Bengaluru Bmtc: ಬಿಎಂಟಿಸಿ ಸೇವೆಗೆ ಜನ ಫಿದಾ, ನಿತ್ಯ ಬಸ್‌ನಲ್ಲಿ ಸಂಚರಿಸುತ್ತಾರೆ ಇಷ್ಟು ಲಕ್ಷ ಜನ!
ಬೆಂಗಳೂರಿನ ಸಾರಿಗೆ ಜೀವನಾಡಿಗಳಲ್ಲಿ ಬಿಎಂಟಿಸಿ ಮೊದಲ ಸ್ಥಾನದಲ್ಲಿ ಇದೆ. ಬೆಂಗಳೂರಿನಲ್ಲಿ ಜನ ಇತ್ತೀಚಿನ ವರ್ಷಗಳಲ್ಲಿ ಮೆಟ್ರೋ ಸೇವೆ ಬಳಸುತ್ತಿದ್ದಾರೆ. ಮೆಟ್ರೋ ಸೇವೆಗೂ ಮೊದಲು ಹಾಗೂ ಮೆಟ್ರೋ ಸಂಚಾರ ಪ್ರಾರಂಭವಾದ ಮೇಲೂ ಬೆಂಗಳೂರಿನಲ್ಲಿ ಬಿಎಂಟಿಸಿಯಲ್ಲಿ ಪ್ರಯಾಣಿಸುವವರ ಸಂಖ್ಯೆಯಲ್ಲಿ ಮಹತ್ವದ ಬದಲಾವಣೆಗಳು ಆಗಿಲ್ಲ.
ಶಾಲಾ - ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ದಿನಗೂಲಿ ನೌಕರರು ಸೇರಿದಂತೆ ಹಲವರ ಫಸ್ಟ್ ಹಾಗೂ ಬೆಸ್ಟ್ ಆಯ್ಕೆ ಬಿಎಂಟಿಸಿಯೇ ಆಗಿದೆ. ಹಾಗಾದರೆ ಬೆಂಗಳೂರಿನಲ್ಲಿ ನಿತ್ಯ ಎಷ್ಟು ಬಿಎಂಟಿಸಿ ಬಸ್‌ಗಳು ಸಂಚರಿಸುತ್ತವೆ. ಈ ಬಸ್‌ಗಳ ಸಂಖ್ಯೆ ಸಾಕೇ.. ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಸೇವೆ ಯಾವ ರೀತಿ ಇದೆ ಎನ್ನುವ ಕಂಪ್ಲೀಟ್ ಮಾಹಿತಿ ಇಲ್ಲಿದೆ...

ಬಿಎಂಟಿಸಿ ಬೆಂಗಳೂರಿನ ಸಮೂಹ ಸಾರಿಗೆ ಜೀವನಾಡಿ ದಿನನಿತ್ಯ ಬಿಎಂಟಿಸಿ ಬಸ್‌ನಲ್ಲಿ ಅಂದಾಜು 20 ಲಕ್ಷಕ್ಕೂ ಹೆಚ್ಚು ಜನ ಪ್ರಯಾಣ ಮಾಡುತ್ತಾರೆ. ಬೆಂಗಳೂರಿನಲ್ಲಿ ಹಲವರಿಗೆ ಬಿಎಂಟಿಸಿಯೊಂದಿಗೆ ಭಾವನಾತ್ಮಕ ಸಂಬಂಧವಿದೆ. ಕಾಲೇಜು, ಸ್ಕೂಲ್ ಅಥವಾ ಕೆಲಸ ಅಂತ ವರ್ಷಗಟ್ಟಲೆ ಒಂದೇ ರೂಟ್‌ನಲ್ಲಿ ಓಡಾಡಿದ ಅನುಭವ ಇದೆ. ಬಿಎಂಟಿಸಿಯ ಬಸ್ ಸಂಖ್ಯೆಗಳನ್ನು ನೋಡಿದರೆ ಇಂದಿಗೂ ಪುಳಕಿತರಾಗುವವರು ಇದ್ದಾರೆ. ಬೆಂಗಳೂರಿನ ಜನ ಹಾಗೂ ಬಿಎಂಟಿಸಿಯ ನಡುವೆ ಅಂತಹ ಅವಿನಾಭಾವ ಸಂಬಂಧವಿದೆ. ಈಗ ಬಿಎಂಟಿಸಿಯು ನಗರದಲ್ಲಿ ತನ್ನ ಸೇವೆಯ ಬಗ್ಗೆ ಸಣ್ಣ ವಿಡಿಯೋವೊಂದನ್ನು ಹಂಚಿಕೊಂಡಿದ್ದು ಭಾರೀ ವೈರಲ್ ಆಗಿದೆ.
