃತಜ್ಞತೆ ಸಲ್ಲಿಸಿದರು.
ಒಂದು ವರ್ಷದಲ್ಲಿ 40 ಜನೌಷಧಿ ಕೇಂದ್ರ:
ಬೆಂಗಳೂರಿನಲ್ಲಿ ಕಳೆದೊಂದು ವರ್ಷದಲ್ಲಿ 40 ಹೊಸ ಜನೌಷಧಿ ಕೇಂದ್ರಗಳನ್ನು ತೆರೆಯಲಾಗಿದೆ. ಬೆಂಗಳೂರು ದಕ್ಷಿಣದಲ್ಲಿ ಈಗ 69 ಕೇಂದ್ರಗಳಿದ್ದು, ಶೀಘ್ರವೇ ಅದು 75ಕ್ಕೇರಲಿದೆ. ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಲ್ಲಿ ಶೇ.50 ರಿಂದ ಶೇ.70ರಷ್ಟು ಕಡಿಮೆ ದರದಲ್ಲಿ ಔಷಧಿ ಲಭ್ಯವಿರುತ್ತದೆ. ದೇಶದಲ್ಲಿ 8,600 ಜನೌಷಧಿ ಕೇಂದ್ರಗಳಿವೆ ಎಂದು ಸಂಸದರು ಮಾಹಿತಿ ನೀಡಿದರು.
ಭವಿಷ್ಯ ನಿಧಿ ಸಂಸ್ಥೆಗೆ 14 ಲಕ್ಷ ಚಂದಾದಾರರು:
ಕಳೆದೊಂದು ವರ್ಷದಲ್ಲಿ ಇಪಿಎಫ್‍ಒದಲ್ಲಿ (ಭವಿಷ್ಯ ನಿಧಿ ಸಂಸ್ಥೆ) 14 ಲಕ್ಷ ಹೊಸ ಚಂದಾದಾರರು ಸೇರಿದ್ದಾರೆ. ಈ ಪೈಕಿ 18ರಿಂದ 25 ವರ್ಷ ವಯೋಮಾನದವರು ಶೇ 50ರಷ್ಟಿದ್ದಾರೆ. ಕರ್ನಾಟಕದಲ್ಲಿ 1.60 ಲಕ್ಷ ಚಂದಾದಾರರು ಇಪಿಎಫ್‍ಒಗೆ ಸೇರಿದ್ದಾರೆ ಎಂದು ವಿವರಿಸಿದರು. ಕರ್ನಾಟಕದಲ್ಲಿ ಮೂಲಭೂತ ಸೌಕರ್ಯಗಳಿಗೆ 1 ಲಕ್ಷ ಕೋಟಿ ರೂಪಾಯಿಯನ್ನು ಶೂನ್ಯ ಬಡ್ಡಿದರದ ಸಾಲ ಪಡೆಯಬಹುದು. ದೇಶದ ಆರ್ಥಿಕತೆ ವೇಗವಾಗಿ ಮುಂದುವರಿಯಲು ಪೂರಕವಾಗಿದ್ದು, ಹಣದುಬ್ಬರ ಹತೋಟಿಯಲ್ಲಿದೆ. ಯುವಕರಿಗೆ ಉದ್ಯೋಗಾವಕಾಶ ಹೆಚ್ಚಾಗಿದೆ. 25 ವರ್ಷಗಳ ದೂರದೃಷ್ಟಿ ಹೊಂದಿದ ಕೇಂದ್ರ ಬಜೆಟ್ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಸ್ಟಾರ್ಟಪ್ ಕ್ಯಾಪಿಟಲ್ ಆಗಿರುವ ಬೆಂಗಳೂರು:
ನರೇಂದ್ರ ಮೋದಿಯವರ ಆಗಮನದ ಬಳಿಕ ದೇಶ ಸ್ಟಾರ್ಟಪ್ ಗಳು ಹೆಚ್ಚಾಗಿದ್ದು, ದೇಶದಲ್ಲಿ 61 ಸಾವಿರ ಸ್ಟಾರ್ಟ್ ಅಪ್ ಆರಂಭವಾಗಿವೆ. ಬೆಂಗಳೂರು ಸ್ಟಾರ್ಟಪ್ ಕ್ಯಾಪಿಟಲ್ ಆಗಿದೆ. 24 ಸಾವಿರ ಸ್ಟಾರ್ಟಪ್‍ಗಳು ಬೆಂಗಳೂರಿನಲ್ಲಿವೆ. 85 ಕಂಪೆನಿಗಳು ಯುನಿಕಾರ್ನ್‍ಗಳಾಗಿವೆ. ಇವು ಮಲ್ಟಿನ್ಯಾಷನಲ್ ಕಂಪೆನಿ ಆಗಿ ಬೆಳೆಯುವ ನಿರೀಕ್ಷೆಯಿದೆ ಎಂದಿದ್ದಾರೆ. ಕೊವಿಡ್-19 ವೇಳೆ 80 ಕೋಟಿ ಜನರಿಗೆ ಉಚಿತ ಪಡಿತರ ನೀಡಿದ್ದಾರೆ. ಜನ್‍ಧನ್ ಯೋಜನೆಯಡಿ 50 ಕೋಟಿ ಹೊಸ ಬ್ಯಾಂಕ್ ಖಾತೆಗಳು ಆರಂಭವಾಗಿದ್ದು, ಬೆಂಗಳೂರಿನಲ್ಲಿ 9.50 ಲಕ್ಷ ಜನರು ಖಾತೆ ತೆರೆದಿದ್ದಾರೆ. ವಿಮಾ ಯೋಜನೆ, ಮುದ್ರಾ ಯೋಜನೆಯಡಿ ಹೊಸ ಖಾತೆಗಳು ಆರಂಭಗೊಂಡ ಕುರಿತು ಮಾಹಿತಿ ನೀಡಿದರು.
