ಬೆಂಗಳೂರಿಗರೇ ಎಚ್ಚರ, ಎಲ್ಲೆಡೆಯೂ ಹಬ್ಬುತ್ತಿದೆ ಟೈಫಾಯಿಡ್ ಜ್ವರ
Recommended Video

ಬೆಂಗಳೂರು, ಆಗಸ್ಟ್ 30: ಕಳೆದ ಕೆಲ ವಾರ ಕರ್ನಾಟಕ ರಾಜ್ಯದಾದ್ಯಂತ ಒಳ್ಳೆ ಮಳೆಯಾಗಿದೆ. ನೀರಿನ ಸಮಸ್ಯೆ ಸ್ವಲ್ಪ ಮಟ್ಟಿಗೆ ಕಡಿಮೆ ಆದಂತಿದೆ ಎಂದು ನಿಟ್ಟುಸಿರು ಬಿಡುವಂತಾಗಿದೆ. ಆದರೆ ಇದರ ಜತೆಗೆ ಬೆಂಗಳೂರಿನಲ್ಲಿ ಟೈಫಾಯಿಡ್ ಜ್ವರದ ಪ್ರಕರಣಗಳು ಹೆಚ್ಚಾಗಿವೆ.
ಕಳೆದ ಒಂದು ವಾರದಲ್ಲೇ ಬಿಬಿಎಂಪಿ ಇನ್ನೂರು ಟೈಫಾಯಿಡ್ ಪ್ರಕರಣಗಳನ್ನು ದಾಖಲಿಸಿದೆ. ಆದರೆ ಬೆಂಗಳೂರಿನ ಅಧಿಕಾರಿಗಳು ಇಂಥ ಅನಾರೋಗ್ಯದ ಸುದ್ದಿಯನ್ನು ನಿರಾಕರಿಸುತ್ತಾರೆ.
ಟೈಫಾಯಿಡ್ ಜ್ವರ ತುಂಬ ಹೆಚ್ಚಾಗಿದೆ ಅನ್ನೋದನ್ನು ನಾವು ಒಪ್ಪಲ್ಲ. ಆದರೆ ಕಳೆದ ಒಂದು ವಾರದಿಂದ ಮಾಮೂಲಿಗಿಂತ ಹೆಚ್ಚಿನ ಮಂದಿ ಜ್ವರದ ಕಾರಣದಿಂದ ಬರುತ್ತಿದ್ದಾರೆ ಎಂದು ಬಿಬಿಎಂಪಿಯ ಮುಖ್ಯ ವೈದ್ಯಾಧಿಕಾರಿ ಎಂ.ಎನ್.ಲೋಕೇಶ್ ತಿಳಿಸಿದ್ದಾರೆ.

ಆದರೆ, ಖಾಸಗಿ ವೈದ್ಯರ ಅಭಿಪ್ರಾಯವೇ ಬೇರೆ ಆಗಿದೆ. "ಈ ವರ್ಷ ಟೈಫಾಯಿಡ್ ಪ್ರಕರಣಗಳು ವಿಪರೀತ ಹೆಚ್ಚಾಗಿ ಬಂದಿವೆ. ಅದರಲ್ಲೂ ಶ್ರಮಿಕ ವರ್ಗ ವಾಸಿಸುವ ಪ್ರದೇಶದಲ್ಲಿ ಹೆಚ್ಚಾಗಿದೆ. ಪ್ರತಿ ದಿನ ಹತ್ತು ಪ್ರಕರಣಗಳು ಬರುತ್ತಿವೆ. ಟೈಪಾಯಿಡ್ ಬ್ಯಾಕ್ಟಿರೀಯಾದಿಂದ ಬರುವ ಜ್ವರ. ನೀರು ಹಾಗೂ ಆಹಾರದ ಮೇಲೆ ಜಮೆಯಾಗುವ ಬ್ಯಾಕ್ಟೀರಿಯಾ ಮನುಷ್ಯರ ಮೂಲಕ ಹಬ್ಬುತ್ತದೆ" ಎನ್ನುತ್ತಾರೆ ವೈದ್ಯರು.
ಚರಂಡಿ ನೀರಿನ ಜತೆಗೆ ಕುಡಿಯುವ ನೀರು ಬೆರೆತ ಕಾರಣಕ್ಕೆ ಹೀಗೆ ಆಗಿದೆ ಎಂಬ ಸಂಗತಿಯನ್ನು ಬಿಬಿಎಂಪಿ ಅಧಿಕಾರಿಗಳೇ ಒಪ್ಪಿರುವುದಾಗಿ ವರದಿಯಾಗಿದೆ.
"ನಮ್ಮ ಆರೋಗ್ಯಾಧಿಕಾರಿಗಳನ್ನು ಕಳುಹಿಸಿ ಜಾಗೃತಿ ಮೂಡಿಸುತ್ತಿದ್ದೇವೆ. ಬಿಸಿ ನೀರನ್ನೇ ಕುಡಿಯುವಂತೆ ಸಲಹೆ ನೀಡುತ್ತಿದ್ದೇವೆ. ಅದರಲ್ಲೂ ಅಪಾರ್ಟ್ ಮೆಂಟ್ ಗಳಲ್ಲಿ ವಾಸವಿರುವವರಿಗೆ ಎಲ್ಲಿಂದ ಕುಡಿಯುವ ನೀರು ಬರುತ್ತಿದೆ ಎಂಬುದು ಕೂಡ ಗೊತ್ತಿರುವುದಿಲ್ಲ. ಎಲ್ಲಿ ಜ್ವರದ ಪ್ರಕರಣ ಹೆಚ್ಚಾಗಿ ವರದಿ ಆಗುತ್ತಿದೆಯೋ ಅಂಥ ಪ್ರದೇಶಗಳ ಮೇಲೆ ನಿಗಾ ಇಟ್ಟಿದ್ದೇವೆ" ಎಂದು ಆರೋಗ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಳೆ ಬರುತ್ತಿರುವುದರಿಂದಲೂ ಸಾಮಾನ್ಯ ನೆಗಡಿಯಂಥದ್ದರ ಜತೆಗೆ ಡೆಂಗ್ಯೂ ಮತ್ತು ಹಂದಿ ಜ್ವರ ಕೂಡ ಕಾಣಿಸಿಕೊಳ್ಳುತ್ತಿದೆ.












Click it and Unblock the Notifications