ಬಿಎಂಟಿಸಿಯೇ ಹೇಳಿರುವ ಪ್ರಕಾರ ಬೆಂಗಳೂರಿನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯಲ್ಲಿ ಒಟ್ಟು 6,750 ಬಿಎಂಟಿಸಿ ಬಸ್‌ಗಳು ಸಂಚರಿಸುತ್ತವೆ / ಕಾರ್ಯನಿರ್ವಹಿಸುತ್ತಿವೆ. ಇನ್ನು 1,269 ಎಲೆಕ್ಟ್ರಿಕ್ ಬಸ್ಸು, 5,481 ಡಿಸೇಲ್ ಬಸ್ಸುಗಳನ್ನು ಬಿಎಂಟಿಸಿ ಹೊಂದಿದೆ. ಇನ್ನು 10,281 ಡ್ರೈವರ್‌ಗಳು ಹಾಗೂ 3,710 ಜನ ಕಂಡಕ್ಟರ್‌ಗಳು ಕೆಲಸ ಮಾಡುತ್ತಿದ್ದಾರೆ. ಸಣ್ಣ ವಿಡಿಯೋದ ಮೂಲಕ ಈ ಮಾಹಿತಿಯನ್ನು ಬಿಎಂಟಿಸಿಯು ಹಂಚಿಕೊಂಡಿದ್ದು ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಬಸ್‌ಗಳ ಸಂಖ್ಯೆ ಹೆಚ್ಚಿಸಿದರೆ ಟ್ರಾಫಿಕ್ ಕಡಿಮೆ ಮಾಡಬಹುದು: ಇನ್ನು ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಸೇವೆ ಅತ್ಯುತ್ತಮವಾಗಿದೆ. ಅದೇ ರೀತಿ ಬಿಎಂಟಿಸಿ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಿದರೆ ಹಾಗೂ ಹೊಸ ಮಾರ್ಗದಲ್ಲಿ ಬಿಎಂಟಿಸಿ ಬಸ್ ಸೇವೆ ಕೊಟ್ಟರೆ ಬೆಂಗಳೂರಿನಲ್ಲಿ ಇನ್ನಷ್ಟು ಟ್ರಾಫಿಕ್ ಜಾಮ್ ಕಡಿಮೆ ಮಾಡುವುದಕ್ಕೆ ಸಾಧ್ಯವಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಶ್ರೀನಿವಾಸ ಅಲವಿಲ್ಲಿ ಅವರು, ಬೆಂಗಳೂರಿನಲ್ಲಿ 1.30 ಕೋಟಿ (1,30,00,000) ಜನ ಇದ್ದಾರೆ. 1,20,00,000 ಹೆಚ್ಚು ವಾಹನಗಳಿವೆ. ಆದರೆ ಕೇವಲ 6,750 ಬಸ್‌ಗಳು, 10,000 ಚಾಲಕರು ಇದ್ದಾರೆ. ಬೆಂಗಳೂರಿನಂತಹ ಸಂಚಾರ ದಟ್ಟಣೆಯ ಪ್ರದೇಶದಲ್ಲಿ ಯಾವುದೇ ಪ್ರತ್ಯೇಕ ಬಸ್ ಕಾರಿಡಾರ್ ಇಲ್ಲದೆಯೂ ಬಿಎಂಟಿಸಿ ಸೇವೆ ಕೊಡುತ್ತಿದೆ. ಪ್ರತಿ ನಿತ್ಯ ಬಿಎಂಟಿಸಿ ಬಸ್‌ಗಳು 42,00,000 ಟ್ರಿಪ್‌ಗಳು ಸಂಚರಿಸುತ್ತಿವೆ.
ಅಂದರೆ ಪ್ರತಿದಿನ ವೈಯಕ್ತಿಕ ವಾಹನದ ಬದಲಿಗೆ ನಗರದ 20 ಲಕ್ಷ ಜನರು ಬಸ್ ಬಳಸುತ್ತಿದ್ದಾರೆ. ಕೆಲವೊಂದು ಸಮಸ್ಯೆಗಳ ನಡುವೆಯೂ ಬಿಎಂಟಿಸಿ ಅತ್ಯುತ್ತಮ ಸೇವೆಯನ್ನು ಕೊಡುತ್ತಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ ನಮ್ಮ ಬಿಎಂಟಿಸಿ, ನಮ್ಮ ಹೆಮ್ಮೆ ಎಂದಿದ್ದಾರೆ.
ಟಿಕೆಟ್ ದರ ಇಳಿಸಲು ಮನವಿ: ಇನ್ನು ಬಿಎಂಟಿಸಿಯ ಈ ವಿಡಿಯೋಗೆ ಹಲವರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕೆಲವರು ಟಿಕೆಟ್ ದರವನ್ನು ಕಡಿಮೆ ಮಾಡಿ ಅಂತ ಮನವಿ ಮಾಡಿದ್ದರೆ. ಇನ್ನೂ ಕೆಲವರು ಹೊಸ ಮಾರ್ಗಗಳಲ್ಲಿ ಬಸ್ ಸೇವೆ ಕಲ್ಪಿಸಿ ಅಂತಲೂ ಮನವಿ ಮಾಡಿದ್ದಾರೆ.












Click it and Unblock the Notifications