ಅಟಲ್ ಪಿಂಚಣಿ ಯೋಜನೆ:
ಅಸಂಘಟಿತ ಕಾರ್ಮಿಕರು, ಕೂಲಿ ಕಾರ್ಮಿಕರಿಗಾಗಿ ಅಟಲ್ ಪಿಂಚಣಿ ಯೋಜನೆ ಜಾರಿಯಲ್ಲಿದೆ. ಕಳೆದ ಸಾಲಿನಲ್ಲಿ ಬೆಂಗಳೂರಿನ 80 ಸಾವಿರ ಜನರು ನೋಂದಣಿ ಮಾಡಿಕೊಂಡಿದ್ದಾರೆ. ಉಜ್ವಲ ಯೋಜನೆಯಡಿ 8 ಸಾವಿರ ಜನರು ಎಲ್‍ಪಿಜಿ ಸಿಲಿಂಡರ್ ಸಂಪರ್ಕ ಪಡೆದುಕೊಂಡಿದ್ದಾರೆ. ಬೆಂಗಳೂರಿನಲ್ಲಿ ಎಲ್‍ಪಿಜಿ ಸಬ್ಸಿಡಿ ಬಿಟ್ಟು ಕೊಡಲು 8 ಲಕ್ಷ ಜನರು ಮುಂದಾಗಿದ್ದಾರೆ. ಹಿಂದಿನ ದೇಶದ ಆಡಳಿತಕ್ಕೆ ಹೋಲಿಸಿದರೆ ಬೆಂಗಳೂರು, ಕರ್ನಾಟಕ, ದೇಶದ ಆರ್ಥಿಕತೆಯ ದೃಷ್ಟಿಯಿಂದ ನೋಡಿದರೆ ಮೋದಿ ಆಡಳಿತಾವಧಿಯಲ್ಲಿ ಅಭೂತಪೂರ್ವ ಪ್ರಗತಿ ಕಾಣಿಸುತ್ತಿದೆ ಎಂದರು.
Recommended Video
ಪ್ರಧಾನಮಂತ್ರಿ ಮೋದಿ ಆಡಳಿತದಲ್ಲಿ ಇಂದು ಡಿಜಿಟಲ್ ಪೇಮೆಂಟ್ ನೆಟ್ ವರ್ಕ್ ವ್ಯಾಪಕವಾಗಿ ಬಳಕೆಯಾಗುತ್ತಿದೆ. ವಿಮಾನ, ರೈಲ್ವೆ ಸಂಪರ್ಕವೂ ಹೆಚ್ಚಾಗಿದ್ದು, ಇದು ಅಭಿವೃದ್ಧಿಯ ಸಂಕೇತವಾಗಿದೆ. 2 ಲಕ್ಷ ಅಂಚೆ ಕಚೇರಿಗಳನ್ನು ಬ್ಯಾಂಕ್ ಶಾಖೆಯನ್ನಾಗಿ ಪರಿವರ್ತಿಸಲಾಗುತ್ತಿದೆ. 80 ಲಕ್ಷ ಮನೆ ನಿರ್ಮಾಣ ಕಾರ್ಯ ನಡೆದಿದೆ. ಬೆಂಗಳೂರಿನ ಮೆಟ್ರೊ ಯೋಜನೆ ವಿಸ್ತರಣೆ ಕೆಲಸ ವೇಗವಾಗಿ ನಡೆದಿದೆ. ಸಬ್-ಅರ್ಬನ್ ಯೋಜನೆಯೂ ತ್ವರಿತವಾಗಿ ಮಂಜೂರಾಗಿದೆ. ಗೇಲ್ ವತಿಯಿಂದ ಮನೆಮನೆಗೆ ಗ್ಯಾಸ್ ಸಂಪರ್ಕ ಕೊಡಲಾಗುತ್ತಿದೆ ಎಂದು ವಿವರಿಸಿದರು.